ಕರ್’ನಾಟಕ’ಕ್ಕೆ ತೆರೆ ಎಳೆಯಲು ‘ಮಂಗಳ’ವಾರ ಮುಹೂರ್ತ ಫಿಕ್ಸ್!

ಡಿಜಿಟಲ್ ಕನ್ನಡ ಟೀಮ್:

ಆಡಳಿತ ಪಕ್ಷಗಳ ಶಾಸಕರ ಪಟ್ಟಿನಂತೆ ವಿಶ್ವಾಸಮತ ಯಾಚನೆ ಮಂಗಳವಾರಕ್ಕೆ ಮುಂದೂಡಲಾಗಿದೆ.

ಸೋಮವಾರ ಪಕ್ಷೇತರ ಶಾಸಕರ ಅರ್ಜಿಯನ್ನು ತಿರಸ್ಕರಿಸಿ ವಿಶ್ವಾಸಮತ ಯಾಚನೆಗೆ ಸಮಯ ನಿಗದಿ ಮಾಡಲು ಸಾಧ್ಯವಿಲ್ಲ ಹಾಗೂ ರಾಜೀನಾಮೆ ನೀಡಿರುವ ಶಾಸಕರಿಗೆ ಅವರವರ ಪಕ್ಷದ ವಿಪ್ ಜಾರಿಯಾಗಲಿದೆ ಎಂದು ಸ್ಪೀಕರ್ ನಿರ್ಣಯ ನೀಡಿದ ಪರಿಣಾಮ ಅತೃಪ್ತ ಶಾಸಕರು ವಾಪಸ್ ಬರಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಒತ್ತಾಯಿಸಿದರು.

ಕೊಟ್ಟ ಮಾತಿಗೆ ತಪ್ಪಲು ಸಾಧ್ಯವಿಲ್ಲ. ಹೀಗಾಗಿ ನಾವು ಇಂದೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸಿ ಎಂದು ಸ್ಪೀಕರ್ ಪಟ್ಟು ಹಿಡಿದರು. ಪರಿಣಾಮ ವಿಧಾನಸಭೆ ಕಲಾಪ ರಾತ್ರಿ 11.45ರ ವರೆಗೂ ಗದ್ದಲ ವಾದ ಪ್ರತಿವಾದದಿಂದ ನಡೆಯಿತು.

ಅತ್ತ ಬಿಜೆಪಿ ನಾಯಕರು ರಾತ್ರಿ 1 ಗಂಟೆ ಆದರೂ ಪರವಾಗಿಲ್ಲ ನಾವು ಇದನ್ನು ಮುಗಿಸಿಯೇ ತೀರುತ್ತೇವೆ ಎಂದು ಪಟ್ಟು ಹಿಡಿದರೆ, ಆಡಳಿತ ಪಕ್ಷದ ಶಾಸಕರುಗಳು ರಾತ್ರಿ ಸಮಯ ಆಗಿದೆ, ವಯಸ್ಸಾದವರಿದ್ದೇವೆ, ಮಧುಮೇಹ ಹೊಂದಿರುವವರಿದ್ದೇವೆ, ಊಟಕ್ಕೆ ಸಮಯ ಆಗಿದೆ, ಇನ್ನೂ 8 ಜನ ಮಾತನಾಡಬೇಕು ಹೀಗಾಗಿ ಕಲಾಪ ನಾಳೆಗೆ ಮುಂದೂಡಿ ಎಂದು ಸ್ಪೀಕರ್ ಮೇಲೆ ಒತ್ತಡ ಹೇರಿದರು.

