ತುರ್ತು ಸುದ್ದಿಗೋಷ್ಠಿ ಕರೆದ ಸ್ಪೀಕರ್ ರಮೇಶ್ ಕುಮಾರ್..!

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸರ್ಕಾರ ಉರುಳಿ ಆಯ್ತು. ಬಿಜೆಪಿ ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿದೆ. ಈ ನಡುವೆ ರಾಜೀನಾಮೆ ನೀಡಿ ಸರ್ಕಾರ ಬೀಳಲು ಕಾರಣರಾಗಿದ್ದ ಎಂಎಲ್‌ಎಗಳ ಸ್ಥಿತಿ ಏನು ಅನ್ನೋ ಗೊಂದಲ ಉಂಟಾಗಿತ್ತು. ಎಲ್ಲಾ ಶಾಸಕರನ್ನು ಅನರ್ಹ ಮಾಡುವ ಮೂಲಕ ಹಣದಾಸೆಗೆ ಬಲಿಯಾದವರನ್ನು ಶಿಕ್ಷಿಸಬೇಕು ಅನ್ನೋ ಕೂಗು ಸಹ ಸೋಷಿಯಲ್ ಮೀಡಿಯಾದಲ್ಲಿ ಎದ್ದಿತ್ತು. ಇದಕ್ಕೆಲ್ಲಾ ಅಂತಿಮ ಮುದ್ರೆ ಒತ್ತಲು ಸ್ಪೀಕರ್ ರಮೇಶ್ ಕುಮಾರ್ ಸಜ್ಜಾಗಿದ್ದಾರೆ.

ರಾಜೀನಾಮೆ ನೀಡಿದ ಶಾಸಕರ ಹಣೆಬರಹ ಇಂದೇ ನಿರ್ಧಾರವಾಗಲಿದ್ದು, ಎಷ್ಟು ಜನ ಶಾಸಕರ ರಾಜೀನಾಮೆ ಅಂಗೀಕಾರವಾಗಲಿದೆ ಅನ್ನೋದ್ರ ಜೊತೆಗೆ ಎಷ್ಟು ಮಂದಿ ಅನರ್ಹತೆ ಶಿಕ್ಷೆಗೆ ಒಳಗಾಗಲಿದ್ದಾರೆ ಎನ್ನುವುದು ಕೆಲವೇ ನಿಮಿಷಗಳಲ್ಲಿ ಗೊತ್ತಾಗಲಿದೆ. ಸಂಜೆ 7.30ಕ್ಕೆ ಸುದ್ದಿಗೋಷ್ಟಿ ನಡೆಸಿ ನಿರ್ಧಾರ ಪ್ರಕಟಿಸಲಿರೋ ಸ್ಪೀಕರ್ ರಮೇಶ್ ಕುಮಾರ್, ತುರ್ತು ಸುದ್ದಿ ಗೋಷ್ಟಿ ಕರೆದಿದ್ದಾರೆ. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸುದ್ದಿಗೋಷ್ಠಿ ಕರೆದಿರುವ ಸ್ಪೀಕರ್ ಏನು ಹೇಳ್ತಾರೆ ಅನ್ನೋ ಕುತೂಹಲ ಮೂಡಿಸಿದ್ದಾರೆ.

ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ರಮೇಶ್ ಜಾರಕಿಹೊಳಿ,ಮಹೇಶ್ ಕುಮಟಳ್ಳಿ ಮೇಲೆ ಹಳೇ ಪ್ರಕರಣದ ಆಧಾರದಲ್ಲಿ ಅನರ್ಹತೆ ಮಾಡಲಾಗ್ತಿದ್ದು, ಪಕ್ಷ ವಿರೋಧಿ ಚಟುವಟಿಕೆಯಡಿ ಆರ್ ಶಂಕರ್ ಅವರನ್ನು ಅನರ್ಹ ಮಾಡಲಾಗುತ್ತೆ ಎನ್ನಲಾಗ್ತಿದೆ. ಕೆಪಿಜೆಪಿಯನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸಿ ಕಾಂಗ್ರೆಸ್ ಸದಸ್ಯತ್ವ ಪಡೆದಿದ್ದರು. ಕಾಂಗ್ರೆಸ್ ಸದಸ್ಯತ್ವ ಪಡೆದ ಬಳಿಕವೂ ಬಿಜೆಪಿಗೆ ಬೆಂಬಲ ನೀಡುತ್ತೇನೆ ಎಂದು ರಾಜ್ಯಪಾಲರ ಬಳಿ ಕೊಟ್ಟಿರುವ ಬೆಂಬಲ ಪತ್ರವನ್ನೇ ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎನ್ನಲಾಗ್ತಿದೆ. ಸಂಜೆ ಸ್ಪೀಕರ್ ಬೇರೆನೂ ಹೇಳ್ತಾರೋ ಅನ್ನೋ ಕಾತುರತೆ ಎಲ್ಲರಲ್ಲೂ ಮನೆ ಮಾಡಿದೆ.

Leave a Reply