ಶಂಕರ್, ರಮೇಶ್, ಮಹೇಶ್ ಕುಮಟಳ್ಳಿ ವಿಧಾನಸಭೆ ಸದಸ್ಯತ್ವ ರದ್ದು! ಶೀಘ್ರದಲ್ಲೇ ಮಿಕ್ಕವರ ಭವಿಷ್ಯ

ಡಿಜಿಟಲ್ ಕನ್ನಡ ಟೀಮ್:

ರಾಣೆಬೆನ್ನೂರು ಶಾಸಕ ಆರ್ ಶಂಕರ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಕರ್ನಾಟಕದ 15ನೇ ವಿಧಾನಸಭೆ ಅವಧಿವರೆಗೂ ಅನರ್ಹರಾಗಿದ್ದಾರೆ.

ಗುರುವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ರಾಜೀನಾಮೆ ವಿಚಾರವಾಗಿ ತಮ್ಮ ತೀರ್ಮಾನ ಪ್ರಕಟಿಸಿದ ಸ್ಪೀಕರ್, ಈ ಮೂವರ ಹೊರತಾಗಿ ಉಳಿದ ಶಾಸಕರ ವಿಚಾರವನ್ನು ಕೆಲವೇ ದಿನಗಳಲ್ಲಿ ಪ್ರಕಟಿಸುತ್ತೇನೆ. ಈ ಅರ್ಜಿಗಳ ವಿಚಾರವಾಗಿ ಕೆಲವು ಇನ್ನು ಕೆಲವು ಅಂಶಗಳ ಬಗ್ಗೆ ಸ್ಪಷ್ಟ ಚಿತ್ರಣ ಪಡೆಯಬೇಕಿದೆ. ಹೀಗಾಗಿ ಈ ಅರ್ಜಿಗಳ ಬಗ್ಗೆ ತೀರ್ಮಾನಕ್ಕೆ ಬರಲು ಸಮಯಬೇಕಿದೆ. ನಾನು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ’ ಎಂದು ತಿಳಿಸಿದರು.

ಆರ್.ಶಂಕರ್ ಅವರು ಕಾಂಗ್ರೆಸ್ ಸದಸ್ಯನಾಗಿ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಅಲಂಕರಿಸಿದ್ದರು. ಸದನದ ಕಲಾಪದ ವೇಳೆ ಕಾಂಗ್ರೆಸ್ ಪಕ್ಷದ ಜತೆಯಲ್ಲೇ ಸೀಟು ಕೊಡಬೇಕು ಎಂದು ಮನವಿ ಮಾಡಿದ್ದರು. ಅದರಂತೆ ಅವರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ನಂತರ ಆರ್.ಶಂಕರ್ ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಅವರು ತಾವು ಕಾಂಗ್ರೆಸ್ ಗೆ ನೀಡಲಾಗಿದ್ದ ಬೆಂಬಲವನ್ನು ಹಿಂಪಡೆದು, ಬಿಜೆಪಿಗೆ ನಮ್ಮ ಬೆಂಬಲ ನೀಡುತ್ತೇವೆ ಎಂದು ಹೇಳಲಾಗಿದ್ದು, ಆ ಪತ್ರವನ್ನು ರಾಜ್ಯಪಾಲರು ನನಗೆ ಕಳುಹಿಸಿಕೊಟ್ಟರು. ಆ ಪ್ರಕಾರ ಅದು ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘನೆಯಾಗಿದೆ ಎಂದು ಪರಿಗಣಿಸಿ ಅವರನ್ನು ಪ್ರಸ್ತುತ ವಿಧಾನಸಭೆಯ ಕಾಲಾವಧಿ ಅಂದರೆ 2023ರ ವರೆಗೆ ವಿಧಾನಸಭೆ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ ಎಂದು ವಿವರಿಸಿದರು.

ಇನ್ನು ಉಮೇಶ್ ಜಾಧವ್ ರಾಜೀನಾಮೆ ಪ್ರಕರಣವನ್ನು ಮೆಲುಕು ಹಾಕಿದ ಸ್ಪೀಕರ್ ರಮೇಶ್ ಕುಮಾರ್, ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿ ಅವರ ಅನರ್ಹಗೊಳಿಸಲು ದೂರು ನೀಡಿದ್ದರು. ಆನಂತರ ಈ ಇಬ್ಬರು ರಾಜೀನಾಮೆ ನೀಡಿದ್ದು, ಇವರ ರಾಜೀನಾಮೆಗೆ ಸಂಬಂಧಿಸಿದ ವಿಚಾರಣೆಗೂ ಇವರು ಹಾಜರಾಗಿಲ್ಲ. ಕಾಂಗ್ರೆಸ್ ಪಕ್ಷದ ದೂರಿನ ಆಧಾರದ ಮೇಲೆ ಈ ಇಬ್ಬರು ನಾಯಕರನ್ನು ಅನರ್ಹಗೊಳಿಸಲಾಗಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ತಮ್ಮ ನಿರ್ಧಾರ ಪ್ರಕಟಿಸಿದರು.

Leave a Reply