ಕರ್’ನಾಟಕ’ದ ಕ್ಲೈಮ್ಯಾಕ್ಸ್ ನಲ್ಲಿ ದೋಸ್ತಿ ಸರ್ಕಾರ ಪತನ, ಬಿಜೆಪಿಗೆ ಸುಖಾಂತ್ಯ!

ಡಿಜಿಟಲ್ ಕನ್ನಡ ಟೀಮ್:

ಕಳೆದ ಒಂದು ವಾರದಿಂದ ಇಡೀ ದೇಶದ ಗಮನವನ್ನೇ ತನ್ನತ್ತ ಸೆಳೆದಿದ್ದ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮಂಗಳವಾರ ರಾತ್ರಿ 7.30ಕ್ಕೆ ಮುಕ್ತಾಯಗೊಂಡಿತು. ಈ ವಿಶ್ವಾಸಮತ ಯಾಚನೆ ಪ್ರಹಸನ ಅಂತ್ಯದಲ್ಲಿ ಮತಕ್ಕೆ ಹಾಕಿದಾಗ ದೋಸ್ತಿ ಸರ್ಕಾರ ಪರ 99 ಮತ ಬಿದ್ದರೆ ವಿರೋಧ ಪಕ್ಷ ಬಿಜೆಪಿ ಪರ 105 ಮತ ಬಿದ್ದಿತು. ಪರಿಣಾಮ ದೋಸ್ತಿಗಳು ಅಲ್ಪಮತ ಪಡೆದು ಅಧಿಕಾರ ಕಳೆದುಕೊಂಡರು.

ಸೋಮವಾರದ ನಿರ್ಧರಿಸಿದಂತೆ ಇಂದೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಗಿಸಲು ಸ್ಪೀಕರ್ ತೀರ್ಮಾನಿಸಿದರು. ಬೆಳಗ್ಗೆ 10 ಗಂಟೆಗೆ ಕಲಾಪ ಆರಂಭವಾದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಒಂದೂವರೆ ಗಂಟೆ ತಡವಾಗಿ ಆಗಮಿಸಿದರು. ಪರಿಣಾಮ ಇಂದು ವಿಶ್ವಾಸಮತ ಪ್ರಕ್ರಿಯೆ ಪೂರ್ಣವಾಗುತ್ತದೆಯೇ ಎಂಬ ಅನುಮಾನ ಮೂಡಿತು.

ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಓರ್ವ ಬಿಎಸ್ಪಿ ಶಾಸಕ, ಇಬ್ಬರು ಪಕ್ಷೇತರರು ಹಾಗೂ 17 ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಗೈರಾದ ಪರಿಣಾಮ ಮ್ಯಾಜಿಕ್ ಸಂಖ್ಯೆ 204ಕ್ಕೆ ನಿಗದಿಯಾಯಿತು. ಇದರಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಕೇವಲ 99 ಮತಗಳನ್ನು ಪಡೆದು ಅಲ್ಪಮತಕ್ಕೆ ಕುಸಿದು ವಿಶ್ವಾಸಮತದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೋಲು ಅನುಭವಿಸಿದರು. ಇದರೊಂದಿಗೆ 14 ತಿಂಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಪತನವಾಯಿತು.

Leave a Reply