ಇಂದು ನಾನು ಕೊಟ್ಟ ಮಾತನ್ನು ಉಳಿಸಿಕೊಳ್ಳಲಾಗದೆ ಹೊರಗೆ ತಲೆ ಎತ್ತಿ ನಡೆಯಲು ಸಾಧ್ಯವಿಲ್ಲ. ಹೀಗಾಗಿ ಸದನದಲ್ಲಿ ಸಭಾನಾಯಕರೂ ಇಲ್ಲ. ಉಪಮುಖ್ಯಮಂತ್ರಿಗಳೂ ಇಲ್ಲ. ಹೀಗಾಗಿ ನಿಮ್ಮ ತೀರ್ಮಾನ ಏನು ಎಂದು ತಿಳಿಸಿ ಎಂದು ಹಿರಿಯ ಸಚಿವ ಆರ್.ವಿ ದೇಶಪಾಂಡೆ ಅವರಿಗೆ ತಿಳಿಸಿದರು. ಈ ವೇಳೆ ಮಾತನಾಡಿದ ದೇಶಪಾಂಡೆ ಅವರು ನಾಳೆ ಚರ್ಚೆ ನಡೆಸಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸೋಣ. ಹೀಗಾಗಿ ನಾಳೆಗೆ ಕಲಾಪ ಮುಂದೂಡಿ ಎಂದು ಮನವಿ ಮಾಡಿದರು.

ನಾಳೆಯೂ ನೀವು ಇದೇ ಕಥೆ ಮುಂದುವರಿಸಿದೆ ನಾನು ಎದುರಿಸಲು ಸಾಧ್ಯವಿಲ್ಲ. ಹೀಗಾಗಿ ನಾಳೆ ಯಾರು ಎಷ್ಟು ಹೊತ್ತು ಮಾತನಾಡಿ ಚರ್ಚೆ ಮುಗಿಸುತ್ತೀರ ಎಂದು ಹೇಳಿ ಎಂದರು. ಅದಕ್ಕೆ ಉತ್ತರಿಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ‘ನಾಳೆ 8 ಗಂಟೆಯೊಳಗೆ ಮತ ಹಾಕುವ ಪ್ರಕ್ರಿಯೆಯನ್ನು ಸೇರಿ ಎಲ್ಲವನ್ನು ಮುಗಿಸೋಣ’ ಎಂದರು.

ಇದಕ್ಕೆ ಒಪ್ಪದ ಸ್ಪೀಕರ್ ಮಧ್ಯಾಹ್ನ 4 ಗಂಟೆ ಒಳಗಾಗಿ ಎಲ್ಲವೂ ಮುಗಿಯಬೇಕು ಎಂದರು. ಆಗ ಮತ್ತೆ ಸಿದ್ದರಾಮಯ್ಯ 4 ಗಂಟೆ ಒಳಗೆ ಎಲ್ಲರೂ ಮಾತನಾಡುತ್ತಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ 1 ತಾಸು ಮಾತನಾಡುತ್ತಾರೆ. ಹೀಗಾಗಿ 6 ಗಂಟೆ ಒಳಗೆ ಎಲ್ಲ ಪ್ರಕ್ರಿಯೆ ಮುಗಿಸುತ್ತೇವೆ ಎಂದರು.

ಸಿದ್ದರಾಮಯ್ಯನವರ ಹೊಸ ಭರವಸೆ ನಂತರ ನಾನು ನಾಳೆ 6 ಗಂಟೆ ಮೇಲೆ ಒಂದು ನಿಮಿಷ ಕೂಡ ಇಲ್ಲಿ ನಿಲ್ಲುವುದಿಲ್ಲ ಎಂದರು. ಆಗ ಬಿಜೆಪಿ ಶಾಸಕ ಮಾಧಿಸ್ವಾಮಿ ಮಾತನಾಡಿ, ಸಭಾಧ್ಯಕ್ಷರೆ ಈ ಒಪ್ಪಂದಕ್ಕೆ ನಮಗೆ ಒಪ್ಪಿಗೆ ಇಲ್ಲ ಎಂದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಅದು ನಿಮ್ಮ ಆಯ್ಕೆ, ಅದಕ್ಕೆ ಬದ್ಧರಾಗಿರಿ ಎಂದು ಹೇಳಿ, ಕಲಾಪವನ್ನು ನಾಳೆಗೆ ಮುಂದೂಡಿದರು.

Leave a Reply