ದೋಸ್ತಿಗಳು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬಹುದು! ಹೇಗೆ ಅಂತೀರಾ?

ಡಿಜಿಟಲ್ ಕನ್ನಡ ಟೀಮ್:

ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಉದ್ದೇಶದೊಂದಿಗೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರ ಈಗ ಪತನದ ಅಂಚಿನಲ್ಲಿದೆ. ಇದೇ ವೇಳೆ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ.

ಆದ್ರೆ ದೋಸ್ತಿಗಳು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಅವಕಾಶ ಹೊಂದಿದೆ. ಅದೇನೆಂದರೆ ನಾಳಿನ ವಿಶ್ವಾಸಮತ ಯಾಚನೆ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಸಾಮೂಹಿಕ ರಾಜೀನಾಮೆ ನೀಡುವುದು!

ರಾಜ್ಯದಲ್ಲಿ 15 ಮಂದಿ ಕಾಂಗ್ರೆಸ್, ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದ್ದು, ಸುಪ್ರೀಂಕೋರ್ಟ್ ಕೂಡ ಅತೃಪ್ತರು ಸದನಕ್ಕೆ ಹಾಜರಾಗಬೇಕು ಎಂಬ ಒತ್ತಡ ಹೇರಬಾರದು ಎಂದು ಸೂಚನೆ ಕೊಟ್ಟಿದೆ. ಹೀಗಾಗಿ ನಾಳೆ ನಡೆಯುವ ಸ್ವಯಂ ಪ್ರೇರಿತ ವಿಶ್ವಾಸ ಮತ ಯಾಚನೆ ವೇಳೆ ಸರ್ಕಾರಕ್ಕೆ ಬೆಂಬಲ ಸಿಗುವುದು ಕಷ್ಟ ಸಾಧ್ಯ.

ವಿಪ್ ಜಾರಿ ಮಾಡಿದರೂ ಸುಪ್ರೀಂ ಕೋರ್ಟ್ ಆದೇಶವನ್ನು ಬಳಸಿಕೊಂಡು ಅತೃಪ್ತರು ಕಾನೂನಿನ ಕುಣಿಕೆಯಿಂದ ಬಚಾವ್ ಅಗಲಿದ್ದಾರೆ. ಒಂದು ವೇಳೆ ವಿಪ್ ಬಗ್ಗೆ ಸುಪ್ರೀಂಕೋರ್ಟ್ ಏನನ್ನೂ ಹೇಳದೇ ಹೋಗಿದ್ದರೆ, ವಿಪ್ ಉಲ್ಲಂಘನೆ ಆರೋಪಕ್ಕೆ ಒಳಗಾಗುವ ಜೊತೆ ಅನರ್ಹತೆ ಭೀತಿ ಎದುರಾಗುತ್ತಿತ್ತು. ಇದೇ ಕಾರಣಕ್ಕಾಗಿ ಅನಿವಾರ್ಯವಾಗಿ ಹಾಜರಾಗಬೇಕಾದ ಸನ್ನಿವೇಶ ಎದುರಾಗುತ್ತಿತ್ತು. ಆದ್ರೀಗ ಸುಪ್ರೀಂ ತೀರ್ಪಿನ ಬಳಿಕ ಪರಿಸ್ಥಿತಿ ಬದಲಾಗಿದೆ. ಹಾಜರಾಗುವ ಸಾಧ್ಯತೆ ತೀರ ಕಡಿಮೆ ಇದ್ದು, ಮೈತ್ರಿ ಸರ್ಕಾರ ಪತನ ಬಹುತೇಕ ಖಚಿತ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಬಿಜೆಪಿಗೆ ಅಧಿಕಾರ ಸಿಗಬಾರದು ಅನ್ನೋ ಕಾರಣಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್‌ ಮೈತ್ರಿ ಸರ್ಕಾರ ರಚನೆ ಮಾಡುವ ಮೂಲಕ ಸಡ್ಡು ಹೊಡೆದಿತ್ತು. ಆದರೆ ಬಹುಮತವೇ ಇಲ್ಲದೆ ಇದ್ದಾಗ ಸರ್ಕಾರ ವಿಧಾನಸಭೆಯನ್ನು ವಿಸರ್ಜನೆ ಮಾಡುವ ಅವಕಾಶವೂ ಇರಲ್ಲ. ಹಾಗಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರೋದು ಗ್ಯಾರಂಟಿ ಎನ್ನಲಾಗ್ತಿದೆ. ಅಂತಿಮವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರದಂತೆ ತಡೆಯಲು ಒಂದು ಮಾರ್ಗ ಮೈತ್ರಿ ನಾಯಕರಿಗೆ ಕಾಣಿಸಿದೆ ಅನ್ನೋ ಮಾಹಿತಿ ಸಿಗುತ್ತಿದೆ.

