ಮುಗಿಯದ ಕರ್’ನಾಟಕ’ ರಾಜಕೀಯ! ಪರದೆ ಹಿಂದೆ ನಡೆಯುತ್ತಿದೆ ಭರ್ಜರಿ ಪ್ರಹಸನ!

ಡಿಜಿಟಲ್ ಕನ್ನಡ ಟೀಮ್:

ದೋಸ್ತಿ ಸರ್ಕಾರ ಪತನದೊಂದಿಗೆ ರಾಜ್ಯ ರಾಜಕೀಯದ ಹೈಡ್ರಾಮಗಳಿಗೂ ತೆರೆ ಬೀಳುವ ನಿರೀಕ್ಷೆ ಇತ್ತು. ಆದರೆ ಜನರ ನಿರೀಕ್ಷೆ ಹುಸಿಯಾಗಿದ್ದು, ರಾಜ್ಯ ರಾಜಕಾರಣದ ಪ್ರಹಸನಗಳು ಹೊಸ ತಿರುವು ಪಡೆದುಕೊಳ್ಳುತ್ತಿವೆ.

ಹೌದು, ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನದ ನಂತರ ಬಿಜೆಪಿ ಸರ್ಕಾರ ರಚನೆಯಾಗುತ್ತದೆ. ಹೊಸ ಸರ್ಕಾರದ ರಚನೆಯೊಂದಿಗೆ ರಾಜರಾಜಕೀಯ ತಿಳಿಯಾಗಿ ಆಡಳಿತ ಯಂತ್ರ ಚುರುಕಾಗುತ್ತದೆ ಎಂದು ಎಲ್ಲರು ಭಾವಿಸಿದ್ದರು. ಆದರೆ ಸದ್ಯದ ಬೆಳವಣಿಗೆಗಳು ನಾವು ಅಂದುಕೊಂಡತೆ ಯಾವುದು ಆಗುವುದಿಲ್ಲ ಎಂಬ ಸೂಚನೆ ನೀಡುತ್ತಿದೆ. ಕರ್’ನಾಟಕ’ ರಾಜಕೀಯ ಈಗಲೇ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಅದಕ್ಕೆ ಪೂರಕವಾಗಿ ಏಕ ಕಾಲಕ್ಕೆ ಹಲವು ರಾಜಕೀಯ ವಿದ್ಯಮಾನಗಳು ನಡೆಯುತ್ತಿದ್ದು, ಅವುಗಳು ಹೀಗಿವೆ…

ಅತೃಪ್ತರ ಮೇಲೆ ಬಿಜೆಪಿಗೆ ಅಪನಂಬಿಕೆ!
ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನಕ್ಕೆ ಕಾರಣವಾಗಿರುವ ಅತೃಪ್ತರ ಮೇಲೆ ಬಿಜೆಪಿ ಹೈಕಮಾಂಡ್ ಗೆ ಕಿಂಚಿತ್ತೂ ನಂಬಿಕೆ ಇಲ್ಲ. ತಮ್ಮನ್ನು ಬೆಳಿಸಿದ ಪಕ್ಷಕ್ಕೆ ದೋಖಾ ಮಾಡಿರುವವರನ್ನು ನಂಬಿ ಹೇಗೆ ಸರ್ಕಾರ ರಚನೆಗೆ ಮುಂದಾಗುವುದು ಎಂಬ ಭಯ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಕಾಡುತ್ತಿದೆ. ಹೀಗಾಗಿ ಸರ್ಕಾರ ರಚನೆಗೆ ಹಕ್ಕು ಮಂಡನೆಗೆ ಹೈ ಕಮಾಂಡ್ ರಾಜ್ಯ ನಾಯಕರಿಗೆ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.

ಮಂತ್ರಿಗಿರಿ ಮೇಲೆ ಹೆಚ್ಚಿದ ನಿರೀಕ್ಷೆ!
ಬಿಜೆಪಿ ಸರ್ಕಾರ ಇನ್ನು ರಚನೆಯೇ ಗಿಲ್ಲ ಆಗಲೇ ಕಮಲ ಪಾಳಯದಲ್ಲಿ ಹಿರಿಯ ನಾಯಕರು ತಮಗೆ ಬೇಕಾದ ಮಂತ್ರಿ ಸ್ಥಾನಕ್ಕೆ ಟವಲ್ ಹಾಕಿಕೊಂಡು ಕಾಯುತ್ತಿದ್ದಾರೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ಉಪಮುಖ್ಯಮಂತ್ರಿ ಆಗಲು ಹೊರಟಿದ್ದ ಶ್ರೀರಾಮುಲು ತಮಗೆ ಅದೇ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದರೆ, ಇತ್ತ ಮೈಸೂರಿನಲ್ಲಿ ನಿನ್ನೆ ಈಶ್ವರಪ್ಪ ಅವರು ನಾನು ಈಗಾಗಲೇ ಉಪಮುಖ್ಯಮಂತ್ರಿ ಆಗಿದ್ದೇನೆ. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ ಎಂದು ಡಿಸಿಎಂ ಆಗಲು ನಾನೇ ಮೊದಲ ಆಯ್ಕೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಶಾ ಭೇಟಿಗೆ ರಾಜ್ಯದ ನಿಯೋಗ!
ಸರ್ಕಾರ ರಚನೆಗೆ ಗ್ರೀನ್ ಸಿಗ್ನಲ್ ನೀಡುವಂತೆ ಮನವಿ ಮಾಡಲು ಯಡಿಯೂರಪ್ಪನವರ ಆಪ್ತರ ಬಳಗದ ನಿಯೋಗ ಇಂದು ದೆಹಲಿಗೆ ತೆರಳಿದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಲಿದೆ. ಈ ನಿಯೋಗದಲ್ಲಿ ಜಗದೀಶ್ ಶೆಟ್ಟರ್, ಮಾಧುಸ್ವಾಮಿ, ಬಸವರಾಜ ಬೊಮ್ಮಾಯಿ, ಅರವಿಂದ ಲಿಂಬಾವಳಿ, ಕೆ.ಜಿ ಬೋಪಯ್ಯ, ಬಿ.ವೈ ವಿಜಯೇಂದ್ರ ಇದ್ದು ಶಾ ನಿವಾಸದಲ್ಲಿ ಮಹತ್ವದ ಚರ್ಚೆ ನಡೆಸಲಿದ್ದಾರೆ. ಈ ವೇಳೆ ಅತೃಪ್ತರಿಂದ ತಮಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಜಗದೀಶ್ ಶೆಟ್ಟರ್ ಅವರು ಅಮಿತ್ ಶಾಗೆ ಭರವಸೆ ನೀಡಿದ್ದಾರೆ.

