ರಾಜ್ಯಪಾಲರ ಆದೇಶ ಪಾಲಿಸಲೇ ಬೇಕಾ..?

ಡಿಜಿಟಲ್ ಕನ್ನಡ ಟೀಮ್:

ರಾಜ್ಯಪಾಲರು ಶೀಘ್ರದಲ್ಲೇ ವಿಶ್ವಾಸಮತ ಯಾಚನೆ ಮಾಡಿ ಎಂದು ಇಂದು ಮಧ್ಯಾಹ್ನ 1.30 ರೊಳಗೆ ಸಮಯ ನಿಗದಿ ಮಾಡಿತ್ತು. ನಿನ್ನೆ ಕೂಡ ಈ ದಿನದ ಅಂತ್ಯದೊಳಗೆ ಅಂದರೆ ದಿನಾಂಕ 18 ತಾರೀಕು ಮುಕ್ತಾಯವಾಗುವ ಒಳಗೆ ಬಹುತ ಸಾಬೀತು ಮಾಡಬೇಕು ಎನ್ನುವ ಸಂದೇಶವನ್ನು ರವಾನಿಸಿದ್ರು. ಆದ್ರೆ ಸದನದ ಮೇಲೆ ಸವಾರಿ ಮಾಡುವ ಅಧಿಕಾರ ರಾಜ್ಯಪಾಲರಿಗೂ ಇಲ್ಲ ಎನ್ನುವ ಕಾರಣ ಹೇಳಿದ ಸದಸ್ಯರು, ರಾಜ್ಯಪಾಲರು ಕಾನೂನು ವ್ಯಾಪ್ತಿ ಮೀರಿ ನಡೆದುಕೊಳ್ಳಬಾರದು ಎನ್ನುವ ಮನವಿಯನ್ನೂ ಸದನದಲ್ಲೇ ರಾಜ್ಯಪಾಲರಿಗೆ ಮಾಡಿದ್ರು. ಅಂತಿಮವಾಗಿ ರಾಜ್ಯಪಾಲರ ಸೂಚನೆಯನ್ನು ಕಡೆಗಣಿಸಲಾಯ್ತು. ಆದ್ರೆ ರಾಜ್ಯಪಾಲರು ಮತ್ತೊಂದು ಪತ್ರವನ್ನು ಸಿಎಂ ಕುಮಾರಸ್ವಾಮಿ ಅವರಿಗೆ ರವಾನೆ ಮಾಡಿದ್ದು, 19ರ ಮಧ್ಯಾಹ್ನ 1.30 ರ‌ ಒಳಗೆ ವಿಶ್ವಾಸಮತ ಯಾಚನೆ ಮಾಡಬೇಕು ಅನ್ನೋ ಸೂಚನೆ ಕೊಟ್ಟಿದ್ದರು ಅದನ್ನು ಕೂಡ ಇಂದು ಪಾಲನೆ ಮಾಡಲಾಗಲಿಲ್ಲ.