ಇದೀಗ ಪಕ್ಷದಿಂದ ರಾಜೀನಾಮೆ ಕೊಟ್ಟಿರುವ ಶಾಸಕರು ಅಧಿಕಾರದ ಆಸೆಗೆ ರಾಜೀನಾಮೆ ನೀಡಿದ್ದು, ಅವರಿಗೆ ಮುಂದೆಯೂ ಅಧಿಕಾರ ಸಿಗದಂತೆ ಮಾಡಬೇಕು. ಹಾಗಾಗಿ ಇಂದು ಸಂಜೆಯೊಳಗೆ‌ ಸ್ಪೀಕರ್ ಎಲ್ಲಾ ರಾಜೀನಾಮೆಯನ್ನು ಅಂಗೀಕಾರ ಮಾಡುವುದು. ಬಳಿಕ ನಾಳೆ ವಿಧಾನಸಭಾ ಅಧಿವೇಶನದಲ್ಲಿ ಭಾಗಿಯಾಗಿ ವಿಶ್ವಾಸ ಮತಯಾಚನೆ ಮೇಲೆ ಚರ್ಚೆ ನಡೆಸುವುದು. ಸರ್ಕಾರದ ಉದ್ದೇಶ ಹಾಗೂ ಬಿಜೆಪಿ ನಾಯಕರು ಮಾಡಿದ ಪಿತೂರಿ ಬಗ್ಗೆ ಸವಿಸ್ತಾರವಾಗಿ ಚರ್ಚೆ ನಡೆಸಿ, ರಾಜ್ಯದ ಜನರ ಎದುರಿಗೆ ಕುದುರೆ ವ್ಯಾಪಾರವನ್ನು ಬಯಲು ಮಾಡುವುದು. ಅಂತಿಮವಾಗಿ ಕಾಂಗ್ರೆಸ್ ಜೆಡಿಎಸ್‌ನ ಎಲ್ಲಾ ಶಾಸಕರು ರಾಜೀನಾಮೆ ನೀಡಿದರೆ ವಿಧಾನಸಭೆಯ ಶೇಕಡ 50ರಷ್ಟು ಶಾಸಕರು ಇಲ್ಲವಾದರೂ ವಿಧಾನಸಭೆ ಅಮಾನತಿಗೆ ಹೋಗುತ್ತೆ. ಅನಿವಾರ್ಯವಾಗಿ ಮತ್ತೊಮ್ಮೆ ವಿಧಾನಸಭೆ ಚುನಾವಣೆ ನಡೆಯಲಿದೆ. ಅಂದರೆ ವಿಧಾನಸಭೆ‌ ವಿಸರ್ಜನೆ ಆದಂತೆಯೇ‌ ಎನ್ನುವುದು ರಾಜಕೀಯ ಲೆಕ್ಕಾಚಾರವಾಗಿದೆ. ಈ ಅಸ್ತ್ರ ಪ್ರಯೋಗವಾದರೆ ಬಿಜೆಪಿ ಸರ್ಕಾರ ರಚನೆ ಕಷ್ಟ ಕಷ್ಟ.

Leave a Reply