ಅಧಿಕಾರದಿಂದ ನಿರ್ಗಮನದ ವೇಳೆ ‘ಋಣಮುಕ್ತ’ ಉಡುಗೊರೆ ಕೊಟ್ಟ ಎಚ್ಡಿಕೆ!

ಡಿಜಿಟಲ್ ಕನ್ನಡ ಟೀಮ್:

ಕಳೆದ ವರ್ಷವೇ ರಾಜ್ಯದ ಜನರಿಗೆ ಗಿಫ್ಟ್ ಕೊಡುತ್ತೇನೆ ಎಂದಿದ್ದ ಹಂಗಾಮಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಂಗಳವಾರ ತಮ್ಮ ಅಧಿಕಾರದ ಅಂತಿಮ ದಿನದಂದು ಋಣಮುಕ್ತ ಕಾಯಿದೆ ಜಾರಿಗೊಳಿಸಿದ್ದಾರೆ.

ಬಡ್ಡಿ, ಚಕ್ರ ಬಡ್ಡಿ ಕೈ ಸಾಲದ ದಂದೆಯಿಂದ ನರಳುತ್ತಿದ್ದ ಬಡ ಹಾಗೂ ದುರ್ಬಲ ವರ್ಗದ ಜನರ ಅನುಕೂಲಕ್ಕಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಒನ್ ಟೈಂ ಸಾಲದ ಋಣಮುಕ್ತ ಕಾಯಿದೆಯನ್ನು ಪರಿಚಯಿಸಿದ್ದಾರೆ.

ಈ ಕಾಯಿದೆ ಜಾರಿಯಾದ ದಿನಾಂಕ ಅಂದರೆ ನಿನ್ನೆಯವರೆಗೂ ಸಾಲ ಪಡೆದವರು ಸಾಲದಿಂದ ಋಣಮುಕ್ತರಾಗುತ್ತಾರೆ. ವಾರ್ಷಿಕ 1.20 ಲಕ್ಷಕ್ಕೂ ಕಡಿಮೆ ಹಾಗೂ 2 ಹೆಕ್ಟೇರ್ ಪ್ರದೇಶಕ್ಕಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ರೈತರು ಈ ಯೋಜನೆ ಪ್ರಯೋಜನ ಪಡೆಯಲಿದ್ದಾರೆ ಎಂದು ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಕಾಯಿದೆ ವ್ಯಾಪ್ತಿಗೆ ಬರುವವರು ತಮ್ಮ ಸಾಲದ ಮಾಹಿತಿಯನ್ನು 90 ದಿನಗಳ ಒಳಗಾಗಿ ನೋಡಲ್ ಅಧಿಕಾರಿಗೆ ಮಾಹಿತಿ ನೀಡಿಬೇಕು. ಈ ಕಾಯಿದೆ ವಿಚಾರವಾಗಿ ರಾಷ್ಟ್ರಪತಿ ಅವರಿಗೆ ಕಳುಹಿಸಿಕೊಟ್ಟಿದ್ದೇವು. ನಮ್ಮ ಅಧಿಕಾರಿಗಳು ನಿರಂತರ ಸಂಪರ್ಕ ಹೊಂದಿದ ಪರಿಣಾಮ ರಾಷ್ಟ್ರಪತಿಗಳು ಇದೇ ತಿಂಗಳು 16ರಂದು ಕಾಯಿದೆಗೆ ಒಪ್ಪಿಗೆ ನೀಡಿದ್ದಾರೆ. ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.

ಇದೇವೇಳೆ ಮುಂದಿನ ದಿನಗಳಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿಯುವ ಸಾಧ್ಯತೆ ಇದ್ದು, ಅಧಿಕಾರಿಗಳು ಈ ರಾಜಕೀಯ ಬೆಳವಣಿಗೆ ಬಗ್ಗೆ ಚಿಂತಿಸದೆ ಜನರ ಸಮಸ್ಯೆಗೆ ಸ್ಪಂದಿಸಿ ತಮ್ಮ ಜವಾಬ್ದಾರಿ ನಿಭಾಯಿಸುವಂತೆ ಮನವಿ ಮಾಡಿದ್ದೇನೆ ಎಂದರು.

Leave a Reply