ಕಲಾಪದಲ್ಲಿ ಕುದುರೆ ವ್ಯಾಪಾರಾದ ಚರ್ಚೆ! ಸದನದಲ್ಲಿ ಬಿಜೆಪಿ ತುಟಿಕ್ ಪಿಟಿಕ್ ಅನ್ನಲಿಲ್ಲ ಯಾಕೆ?

Assembly session on Cauvery issue at Vidhan Soudha in Bengaluru on Friday.

ಡಿಜಿಟಲ್ ಕನ್ನಡ ಟೀಮ್:

ವಿಧಾನಸಭೆ ಅಧಿವೇಶನದ ಶುಕ್ರವಾರದ ಕಲಾಪದಲ್ಲಿ ಶಾಸಕರನ್ನು ಕುದುರೆ ವ್ಯಾಪಾರ ರೀತಿ ಖರೀದಿ ಮಾಡುವ ಪ್ರಯತ್ನದ ಬಗ್ಗೆ ಬಿಸಿ ಬಿಸಿ ಚರ್ಚೆ ನಡೀತು. ಆದ್ರೆ ಈ ವಿಚಾರದಲ್ಲಿ ಆಡಳಿತ ಪಕ್ಷದ ನಾಯಕರ ಆರೋಪಗಳನ್ನು ಕೇಳಿಯೂ ಬಿಜೆಪಿ ಬಾಯಿ ಬಿಡದೆ ಮೌನಕ್ಕೆ ಶರಣಾಗಿದ್ದು ಅಚ್ಚರಿ ಮೂಡಿಸಿತು.

ವಿಶ್ವಾಸಮತ ಯಾಚನೆ ಕುರಿತ ಚರ್ಚೆಯಲ್ಲಿ ಸಿಎಂ ಕುಮಾರಸ್ವಾಮಿ ಅವರು ತಮ್ಮ ಭಾಷಣ ಮುಂದುವರಿಸಿದರು. ಸುದೀರ್ಘ ಗಂಟೆಗಳ ಕಾಲ ತಮ್ಮ ರಾಜಕೀಯ ಜೀವನದ ಸವಾಲುಗಳನ್ನು ಮೆಲುಕು ಹಾಕಿ ತಾವು ಅಧಿಕಾರಕ್ಕೆ ಅಂಟಿ ಕೂರಲ್ಲ ಎಂದು ಸ್ಪಷ್ಟನೆ ನೀಡಿದರು. ಈ ವೇಳೆ ಆಪರೇಷನ್ ಕಮಲದ ಮೂಲಕ ಶಾಸಕರ ಖರೀದಿ ವಿಚಾರವಾಗಿ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ಹಾಗೂ ಸಾರಾ ಮಹೇಶ್ ಮಾತನಾಡಿ ಬಿಜೆಪಿ ನಾಯಕರು ಹಾಗೂ ರಾಜೀನಾಮೆ ನೀಡಿ ಮುಂಬೈನಲ್ಲಿ ಕೂತಿರುವ ಎಚ್.ವಿಶ್ವನಾಥ್ ವಿರುದ್ಧ ಆರೋಪ ಮಾಡಿದರು.

ಶ್ರೀನಿವಾಸ ಗೌಡ ಅವರು ಮಾತನಾಡಿ, ಮುಖ್ಯಮಂತ್ರಿಗಳೇ ನಮಗೂ 5 ಕೋಟಿ ತಂದು ಕೊಟ್ಟಿದ್ದರು. ಆದರೆ ನಾನು ಅದನ್ನು ಅವರಿಗೆ ಹಿಂದಿರುಗಿಸಿ ಅವರ ಆಫರ್ ಅನ್ನು ತಿರಸ್ಕರಿಸಿದೆ ಎಂದರು.