ರಾಜ್ಯಕ್ಕೆ ಬಂದ ಶಿವರಾಂ ಹೆಬ್ಬಾರ್!
ಇನ್ನು ಮುಂಬೈನಲ್ಲಿರುವ ಅತೃಪ್ತ ಶಾಸಕರ ಪೈಕಿ ಶಿವರಾಂ ಹೆಬ್ಬಾರ್ ರಾಜ್ಯಕ್ಕೆ ಮರಳಿದ್ದು, ಅಚ್ಚರಿ ಮೂಡಿಸಿದೆ. ತಮ್ಮ ಕ್ಷೇತ್ರಕ್ಕೆ ಆಗಮಿಸಿರೋ ಶಿವರಾಂ ಹೆಬ್ಬಾರ್, ತಾನು ಇನ್ನುಮುಂದೆ ಎಲ್ಲಿಗೂ ಹೋಗುವುದಿಲ್ಲ ಎಂದಿದ್ದು, ರಾಜೀನಾಮೆಯನ್ನು ವಾಪಸ್ ಪಡೆಯುವುದಿಲ್ಲ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಜೊತೆ ಕೈ ಜೋಡಿಸುವುದಿಲ್ಲ ಎಂದಿದ್ದಾರೆ.

ಮುಂಬೈಗೆ ದಿನೇಶ್ ಗುಂಡೂರಾವ್!
ಇನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದಿಢೀರನೆ ಮುಂಬೈಗೆ ತೆರಳಿದ್ದು, ಅತೃಪ್ತರ ಮನವೊಲಿಕೆಗೆ ಬಂದಿದ್ದಾರಾ ಎಂಬ ಆತಂಕ ಅತೃಪ್ತರ ಪಾಳಯದಲ್ಲಿ ಮೂಡಿದೆ. ಇದೇ ವೇಳೆ ಬಿಜೆಪಿಯ ಆರ್.ಅಶೋಕ್, ಶಾಸಕ ಸತೀಶ್ ರೆಡ್ಡಿ, ಅಶ್ವಥ್ ನಾರಾಯಣ ಕೂಡ ಮುಂಬೈನಲ್ಲಿದ್ದು, ಬಿಜೆಪಿ ಸರ್ಕಾರ ರಚನೆಯಾಗುವವರೆಗೂ ಇಲ್ಲೇ ಇರಿ ಎಂದು ಸಮಾಧಾನ ಮಾಡಲು ಬಂದಿದ್ದಾರೆ.

ಸ್ಪೀಕರ್ ವಿಳಂಬದಿಂದ ಅತೃಪ್ತರಿಗೆ ಬೇಸರ!
ರಾಜೀನಾಮೆ ಅಂಗೀಕಾರ ವಿಚಾರವಾಗಿ ಸ್ಪೀಕರ್ ರಮೇಶ್ ಕುಮಾರ್ ವಿಳಂಬ ಮಾಡುತ್ತಿರುವುದು ರಾಜೀನಾಮೆ ನೀಡಿರುವ ಶಾಸಕರಲ್ಲಿ ಅಸಹನೆ ಹೆಚ್ಚಿಸುತ್ತಿದೆ. ಅಜ್ಞಾತ ಸ್ಥಳದಲ್ಲಿ ತಲೆಮರೆಸಿಕೊಂಡಿರುವ ಈ ಶಾಸಕರಿಗೆ ಕಣ್ಣಾಮುಚ್ಚಾಲೆ ಆಟ ಸಾಕಾಗಿದ್ದು, ಆದಷ್ಟು ಬೇಗ ಮುಕ್ತಾಯವಾಗಲಿ ಎಂದು ಕಾಯುತ್ತಿದ್ದಾರೆ. ಇದರ ಜತೆಗೆ ಬಿಜೆಪಿ ಹೈಕಮಾಂಡ್ ಸರ್ಕಾರ ರಚನೆಗೆ ಅವಕಾಶ ನೀಡದಿರುವುದು ಕೂಡ ಅತೃಪ್ತರಲ್ಲಿ ಆತಂಕ ಮೂಡಿಸಿದೆ.

Leave a Reply