ಏಕದಿನ ನಾಯಕತ್ವದಿಂದ ಕೆಳಗಿಳೀತಾರಾ ಕೊಹ್ಲಿ?

ಡಿಜಿಟಲ್ ಕನ್ನಡ ಟೀಮ್:

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ನಲ್ಲಿ ಮುಗ್ಗರಿಸಿ ಹೊರನಡೆದ ಟೀಂ ಇಂಡಿಯಾದಲ್ಲಿ ಕೆಲವು ಬದಲಾವಣೆ ಮಾಡಲು ಬಿಸಿಸಿಐ ಆಡಳಿತ ಮಂಡಳಿ ನಿರ್ಧರಿಸಿದೆ. ಇದರ ಭಾಗವಾಗಿ ಏಕದಿನ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿಗೆ ಬಿಡುಗಡೆಗೊಳಿಸಲು ಮಂಡಳಿ ಚಿಂತಿಸಿದೆ.

2023ರ ಏಕದಿನ ವಿಶ್ವಕಪ್ ಭಾರತದಲ್ಲೇ ನಡೆಯಲಿರುವುದರಿಂದ ತಂಡವನ್ನು ಕಟ್ಟಲು ಈಗಿನಿಂದಲೇ ತಯಾರಿ ನಡೆಸಲು ತೀರ್ಮಾನಿಸಿದ್ದು, ನಾಯಕತ್ವ ಹಂಚಿಕೆ ಕುರಿತ ಚರ್ಚೆ ಸದ್ಯ ಬಿಸಿಸಿಐನಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಸದ್ಯ ಟೆಸ್ಟ್, ಏಕದಿನ ಹಾಗೂ ಟಿ20 ಮಾದರಿಗೆ ವಿರಾಟ್ ಕೊಹ್ಲಿ ನಾಯಕತ್ವವಿದೆ. ಈಗ ಏಕದಿನ ನಾಯಕತ್ವವನ್ನು ಉಪ ನಾಯಕ ರೋಹಿತ್ ಶರ್ಮಾ ಹೆಗಲಿಗೆ ವಹಿಸಿ ಕೊಹ್ಲಿ ಅವರನ್ನು ಟೆಸ್ಟ್ ಹಾಗೂ ಟಿ20 ಮಾದರಿಯಲ್ಲಿ ನಾಯಕರಾಗಿ ಮುಂದುವರಿಸುವ ಬಗ್ಗೆ ಚರ್ಚೆಯಾಗುತ್ತಿದೆ.

ಪ್ರಸ್ತುತ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿರುವ ಇಂಗ್ಲೆಂಡ್ ಇದೇ ಸೂತ್ರ ಅಳವಡಿಸಿಕೊಂಡಿತ್ತು. ಟೆಸ್ಟ್ ತಂಡಕ್ಕೆ ಜೋ ರೂಟ್ ನಾಯಕರಾದರೆ, ಇಯಾನ್ ಮೊರ್ಗನ್ ಏಕದಿನ ತಂಡದ ಸಾರಥ್ಯ ವಹಿಸಿದ್ದರು. ಇನ್ನು ಐಪಿಎಲ್ ನಿಂದಲೂ ವಿರಾಟ್ ಕೊಹ್ಲಿ ನಾಯಕತ್ವದ ಮೇಲೆ ಪದೇ ಪದೇ ಪ್ರಶ್ನೆಗಳು ಉದ್ಭವಿಸುತ್ತಲೇ ಇದ್ದು, ಐಪಿಎಲ್ ನಲ್ಲಿ ನಾಯಕರಾಗಿ ರೋಹಿತ್ ಶರ್ಮಾ ಸಾಧನೆ ಹೆಚ್ಚಾಗಿದೆ. ಹೀಗಾಗಿ ಇವರಿಬ್ಬರ ನಡುವಣ ನಾಯಕತ್ವದ ಗುಣವನ್ನು ಆಗಾಗ್ಗೆ ಹೋಲಿಕೆ ಮಾಡಲಾಗುತ್ತಿದೆ.

ಈಗ ವಿಶ್ವಕಪ್ ಸೋಲಿನ ಬೆನ್ನಲ್ಲೇ ತಂಡದ ನಾಯಕತ್ವದ ಜವಾಬ್ದಾರಿ ಬಗ್ಗೆ ಪ್ರಶ್ನೆಗಳು ಎದ್ದಿರುವುದರಿಂದ ಬಿಸಿಸಿಐ ಚಿಂತನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಯಾವ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂಬುದನ್ನು ನೋಡಬೇಕು.

Leave a Reply