ಈ ವೇಳೆ ಮಾತನಾಡಿದ ಸ್ಪೀಕರ್, ಇಂದು ನಾನು ಏನೇನು ಮಾತನಾಡುತ್ತೀರೋ ಅವೆಲ್ಲವನ್ನು ದಾಖಲಿಸಿಕೊಳ್ಳಲು ಅವಕಾಶ ನೀಡುತ್ತೇನೆ. ಕಾರಣ ನಮ್ಮ ವ್ಯವಸ್ಥೆ ಎಷ್ಟು ಕೀಳು ಮಟ್ಟಕ್ಕೆ ಬಂದಿದೆ ಎಂಬುದು ಎಲ್ಲರಿಗೂ ಗೊತ್ತಾಗಲಿ. ನೀವು ಅವರ ಬಣ್ಣ ಬಯಲು ಮಾಡಿ, ಅವರು ನಿಮ್ಮ ಬಣ್ಣ ಬಯಲು ಮಾಡಿ. ಎಲ್ಲವೂ ಇವತ್ತು ಜನರ ಮುಂದೆ ಬಂದು ಜನರೇ ಈ ಬಗ್ಗೆ ತೀರ್ಮಾನ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಈ ವೇಳೆ ಕಾಂಗ್ರೆಸ್ ನಾಯಕರು ತಮಗೆ ಯಾರು ಹಣ ಕೊಟ್ಟರು ಎಂದು ಹೆಸರು ಹೇಳಲು ಆಗ್ರಹಿಸಿದರು. ಆಗ ಮಾತನಾಡಿದ ಶ್ರೀನಿವಾಸ ಗೌಡ, ‘ನನ್ನ ಮನೆಗೆ ಮಾಜಿ ಶಾಸಕ ಯೋಗೇಶ್ವರ್, ಅಶ್ವಥ್ ನಾರಾಯಣ್, ಎಸ್.ಆರ್ ವಿಶ್ವನಾಥ್ ಅವರು ನಮ್ಮ ಮನೆಗೆ ಬಂದು 5 ಕೋಟಿ ಹಣ ಕೊಟ್ಟರು. ನಾನು ಬಿಜೆಪಿ ಸೇರುವ ಪರಿಸ್ಥಿತಿಯಲ್ಲಿಲ್ಲ ಎಂದು ಹೇಳಿ ವಾಪಸ್ ನೀಡಿದೆ ಎಂದು ತಿಳಿಸಿದರು.

ಇನ್ನು ಸಾರಾ ಮಹೇಶ್ ಮಾತನಾಡಿ, ಜೆಡಿಎಸ್ ಮಾಜಿ ಅಧ್ಯಕ್ಷ ವಿಶ್ವನಾಥ್ ಅವರು ನನ್ನ ತೋಟದ ಮನೆಗೆ ಬಂದಿದ್ದರು. ಆಗ ಅವರು ಚುನಾವಣೆಗೆ ಮಾಡಿದ ಸಾಲ ತೀರಿಸಬೇಕು ಎಂದರು. ಇನ್ನು ಬಿಜೆಪಿ ಅವರು 28 ಕೋಟಿ ಕೊಡುವುದಾಗಿ ಆಫರ್ ನೀಡಿದ್ದಾರೆ ಎಂದು ಹೇಳಿದ್ದರು. ಬಿಜೆಪಿಯಿಂದ ಹಣ ಪಡೆಯಲು ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಆರೋಪಿಸಿದರು.

ಇಷ್ಟೆಲ್ಲ ಆರೋಪ ಕೇಳಿ ಬಂದರೂ ಬಿಜೆಪಿ ನಾಯಕರು ಮಾತ್ರ ಕಲಾಪದ ವೇಳೆ ಬಾಯಿ ಬಿಡದೆ ಮಂದಹಾಸ ಬೀರಿದರು. ಇದಕ್ಕೆ ಪ್ರಮುಖ ಕಾರಣ ವಿಶ್ವಾಸಮತ ಯಾಚನೆ ಚರ್ಚೆ ನಡೆಯುವಾಗ ಗದ್ದಲಕ್ಕೆ ಅವಕಾಶ ನೀಡಬಾರದು ಎಂಬ ತಂತ್ರಗಾರಿಕೆಗೆ ಮುಂದಾದರು.

ನಂತರ ಕಲಾಪ ಮುಂದೂಡಿದ ನಂತರ ಬಿಜೆಪಿ ನಾಯಕ ಅಶ್ವಥ್ ನಾರಾಯಣ್ ಹಾಗೂ ವಿಶ್ವನಾಥ್ ಅವರು ಸ್ಪೀಕರ್ ಭೇಟಿ ಮಾಡಿ ಹಕ್ಕುಚ್ಯುತಿ ಮಂಡನೆ ಮಾಡುತ್ತಾರೆ ಹಾಗೂ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹಾಕಲು ತೀರ್ಮಾನಿಸಿದ್ದಾರೆ ಎಂಬ ವರದಿ ಬಂದಿವೆ.

Leave a Reply