ತ್ರಿಶಂಕು ಸ್ಥಿತಿಯಲ್ಲಿ ಅತೃಪ್ತರು! ಅತ್ತ ಸುಪ್ರೀಂ ಕೋರ್ಟ್, ಇತ್ತ ಸ್ಪೀಕರ್ ಗುಟುರು ಹಾಕಿದ್ದೇಕೆ?

ಡಿಜಿಟಲ್ ಕನ್ನಡ ಟೀಮ್:

ಅತ್ತ ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹಟಗಿ ವಿರುದ್ಧ ಸುಪ್ರೀಂ ಕೋರ್ಟ್ ಕ್ಲಾಸ್ ತೆಗೆದುಕೊಂಡರೆ, ಇತ್ತ ಅತೃಪ್ತ ಶಾಸಕರ ವಿರುದ್ಧ ಸ್ಪೀಕರ್ ಗುಟುರು ಹಾಕಿದ್ದಾರೆ.

ಹೌದು, ಅತೃಪ್ತ ಶಾಸಕರ ಪರ ವಾದ ಮಂಡಿಸುತ್ತಿರುವ ಮುಕುಲ್ ರೋಹಟಗಿ ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ ಚಾಟಿ ಬೀಸಿದ್ದು, ‘ನಿಮಗೆ ಬೇಕಾಗಿದ್ದಾಗ ಮಧ್ಯರಾತ್ರಿಯಾದರೂ ಸರಿ ನಾವು ವಿಚಾರಣೆ ನಡೆಸಬೇಕು. ನಿಮಗೆ ಅಗತ್ಯ ಇದ್ದಾಗ ತುರ್ತು ವಿಚಾರಣೆಯನ್ನು ನಡೆಸಿ ಆದೇಶ ನೀಡಬೇಕು. ಆದರೆ, ನಾವು ಕರೆದಾಗ ಕೋರ್ಟಿಗೆ ನೀವು ಹಾಜರಾಗಲ್ಲ’ ಎಂದು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

‘‌ನಿನ್ನೆಯೇ ಜೂನಿಯರ್ ಮೂಲಕ ತಿಳಿಸಿದ್ದರೂ ಸಹ ಕೋರ್ಟ್ ಗೆ ಬಂದಿಲ್ಲ. ವಿಶ್ವಾಸಮತ ಯಾಚನೆ ವಿವಾದ ಮುಗಿದು 2 ದಿನ ಕಳೆದರೂ ಕೋರ್ಟ್ಗೆ ಯಾವುದೇ ಮಾಹಿತಿ ನೀಡಿಲ್ಲ’ ಎಂದು ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಅವರ ನೇತೃತ್ವದ ಪೀಠ ಕಿಡಿಕಾರಿದೆ.

ಇತ್ತ ರಾಜೀನಾಮೆ ವಿಚಾರವಾಗಿ ಸ್ಪೀಕರ್ ರಮೇಶ್ ಕುಮಾರ್ ಅತೃಪ್ತ ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಅತೃಪ್ತ ಶಾಸಕರನ್ನು ವಿಚಾರಣೆಗೆ ಕರೆದಿದ್ದೆ. ಆದರೆ ಅವರು ವಿಚಾರಣೆಗೆ ಹಾಜರಾಗಿಲ್ಲ. ಪದೇಪದೆ ನೋಟಿಸ್​ ನೀಡಲು ನನಗೆ ಬೇರೆ ಕೆಲಸವಿಲ್ವಾ?

ನೋಟಿಸ್ ನೀಡಿದ್ದರೂ ಅವರು ಬಂದಿಲ್ಲ ಎಂದ ಮೇಲೆ ಅಲ್ಲಿಗೆ ಕತೆ ಮುಗೀತು. ದೇಶದಲ್ಲಿ ಎಲ್ಲರಿಗೂ ಕಾನೂನು ಒಂದೇ. ರಾಷ್ಟ್ರಪತಿಯಿಂದ ಹಿಡಿದು ಕೂಲಿ ಮಾಡೋನವರೆಗೂ ಎಲ್ಲರಿಗೂ ಅನ್ವಯವಾಗುವುದು ಒಂದೇ ಕಾನೂನು’ ಎಂದು ಸ್ಪೀಕರ್ ಎಚ್ಚರಿಕೆ ನೀಡಿದ್ದಾರೆ.

Leave a Reply