ಅಧಿವೇಶನ ನಡೆಯುವಾಗ ಸದನದ ಮೇಲೆ ಸವಾರಿ‌ ಮಾಡುವ ಅವಕಾಶ ರಾಜ್ಯಪಾಲರಿಗೆ ಇಲ್ಲ ಅನ್ನೋ ಕಾನೂನು ಬಳಸಿ ನಿನ್ನೆ ವಿಶ್ವಾಸಮತ ಯಾಚನೆ ಮಾಡಲಿಲ್ಲ. ಆದ್ರೀಗ ಸಭಾನಾಯಕ‌ನಾದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೇ ಸೂಚನೆ ಕೊಟ್ಟಿರೋದ್ರಿಂದ ಈಗೇನು ಮಾಡ್ತಾರೆ ಅನ್ನೋ ಕುತೂಹಲ ಮೂಡಿಸಿತ್ತು. ಒಂದು ವೇಳೆ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಮಾಡಿದ್ರೆ, ಸರ್ಕಾರ ಬಿದ್ದುಹೋಗುವ ಸಾಧ್ಯತೆ ಇದೆ. ಒಂದು ವೇಳೆ ರಾಜ್ಯಪಾಲರ ಆದೇಶ ಪಾಲಿಸದೆ ವ್ಯತಿರಿಕ್ತವಾಗಿ ನಡೆದುಕೊಂಡರೆ ಸಂವಿಧಾನದ ಮುಖ್ಯಸ್ಥರ ಸ್ಥಾನದಲ್ಲಿರುವ ರಾಜ್ಯಪಾಲರ ಆದೇಶ ಉಲ್ಲಂಘಿಸಿದರೂ ಕಾನೂನು ಬಿಕ್ಕಟ್ಟು ಎದುರಾಗುವ ಸಂಭವವಿದೆ. ಮುಂದೇನು ಮಾಡುವುದು ಅನ್ನೋ ಸಂಕಷ್ಟಕ್ಕೆ‌ ದೋಸ್ತಿ ಸರ್ಕಾರ ಸಿಲುಕಿದೆ. ಇನ್ನೊಂದು ಕಡೆ ವಿಧಾನಸೌಧದಲ್ಲೇ ಬಿಜೆಪಿ‌ ಶಾಸಕರು ಮೊಕ್ಕಾಂ ಹೂಡಿರೋದು ಕೂಡ ರಾಜ್ಯಪಾಲರ ಒತ್ತಡಕ್ಕೆ ಕಾರಣವಾಗಲಿದೆ. ಇಂದೂ ಕೂಡ ರಾಜ್ಯಪಾಲರ ಆದೇಶ ಹಳ್ಳ ಹಿಡಿದರೆ. ರಾಜ್ಯದಲ್ಲಿ ನಡೆಯುತ್ತಿರುವ ಸಂಪೂರ್ಣ ವರದಿಯನ್ನು ಕೇಂದ್ರ ಗೃಹ ಇಲಾಖೆಗೆ ರವಾನಿಸಲಾಗುತ್ತದೆ ಎನ್ನುವ ಸುಳಿವು ಸಿಕ್ಕಿದೆ ಎನ್ನಲಾಗಿದೆ.

ಈ ವಿಚಾರವಾಗಿ ಸಚಿವ ಕೃಷ್ಣಭೈರೆ ಗೌಡ ಅವರು ಮಾತನಾಡಿ ಈಗಾಗಲೇ ಮುಖ್ಯಮಂತ್ರಿಗಳು ಸ್ವಯಂ ಪ್ರೇರಣೆಯಿಂದ ವಿಶ್ವಾಸಮತ ಯಾಚನೆಗೆ ಮುಂದಾಗಿದ್ದು, ಇದು ಸದನದ ವಿಚಾರವಾಗಿದೆ. ಈ ಸಂದರ್ಭದಲ್ಲಿ ಸ್ಪೀಕರ್ ಅವರು ಸಂಪೂರ್ಣ ಅಧಿಕಾರ ಹೊಂದಿದ್ದು, ಸ್ಪೀಕರ್ ಅವರು ಸದನ ಸದಸ್ಯರ ಅಭಿಪ್ರಾಯ ಕೇಳದೆ ಮತಕ್ಕೆ ಹಾಕಲು ಸಾಧ್ಯವಿಲ್ಲ. ಹಾಗೇ ಮಾಡಿದರೆ ಸದಸ್ಯರ ಹಕ್ಕು ಉಲ್ಲಂಘನೆ ಆಗಲಿದೆ ಎಂದರು. ಅಲ್ಲದೆ ಎಸ್.ಆರ್ ಬೊಮ್ಮಾಯಿ ಹಾಗೂ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠದ ಆದೇಶವನ್ನು ಓದಿ ರಾಜ್ಯಪಾಲರು ನಿರ್ದೇಶನ ನೀಡುವ ವ್ಯಾಪ್ತಿಯನ್ನು ವಿವರಿಸಿದರು.

ದೋಸ್ತಿ ಸರ್ಕಾರದ ಮುಂದಿರುವ ಆಯ್ಕೆಗಳು!

