ಸುಪ್ರೀಂನಲ್ಲಿ ಮುಗಿತು ಮ್ಯಾರಥಾನ್ ವಿಚಾರಣೆ! ನೀವು ಗಮನಿಸಲೇಬೇಕು ವಾದ ಪ್ರತಿವಾದ ಈ ಅಂಶಗಳು

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸರ್ಕಾರ ಕತ್ತಿಯ ಮೇಲಿನ ನಡಿಗೆಯಲ್ಲಿದ್ದು, ನಾಳೆ ಸುಪ್ರೀಂ ಕೋರ್ಟ್ ತೀರ್ಪು ಇದಕ್ಕೆ ಒಂದು ಸ್ಪಷ್ಟ ಚಿತ್ರಣ ನೀಡಲಿದೆ.

ಮಂಗಳವಾರ ತನ್ನ ವಿಚಾರಣೆ ಮುಂದುವರಿಸಿದ ನ್ಯಾಯಾಲಯ ಸುಮಾರು 4 ಗಂಟೆಗಳ ಕಾಲ ವಾದ ಪ್ರತಿವಾದ ಆಲಿಸಿತು. ಈ ವೇಳೆ ಕೆಲವು ಅಂಶಗಳು ಕೋರ್ಟ್ ಈ ಪ್ರಕರಣವನ್ನು ಯಾವ ದೃಷ್ಟಿಕೋನದಲ್ಲಿ ನೋಡಬಹುದು ಎಂಬ ಕುತೂಹಲ ಮೂಡಿಸಿದೆ. ಅವುಗಳೆಂದರೆ…

