ಮಧ್ಯಪ್ರದೇಶದಲ್ಲಿ ಮೈ ಸುಟ್ಟುಕೊಂಡ ಬಿಜೆಪಿ ನಾಯಕತ್ವ..! ಯಾಕೆ ಗೊತ್ತಾ..?

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕದಲ್ಲಿ ಕಾಂಗ್ರೆಸ್, ಜೆಡಿಎಸ್ ಶಾಸಕರ ರಾಜೀನಾಮೆ ಕೊಡಿಸಿ ಮುಂಬೈ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿಸುವ ಮೂಲಕ ರಾಜ್ಯದ ಮೈತ್ರಿ ಸರ್ಕಾರ ಪತನಕ್ಕೆ ಬಿಜೆಪಿ ಕಾರಣವಾಯ್ತು. ಕರ್ನಾಟಕದಲ್ಲಿ ಸರ್ಕಾರ ಬಿದ್ದ ಮರು ದಿನವೇ ಅಂದರೆ ಬುಧವಾರ ಮಧ್ಯಪ್ರದೇಶದಲ್ಲಿ ಬಿಜೆಪಿ ನಾಯಕರು ಕೈಚಳಕ ತೋರಿಸುತ್ತಾರೆ. ಅಲ್ಲೂ ಕಾಂಗ್ರೆಸ್, ಬಿಜೆಪಿಗೆ ಇರುವುದು ಕೇವಲ ಐದು ಸ್ಥಾನಗಳು ಅನ್ನೋ ಮಾತುಗಳು ಕೇಳಿಬಂದಿದ್ವು. ಆದ್ರೆ ಬಿಜೆಪಿ ನಾಯಕರ ಯೋಜನೆಗೆ ಕಾಂಗ್ರೆಸ್ ಸರಿಯಾಗಿಯೇ ಗುನ್ನಾ ಕೊಟ್ಟಿದೆ. ಕಾಂಗ್ರೆಸ್ ಮಾಡಿರುವ ಬಿಸಿ ಇಡೀ ದೆಹಲಿಯ ಬಿಜೆಪಿ ನಾಯಕರ ನಿದ್ದೆಗೆಡಿಸಿದೆ.

ಮಧ್ಯಪ್ರದೇಶ ವಿಧಾನಸಭೆಯಲ್ಲಿ 230 ಸ್ಥಾನಗಳಿದ್ದು ಸರಳ ಬಹುಮತಕ್ಕೆ 116 ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಅನಿವಾರ್ಯ. ಆದ್ರೆ ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಶಿವರಾಜ್ ಸಿಂಗ್ ಚೌವ್ಹಾಣ್ ನೇತೃತ್ವದ ಬಿಜೆಪಿ ಕಳೆದ 15 ವರ್ಷಗಳ ಆಡಳಿತ ವಿರೋಧಿ ಅಲೆಯಿಂದ 109 ಸ್ಥಾನಗಳಿಗೆ ತೃಪ್ತಿಪಡಬೇಕಾಯ್ತು. ಅದೇ ರೀತಿ ಕಳೆದ 15 ವರ್ಷಗಳಿಂದ ವಿರೋಧ ಪಕ್ಷದಲ್ಲಿ ಕಾಯಂ ಸದಸ್ಯನಾಗಿದ್ದ ಕಾಂಗ್ರೆಸ್ 114 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಉಳಿದಂತೆ ಪಕ್ಷೇತರರು 4 ಸ್ಥಾನ, ಎಸ್‌ಪಿ 1, ಬಿಎಸ್‌ಪಿ 2 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾದವು. ಅಂತಿಮವಾಗಿ ಕಮಲನಾಥ್ ನೇತೃತ್ವದಲ್ಲಿ ಸರ್ಕಾರ ಅಧಿಕಾರ ಹಿಡಿದಿದ್ದು, ಈ ಬಾರಿ‌ ಕರ್ನಾಟಕದಲ್ಲಿ ಆಪರೇಷನ್ ಕಮಲದ ಬಳಿಕ ಮಧ್ಯಪ್ರದೇಶವನ್ನು ಕಮಪಡೆ ಕಿತ್ತುಕೊಳ್ಳಲಿದೆ ಎನ್ನಲಾಗಿತ್ತು. ಆದ್ರೀಗ ಉಲ್ಟಾ ಆಗಿದೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಒಂದು ತಿದ್ದುಪಡಿ ವಿಧೇಯಕ ಮಂಡನೆ ಮಾಡಿತ್ತು. ಕ್ರಿಮಿನಲ್ ಕಾನೂನು ತಿದ್ದುಪಡಿ ವಿಧೇಯಕ ವಿರೋಧಿಸಿದ ಬಿಜೆಪಿ ಸದನದಿಂದ ಹೊರನಡೆದಿತ್ತು. ಆದ್ರೆ ಬಿಜೆಪಿ‌ ಪಕ್ಷದ ಇಬ್ಬರು ಶಾಸಕರು ಮಾತ್ರ ಕಾಂಗ್ರೆಸ್ ಮಂಡಿಸಿದ ವಿಧೇಯಕದ ಪರವಾಗಿ ಮತ ಚಲಾಯಿಸುವ ಮೂಲಕ ಕ್ರಾಸ್ ವೋಟಿಂಗ್ ಮಾಡಿದ್ದಾರೆ.

ಮುಖ್ಯಮಂತ್ರಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಂಡಿಸಿದ್ದ ವಿಧೇಯಕದ ಪರವಾಗಿ ಬಿಜೆಪಿಯ ಇಬ್ಬರು ಶಾಸಕರು ಅಡ್ಡ ಮತದಾನ ಮಾಡುವ ಮೂಲಕ‌‌ ಬಿಜೆಪಿಗೆ ಸಡ್ಡು ಹೊಡೆದಿದ್ದಾರೆ. ಸ್ಪೀಕರ್ ಸೇರಿ 121 ಮತಗಳು ಬರಬೇಕಿದ್ದ ಜಾಗದಲ್ಲಿ ಸ್ಪೀಕರ್ ಹೊರತುಪಡಿಸಿ 122 ಮತಗಳಿಂದ ವಿಧೇಯಕ ಪಾಸ್ ಆಗಿದೆ. ಸರ್ಕಾರ ಉರುಳಿಸಬೇಕು ಅನ್ನೋ ಲೆಕ್ಕಾಚಾರ ಹಾಕುತ್ತಿದ್ದ ಕಮಲ ನಾಯಕರಿಗೆ ಮೈ ಸುಟ್ಟುಕೊಂಡ ಅನುಭವ ಆಗಿದೆ.

Leave a Reply