*ಸುಪ್ರೀಂಕೋರ್ಟ್‌ಗೆ ಸ್ಪೀಕರ್ ಮೂಲಕವೇ ಮೇಲ್ಮನವಿ ಹೋಗುವಂತೆ ಮಾಡುವುದು.
*ಸ್ಪಷ್ಟನೆ ಕೋರಿ ಸ್ಪೀಕರ್ ಮೇಲ್ಮನವಿ ಹೋದಾಗ ತುರ್ತು ವಿಚಾರಣೆ ಸಾಧ್ಯ.
* ಕಾಂಗ್ರೆಸ್ ಪಕ್ಷ ಕೂಡ ಪ್ರತ್ಯೇಕ ಅರ್ಜಿ ಸಲ್ಲಿಕೆ ಮಾಡುವ ಮೂಲಕ ತಕರಾರು ಅರ್ಜಿ ಸಲ್ಲಿಸಬಹುದು
* ಸಿಎಂ ಕುಮಾರಸ್ವಾಮಿ ಕೂಡ ಸುಪ್ರೀಂ ತೀರ್ಪಿನ ನಂತರ ಸದನದಲ್ಲಿ ಯಾವೆಲ್ಲಾ ವಿಚಾರ ಚರ್ಚೆ ಆಯ್ತು ಅನ್ನೋದನ್ನು ತಿಳಿಸುವ ಜೊತೆಗೆ ಸ್ಪಷ್ಟನೆ ಕೋರಬಹುದು.
* ಶೀಘ್ರವಾಗಿ ಅರ್ಜಿ ವಿಲೇವಾರಿ ಮಾಡುವ ಮೂಲಕ ಸಾಂವಿಧಾನಿಕ ಬಿಕ್ಕಟ್ಟು ಎದುರಾಗದಂತೆ ನೋಡಿಕೊಳ್ಳಲು ಮನವಿ ಮಾಡಬಹುದು.
* ರಾಜ್ಯಪಾಲರನ್ನೇ ಒಮ್ಮೆ ಸಿಎಂ ಭೇಟಿ ಮಾಡಿ ಪರಿಸ್ಥಿತಿ ಬಗ್ಗೆ ವಿವರಣೆ ಕೊಡಬಹುದು. ಸಮಯ ವಿಸ್ತರಣೆಗೆ ಮನವಿ ಮಾಡಬಹುದು.
* ಅಂತಿಮವಾಗಿ ಅತೃಪ್ತರ ಮೇಲೆ ಗಧಾಪ್ರಹಾರ ಮಾಡಿ ಉಳಿದವರು ವಾಪಸ್ ಬರುವಂತೆ ಮಾಡಬಹುದು.

ಆದ್ರೆ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಪರವಾದ ವಾತಾವರಣ ಇದೆ ಎನ್ನಲಾಗಿದ್ದು, ರಾಜ್ಯಪಾಲರು ದೋಸ್ತಿ ಸರ್ಕಾರದ ಮನವಿಗೆ ಸ್ಪಂದಿಸುವ ಸಾಧ್ಯತೆಗಳು ಕಡಿಮೆ ಎನ್ನಲಾಗ್ತಿದೆ. ಒಂದು ವೇಳೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಹೋಗಿರುವ ನೆಪದಲ್ಲಿ ವಿಧಾನಸಭೆಯನ್ನು ಸೋಮವಾರದ ತನಕ ಮುಂದೂಡಿಕೆ ಮಾಡಬಹುದು. ರಾಜ್ಯಪಾಲರು ಕಾನೂನು ಬಿಕ್ಕಟ್ಟು ಉದ್ಬವವಾಗಿದೆ ಅನ್ನೋ ವರದಿ ಸಲ್ಲಿಕೆ ಮಾಡಿದ್ರೆ ಕೇಂದ್ರ ಸರ್ಕಾರ ಅಖಾಡಕ್ಕೆ ಇಳಿಯುವ ಸಾಧ್ಯತೆ ಹೆಚ್ಚಾಗಿದ್ದು, ರಾಜ್ಯ ಸರ್ಕಾರದ ಮೇಲೆ ಮೋದಿ ಸರ್ಕಾರ ಬ್ರಹ್ಮಾಸ್ತ್ರ ಬಳಸಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಮಾಡಲು ಮುಂದಾಗುವ ಸಾಧ್ಯತೆಯೂ ಹೆಚ್ಚಾಗಿದೆ.

Leave a Reply