ಚಂದ್ರನತ್ತ ಜಿಗಿದ ಬಾಹುಬಲಿ! ಇಸ್ರೋ ಮೈಲಿಗಲ್ಲಿಗೆ ದೇಶವೇ ಸೆಲ್ಯೂಟ್!

ಡಿಜಿಟಲ್ ಕನ್ನಡ ಟೀಮ್:

ತಾಂತ್ರಿಕ ಕಾರಣಗಳಿಂದ ಜುಲೈ 15ರಿಂದ ಜುಲೈ 22ಕ್ಕೆ ಮುಂದೂಡಲ್ಪಟ್ಟಿದ್ದ ಇಸ್ರೋದ ಮಹತ್ವದ ಯೋಜನೆ ಚಂದ್ರಯಾನ-2 ಉಡ್ಡಯನ ಇಂದು ಮಧ್ಯಾಹ್ನ 2:43ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ಉಡಾವಣೆಗೊಂಡಿದೆ.

ಜಿಎಸ್ಎಲ್ ವಿ ಮಾರ್ಕ್ III ರಾಕೆಟ್ ಮೂಲಕ ಈ ಉಡಾವಣೆ ಮಾಡಲಿದೆ. ಮಧ್ಯಾಹ್ನ 1:30ರಿಂದ ಉಡಾವಣೆಗೆ ಕ್ಷಣಗಣನೆ ಆರಂಭವಾಯಿತು. ಕ್ರಯೋಜೆನಿಕ್ ಎಂಜಿನ್‌ನಲ್ಲಿ ಹೀಲಿಯಂ ಇಂಧನ ಸೋರಿಕೆ ಕಾರಣದಿಂದ ಜುಲೈ 15ರ ಉಡ್ಡಯನವನ್ನು ಮುಂದೂಡಲಾಗಿತ್ತು. ಇದೀಗ ತಾಂತ್ರಿಕ ದೋಷ ಸರಿಪಡಿಸಿ ಯಶಸ್ವಿಯಾಗಿ ಬಾಹುಬಲಿ ಉಡಾವಣೆಯಾಗಿದೆ.

ಈ ಬಾಹುಬಲಿ ದಕ್ಷಿಣ ಧ್ರುವ ತಲುಪಲಿದ್ದು, ಚಂದ್ರನಲ್ಲಿ ಹಿಮ ಹಾಗೂ ನೀರಿನ ಇರುವಿಕೆಯನ್ನು ಖಚಿತಪಡಿಸಲಿದ್ದು, ಈ ಭಾಗಕ್ಕೆ ತಲುಪುತ್ತಿರುವ ಮೊದಲ ದೇಶ ಎಂಬ ಕೀರ್ತಿ ಭಾರತದ್ದಾಗಲಿದೆ. ದಕ್ಷಿಣ ಧ್ರುವ ಸದಾ ನೆರಳಿನಿಂದ ಕೂಡಿದ್ದು, ಅಲ್ಲಿ ಹಿಮ ಹಾಗೂ ನೀರು ಹಾಗೆ ಉಳಿದಿರುವ ನಿರೀಕ್ಷೆ ಇದೆ.

ಈ ರಾಕೆಟ್ ನಲ್ಲಿ ಚಂದ್ರನ ಮೇಲೆ ಪರೀಕ್ಷೆ ನಡೆಸಲು ಒಟ್ಟು 14 ಉಪಕರಣಗಳನ್ನು ಕಳುಹಿಸಿದ್ದು, ಅದರಲ್ಲಿ ಒಂದು ಅಮೆರಿಕದಲ್ಲಿ ತಯಾರಾದರೆ, ಉಳಿದ 13 ಸಾಧನಗಳು ಸ್ವದೇಶಿ ನಿರ್ಮಿತವಾಗಿದೆ.

ಪೂರ್ವಭಾವಿ ತಯಾರಿಯಾಗಿ ಶನಿವಾರದಂದು ಇಸ್ರೋ ಎರಡು ಬಾರಿ ಚಂದ್ರಯಾನ 2 ಉಡ್ಡಯನದ ರಿಹರ್ಸಲ್ ನಡೆದಿತ್ತು. ಈ ಎರಡು ಪ್ರಯೋಗಗಳು ಯಶಸ್ವಿಯಾದ ಬಳಿಕವೇ ಇಂದು ಮಧ್ಯಾಹ್ನ 2:43ಕ್ಕೆ ಯೋಜನೆಯನ್ನು ಯಶಸ್ವಿಯಾಗಿ ನಡೆಸಲಾಯಿತು.

ಬಾಹುಬಲಿ ಉಡಾವಣೆಯಾಗುತ್ತಿದ್ದಂತೆ ವಿಜ್ಞಾನಿಗಳು ಸಂಭ್ರಮಿಸಿದ್ದು, ಈ ಮಹತ್ವದ ಸಾಧನೆಗೆ ದೇಶವೇ ಹೆಮ್ಮೆಪಡುತ್ತಿದೆ.

Leave a Reply