ಸರ್ಕಾರ ಬಿದ್ದರೂ ಬಿಎಸ್‌ವೈ ಸಿಎಂ ಆಗಲು ಹಿಂದೆ ಮುಂದೆ ನೋಡ್ತಿರೋದೇಕೆ?

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಪತನ ಆಗಿದೆ. ವಿಶ್ವಾಸಮತ ಯಾಚನೆ ಮಾಡಿದ್ದ ಕುಮಾರಸ್ವಾಮಿ, ಬಹುಮತ ಸಾಬೀತು ಮಾಡಲು ಸಾಧ್ಯವಾಗದೆ, ರಾಜ್ಯಪಾಲರನ್ನು ಭೇಟಿ ಮಾಡಿ ತಮ್ಮ ಕ್ಯಾಬಿನೆಟ್ ಸೇರಿದಂತೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಬಿಜೆಪಿಗೂ ಸಂಪೂರ್ಣ ಬಹುಮತ ಇಲ್ಲದಿದ್ದರೂ ಸದ್ಯದ ಅಂಕಿ ಸಂಖ್ಯೆ ಆಧಾರದಲ್ಲಿ ಸರಳ ಬಹುಮತ ಹೊಂದಿದೆ. ಆದರೂ ಸರ್ಕಾರ ರಚನೆಗೆ ಹಿಂದೆ ಮುಂದೆ ನೋಡುತ್ತಿದೆ.

ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಬಹುತೇಕ ನಾಯಕರು ಸರ್ಕಾರ ರಚನೆ ಮಾಡುವುದಾಗಿ ನಿನ್ನೆ ಘೋಷಣೆ ಮಾಡಿದ್ರು. ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮಾಹಿತಿಯನ್ನೂ ನೀಡಿದ್ರು. ಆದರೂ ಅದೊಂದು ಭಯದಿಂದ ನಾಳೆ ನಡೆಯಬೇಕಿದ್ದ ಸಿಎಂ ಪ್ರಮಾಣವಚನ ಕಾರ್ಯಕ್ರಮ ಸದ್ಯಕ್ಕೆ ಮುಂದೂಡಿಕೆ ಆಗಿದೆ ಎನ್ನಲಾಗ್ತಿದೆ. ಕೇಂದ್ರದಿಂದ ವೀಕ್ಷಕರಾಗಿ ನಾಯಕರು ಆಗಮಿಸುತ್ತಿದ್ದು, ಆ ಬಳಿಕ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ ಎನ್ನಲಾಗ್ತಿದೆ. ಬಿ.ಎಸ್ ಯಡಿಯೂರಪ್ಪ ಅವರೇ ವಿರೋಧ ಪಕ್ಷದ ನಾಯಕನಾಗಿದ್ದ ಮೇಲೆ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡೋದು ಏನು ಎಂದು ಕೆಲವು ಕಾರ್ಯಕರ್ತರು ಕೇಳ್ತಿದ್ದು, ಶಾಸಕಾಂಗ ಪಕ್ಷದ ಸಭೆಯ ಮಧ್ಯೆ ಗೊಂದಲ ಏನಾದ್ರು ಎದುರಾಗುತ್ತಾ ಅನ್ನೋ ಭೀತಿಯೂ ಶುರುವಾಗಿದೆ. ಆದ್ರೆ ಬಿಎಸ್‌ವೈ ಅವರನ್ನೇ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಅಧಿಕೃತವಾಗಿ ಆಯ್ಕೆ ಮಾಡಲಾಗುತ್ತೆ ಅನ್ನೋ ಮಾತುಗಳು ಕೇಳಿಬಂದಿವೆ.

ಸರ್ಕಾರ ಬಿದ್ದು ಹೋದರೂ ಬಿ.ಎಸ್ ಯಡಿಯೂರಪ್ಪ ಸಿಎಂ ಆಗ್ತಿಲ್ಲ ಯಾಕೆ..? ಅನ್ನೋದು ಯಡಿಯೂರಪ್ಪ ಅಭಿಮಾನಿಗಳ ಪ್ರಶ್ನೆಯಾಗಿದೆ. ಮೈತ್ರಿ ಸರ್ಕಾರ ಪತನ ಆಗುತ್ತಲೇ ಹಿಸದಾಗಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದು ಭಾವಿಸಿದ್ದ ಕಾರ್ಯಕರ್ತರಿಗೆ ಬೇಸರವಾಗಿದೆ. ಆದ್ರೆ ವಿಷಯ ಅಂದ್ರೆ ರಾಜೀನಾಮೆ ನೀಡಿರುವ ಕಾಂಗ್ರೆಸ್-ಜೆಡಿಎಸ್ ಶಾಸಕರ ರಾಜೀನಾಮೆ ವಿಚಾರ ಇನ್ನೂ ಕೂಡ ಹಾಗೇ ಉಳಿದುಕೊಂಡಿದೆ‌. ಒಂದು ವೇಳೆ ಸಿಎಂ ಆಗಿ ಬಿ.ಎಸ್ ಯಡಿಯೂರಪ್ಪ ಪ್ರಮಾಣ ಸ್ವೀಕರಿಸಿದ ಬಳಿಕವೂ ರಾಜೀನಾಮೆ ಅಂಗೀಕಾರ ಆಗದೆ ಶಾಸಕರಾಗಿ ಉಳಿದುಕೊಂಡರೆ ದೊಡ್ಡ ಗಂಡಾಂತರವೇ ಎದುರಾಗಲಿದೆ. ಶಾಸಕರನ್ನು ಅನರ್ಹ ಮಾಡಿದರೆ ಅಥವಾ ರಾಜೀನಾಮೆ ಅಂಗೀಕಾರ ಮಾಡಿದರೆ ಮಾತ್ರ ಸದ್ಯಕ್ಕೆ ಬಹುಮತ ಸಿಗಲಿದ್ದು, ಯಾವುದಾದರೂ ಒಂದು ನಿರ್ಧಾರ ಹೊರಬೀಳುವ ಮುನ್ನ ಯಾವುದೇ ಕಾರಣಕ್ಕೂ ಪ್ರಮಾಣ ವಚನ ಬೇಡ ಅನ್ನೋ ಸಂದೇಶ ರವಾನೆ ಆಗಿದೆ ಅನ್ನೋದು ಗೊತ್ತಾಗಿದೆ. ಸ್ಪೀಕರ್ ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ನಿರ್ಧಾರ ಪ್ರಕಟಿಸುವ ಸಾಧ್ಯತೆಯೂ ಇದೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಬಿಎಸ್‌ವೈ ಸಿಎಂ ಆಗುವುದು ತಡವಾಗ್ತಿದೆ.

Leave a Reply