ಯಡಿಯೂರಪ್ಪ ಸಿಎಂ ಕನಸು ಸ್ಪೀಕರ್ ಕೈಯಲ್ಲಿ!?

ಡಿಜಿಟಲ್ ಕನ್ನಡ ಟೀಮ್:

ಅತೃಪ್ತ ಶಾಸಕರ ರಾಜೀನಾಮೆ ವಿಚಾರದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಈಗ ಎಲ್ಲರ ಗಮನ ಸೆಳೆದಿದೆ.

ಅನರ್ಹತೆಯಿಂದ ಪಕ್ಷದ್ರೋಹಿಗಳ ವಿರುದ್ಧ ಕಾಂಗ್ರೆಸ್- ಜೆಡಿಎಸ್ ಸೇಡು ತೀರಿಸಿಕೊಳ್ಳುವುದರಿಂದ ಹಿಡಿದು, ಬಿಜೆಪಿ ಸರ್ಕಾರ ರಚನೆವರೆಗೂ ರಾಜ್ಯದ ಎಲ್ಲ ವಿದ್ಯಮಾನಗಳು ಈಗ ಸ್ಪೀಕರ್ ಅವರ ನಿರ್ಧಾರದ ಮೇಲೆ ನಿಂತಿದೆ. ಅರೆ, ಬಿಜೆಪಿ ಸರ್ಕಾರ ರಚನೆಗೂ ಸ್ಪೀಕರ್ ನಿರ್ಧಾರಕ್ಕೂ ಸಂಬಂಧ ಏನು ಅಂತೀರಾ? ಸಂಬಂಧ ಇದೆ.

ಮೈತ್ರಿ ಸರ್ಕಾರವನ್ನು ಪಟ್ಟು ಬಿಡದೆ ಪತನ ಮಾಡಿರುವ ಬಿಜೆಪಿ ಈಗ ಸರ್ಕಾರ ರಚನೆಗೆ ಹಿಂದೇಟು ಹಾಕುತ್ತಿದೆ. ಅದಕ್ಕೆ ಪ್ರಮುಖ ಕಾರಣ ಅತೃಪ್ತ ಶಾಸಕರ ಮೇಲಿನ ಅಪನಂಬಿಕೆ. ಹೌದು, ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರವಾಗಬೇಕು ಇಲ್ಲವೇ ರಾಜೀನಾಮೆ ಅಂಗೀಕಾರ ಆಗದೆ ಅವರು ಅನರ್ಹತೆ ಶಿಕ್ಷೆಗೆ ಒಳಗಾಗಬೇಕು. ಆಗ ಮಾತ್ರ ಬಿಜೆಪಿ ಧೈರ್ಯವಾಗಿ ಸರ್ಕಾರ ರಚನೆಗೆ ಮುಂದಾಗಲಿದೆ.

ಈಗಲೇ ಸರ್ಕಾರ ರಚನೆಗೆ ಮುಂದಾಗಿ ಒಂದುವೇಳೆ ಅತೃಪ್ತರು ಬಹುಮತ ಸಾಬೀತು ವೇಳೆ ತಮ್ಮ ರಾಜೀನಾಮೆ ಹಿಂಪಡೆದು ವಾಪಸ್ ಹೋದರೆ ಬಿಜೆಪಿಗೆ ಭಾರಿ ಮುಖಭಂಗವಾಗುತ್ತದೆ. ಈ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರವಾದರೆ ಅಥವಾ ಅನರ್ಹತೆಗೊಂಡರೆ ಆಗ ಬಿಜೆಪಿ ಧೈರ್ಯವಾಗಿ ಯಾರನ್ನೂ ಅವಲಂಭಿಸದೆ ಬಹುಮತ ಸಾಬೀತು ಪಡಿಸಬಹುದು. ಈ ಎಲ್ಲ ಕಾರಣದಿಂದ ಬಿಜೆಪಿ ಸರ್ಕಾರ ರಚನೆ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆ ಇಡುತ್ತಿದೆ.

ಅತೃಪ್ತ ಶಾಸಕರ ರಾಜೀನಾಮೆ ವಿಚಾರವಾಗಿ ಸ್ಪೀಕರ್ ಅವರ ಅಂತಿಮ ನಿರ್ಧಾರ ಬರುವವರೆಗು ಯಾವುದೇ ನಿರ್ಧಾರ ಕೈಗೊಳ್ಳಬೇಡಿ. ಸ್ಪೀಕರ್ ನಿರ್ಧಾರದ ನಂತರ ನೀವು ಸರ್ಕಾರ ರಚನೆಗೆ ಮುಂದಾಗಿ ಎಂದು ಅಮಿತ್ ಶಾ ಇಂದು ತಮ್ಮನ್ನು ಭೇಟಿಯಾದ ರಾಜ್ಯ ಬಿಜೆಪಿ ನಾಯಕರ ನಿಯೋಗಕ್ಕೆ ಸ್ಪಷ್ಟ ಸೂಚನೆ ನೀಡಿದ್ದಾರೆ

ಈ ಕಾರಣಕ್ಕಾಗಿಯೇ ಬಿ.ಎಸ್ ಯಡಿಯೂರಪ್ಪ ಅವರ ಸಿಎಂ ಕನಸು ಸ್ಪೀಕರ್ ರಮೇಶ್ ಕುಮಾರ್ ಕೈಯಲ್ಲಿದೆ.

Leave a Reply