  • ವಿಧಾನಸಭಾ ಅಧ್ಯಕ್ಷರಿಗೆ ಸಂವಿಧಾನದಲ್ಲಿ ಕೆಲವು ವಿವೇಚನಾಧಿಕಾರ ಇದೆ. ಅವರ ಅಧಿಕಾರವನ್ನು ನಾವು ಪ್ರಶ್ನೆ ಮಾಡೋದಕ್ಕೆ ಸಾಧ್ಯವಿಲ್ಲ ಅನ್ನೋ ಅಭಿಪ್ರಾಯವನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವ್ಯಕ್ತ ಪಡಿಸಿದರು.
  • ಶಾಸಕರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಸರ್ವ ಸ್ವತಂತ್ರರು. ಅದನ್ನು ವಿಳಂಬ ಮಾಡುವ ಮೂಲಕ ಸ್ಪೀಕರ್ ಅವರು ಮೂಲಭೂತ ಹಕ್ಕಿನ ಉಲ್ಲಂಘನೆ ಮಾಡಿದ್ದಾರೆ. ರಾಜೀನಾಮೆ ನೀಡಿರುವ ಶಾಸಕರ ರಾಜೀನಾಮೆ ಅಂಗೀಕಾರ ಆದರೆ ಈ ಸರ್ಕಾರ ಅಸ್ತಿತ್ವದಲ್ಲಿ ಇರೋದಿಲ. ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದ್ದು, ಸ್ಪೀಕರ್ ಮೂಲಕ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ ಎಂದು ರಾಜೀನಾಮೆ ನೀಡಿರುವ ಶಾಸಕರ ಪರ ವಕೀಲ ಮುಕುಲ್ ರೋಹಟಗಿ ವಾದ.
  • 2018ರಲ್ಲಿ ನ್ಯಾ. ಸಿಕ್ರಿ ಅವರ ಆದೇಶದ ವೇಳೆ ಸರ್ಕಾರವೂ ಇರಲಿಲ್ಲ, ಸ್ಪೀಕರ್​ ಕೂಡ ಇರಲಿಲ್ಲ, ಹಂಗಾಮಿ ಸ್ಪೀಕರ್​ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದರು
    ಈಗಾಗಿ ಆ ತೀರ್ಪು ನೀಡಲಾಗಿತ್ತು. ಆದರೆ ಈಗ ಸ್ಪೀಕರ್​ಗೆ ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶವಿದೆ. 2018ರ ಪ್ರಕರಣವನ್ನು ತಾಳೆ ಹಾಕುವುದು ಸರಿಯಲ್ಲ ಎಂದು ಸ್ಪೀಕರ್ ಪರ ವಕೀಲ ಅಭಿಷೇಕ್​ ಮನು ಸಿಂಘ್ವಿ ವಾದ.
  • ರಾಜೀನಾಮೆ ನೀಡಿರುವ ಶಾಸಕರ ಉದ್ದೇಶ ಸ್ಪಷ್ಟವಾಗಿದ್ದು, ರಾಜೀನಾಮೆ ಅಂಗೀಕಾರವಾದ ಬಳಿಕ ಪಕ್ಷಾಂತರ ಮಾಡೋದು ಹಾಗೂ ಮಂತ್ರಿಗಳಾಗಿ ಅಧಿಕಾರ ಹಿಡಿಯುವುದು ಆಗಿದೆ. ಶಾಸಕರ ಈ ಉದ್ದೇಶವನ್ನು ಸ್ಪೀಕರ್​ ಪರಿಶೀಲನೆ ಮಾಡಬೇಕಿದೆ. ಇದೊಂದು ಸಾಮೂಹಿಕ ರಾಜೀನಾಮೆ ಪ್ರಕರಣ. ವೈಯಕ್ತಿಕ ರಾಜೀನಾಮೆಯೇ ಬೇರೆ. ಸಾಮೂಹಿಕ ರಾಜೀನಾಮೆಯೇ ಬೇರೆ. ಎರಡನ್ನೂ ಸ್ಪೀಕರ್ ಅವರು ಪ್ರತ್ಯೇಕವಾಗಿ ನೋಡಬೇಕು ಎಂದು ಸಿಎಂ ಪರ ವಕೀಲ ರಾಜೀವ್ ಧವನ್​ ಕೋರ್ಟ್‌ಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದರು.
  • ಸ್ಪೀಕರ್​ ಭೇಟಿಗೆ ಅವಕಾಶವಿದ್ದರೂ ಎಲ್ಲಾ ಶಾಸಕರು ಮುಂಬೈಗೆ ಹಾರಿದರು. ರಾಜೀನಾಮೆ ಬಳಿಕ ಬೇರೆ ಸರ್ಕಾರದಲ್ಲಿ ಮಂತ್ರಿ ಆಗುವ ಉದ್ದೇಶ ಇವರದ್ದು. ಇನ್ನು ಸ್ಪೀಕರ್​ ಕಾರ್ಯವ್ಯಾಪ್ತಿಯಲ್ಲಿ ಮಧ್ಯಪ್ರವೇಶ ಅವಕಾಶವಿಲ್ಲ ಹಾಗಾಗಿ ಕಳೆದ ವಾರ ನೀಡಿದ್ದ ತೀರ್ಪು ವ್ಯಾಪ್ತಿ ಮೀರಿದ್ದು ಎಂದ ರಾಜೀವ್​ ಧವನ್.

ಇದೀಗ ಸುಪ್ರೀಂಕೋರ್ಟ್‌ನಲ್ಲಿ ವಾದ – ಪ್ರತಿವಾದ ಮುಕ್ತಾಯವಾಗಿದೆ. ಇಬ್ಬರ ವಾದ ಪ್ರತಿವಾದವೂ ಸಮಯೋಚಿತವಾಗಿದೆ ಎಂದಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಗೊಗೋಯ್, ಇಬ್ಬರೂ ಕೂಡ ಒಂದೊಂದು ರೀತಿ ವ್ಯಾಖ್ಯಾನ ಮಾಡ್ತಿದ್ದೀರಿ
ಇದೊಂದು ರೀತಿ ಪಾಲಿಟಿಕಲ್​ ಗೇಮ್​ ಎನಿಸುತ್ತಿದೆ. ಎರಡೂ ವ್ಯಾಖ್ಯಾನಗಳನ್ನು ಸರಿದೂಗಿಸಬೇಕಿದೆ ಎಂದು ಸಿಜೆಐ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ನಾಳೆ ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟ ಮಾಡ್ತೇವೆ ಎಂದೂ ಸುಪ್ರೀಂಕೋರ್ಟ್ ತಿಳಿಸಿದೆ.

Leave a Reply