BJP ಹೈಕಮಾಂಡ್ ದಾಳಕ್ಕೆ BSY ಕಂಗಾಲು..!?

ಡಿಜಿಟಲ್ ಕನ್ನಡ ಟೀಮ್:

ರಾಜ್ಯದ ಮೈತ್ರಿ ಸರ್ಕಾರ ಬಹುಮತ ಸಾಬೀತು ಮಾಡಲು ಸಾಧ್ಯವಾಗದ ಬೆನ್ನು ತಿರುಗಿಸಿ ಹೋಗುವಾಗ ಕೇಸರಿ ಪಾಳಯ ಕಿಲಕಿಲನೆ ನಕ್ಕಿತ್ತು. ಇಡೀ ವಿಧಾನಸಭಾ ಸಭಾಂಗಣದಲ್ಲಿ‌‌ ಸಂಭ್ರಮ ಮನೆ ಮಾಡಿತ್ತು. ಅದಕ್ಕೆ ಮುಖ್ಯ ಕಾರಣ ಅಂದ್ರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಹೊಸ ಮುಖ್ಯಮಂತ್ರಿ ಆಗಿ ಅಧಿಕಾರ ಹಿಡಿಯಲಿದ್ದಾರೆ ಅನ್ನೋದು. ಆದ್ರೆ ಇದೀಗ ಅದೇ‌ ಕೇಸರಿ‌ಪಾಳಯದಲ್ಲಿ‌ ಆತಂಕದ ಛಾಯೆ ಮನೆ ಮಾಡಿದೆ. ಅದೂ ಕೂಡ ಬಿ.ಎಸ್ ಯಡಿಯೂರಪ್ಪ ಅವರಿಗಾಗಿಯೇ ಅನ್ನೋದು ವಿಶೇಷ.

ಬುಧವಾರವೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆದು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಜಿ ಸಿಎಂ ಬಿ .ಎಸ್. ಯಡಿಯೂರಪ್ಪ ಅವರನ್ನು ಅಧಿಕೃತವಾಗಿ ಆಯ್ಕೆ ಮಾಡುವ ಕೆಲಸ ಆಗಬೇಕಿತ್ತು. ಆದ್ರೆ ಕೇಂದ್ರ ಬಿಜೆಪಿಯಿಂದ ಯಾವುದೇ ಸೂಚನೆ ಬಂದಿಲ್ಲ. ಕೇಂದ್ರದಲ್ಲಿ ನಡೆಯಬೇಕಿದ್ದ ಸಭೆ ಕೂಡ ನಡೆದಿಲ್ಲ. ಇತ್ತ ಆರ್‌ಎಸ್‌ಎಸ್ ಕಚೇರಿಗೆ ಭೇಟಿ ನೀಡಿದ್ದ ಬಿ.ಎಸ್ ಯಡಿಯೂರಪ್ಪ ಅವರಿಗೂ ಸರಿಯಾದ ಮಾಹಿತಿ ಲಭ್ಯವಾಗಿಲ್ಲ. ಹಾಗಾಗಿ ಮುಂದೇನು ಮಾಡೋದು ಅನ್ನೋದನ್ನು ಅರಿಯದ ಬಿಜೆಪಿ ನಾಯಕರು ನಿನ್ನೆ ಸಂಜೆ ದೆಹಲಿಗೆ ತೆರಳಿದ್ರು.

ಬಿ‌.ಎಸ್ ಯಡಿಯೂರಪ್ಪ ಸೂಚನೆಯಂತೆ ನಿನ್ನೆ ರಾತ್ರಿ ದೆಹಲಿಗೆ ತೆರಳಿದ್ದ ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಮಾಧುಸ್ವಾಮಿ, ಕೆ.ಜೆ ಬೋಪಯ್ಯ, ಬಿ.ವೈ ವಿಜಯೇಂದ್ರ ತಂಡ ಇಂದು ಬೆಳಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕಾರಣದ ಬಗ್ಗೆ ಮನವರಿಕೆ ಮಾಡಿಕೊಡುವ ಯತ್ನ ನಡೆಸಿದೆ ಎನ್ನಲಾಗ್ತಿದೆ. ಆದ್ರೆ ಆ ನಿಯೋಗಕ್ಕೂ ಸ್ಪಷ್ಟ ಸಂದೇಶ ನೀಡದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ನೀವು ರಾಜ್ಯಕ್ಕೆ ವಾಪಸ್ ತೆರಳಿ ನಾವು ಸಂದೇಶ ಕಳಿಸುತ್ತೇವೆ ಎಂದು ಹೇಳಿರುವುದು ಬಿಎಸ್ ಯಡಿಯೂರಪ್ಪ ಆಪ್ತ ವಲಯದ ಆತಂಕವನ್ನು ಹೆಚ್ಚು ಮಾಡಿದೆ.

ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪ ಅವರನ್ನು ಆಯ್ಕೆ ಮಾಡಲು ಸಾಕಷ್ಟು ಅಡ್ಡಿ ಆತಂಕ ಎದುರಾಗಿದೆ ಎನ್ನಲಾಗ್ತಿದೆ. ಯಾಕಂದ್ರೆ ಒಂದು ಸಲ ಬಿ.ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ್ದಕ್ಕೆ ಇಡೀ ಪಕ್ಷವನ್ನು ನಿಯಂತ್ರಿಸುವ ಹಂತಕ್ಕೆ ಬೆಳೆದರು, ಆ ಬಳಿಕ ಪಕ್ಷ ಹೇಳಿದವರಿಗೆ ಅಧಿಕಾರ ಬಿಟ್ಟುಕೊಡಲು ಹರಸಾಹಸವನ್ನೇ ಮಾಡಬೇಕಾಯ್ತು. ಕೊನೆಗೆ ಪಕ್ಷವನ್ನೇ ಇಬ್ಭಾಗ ಮಾಡಿ ಕೆಜೆಪಿ ಸ್ಥಾಪನೆ ಮಾಡಿದ್ರು. ಅದೇ ಕಾರಣಕ್ಕೆ 2013 ರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲಬೇಕಾಯ್ತು. ನಂತರ ದಿನಗಳಲ್ಲೂ ಬಿಎಸ್ ಯಡಿಯೂರಪ್ಪ ಕೇಂದ್ರ ನಾಯಕರ ಜೊತೆ ಅಷ್ಟೆನು ಉತ್ತಮ ಸಂಬಂಧ ಹೊಂದಿಲ್ಲ ಎನ್ನುವ ವರದಿಗಳು ಕೇಂದ್ರ ತಲುಪಿವೆ ಎನ್ನಲಾಗ್ತಿದೆ. ಜೊತೆಗೆ ಆರ್‌ಎಸ್‌ಎಸ್ ನಾಯಕ ಸಂತೋಷ್ ಅವರನ್ನು ಈ ಬಾರಿ ಮುಖ್ಯಮಂತ್ರಿ ಮಾಡಿದ್ರೆ ಮುಂದಿನ ದಿನಗಳ ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದು ಎನ್ನುವ ಮಾತುಗಳು ದೆಹಲಿಯಲ್ಲಿ ಹರಿದಾಡ್ತಿವೆ ಎನ್ನುವ ಸುದ್ದಿ ಯಡಿಯೂರಪ್ಪ ಸೇರಿದಂತೆ ಆಪ್ತರು ಕಂಗಾಲಾಗುವಂತೆ ಮಾಡಿದೆ. ಮುಂದೇನು ಮಾಡ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.

Leave a Reply