ಬಿಎಸ್ ವೈಗೆ ‘ಶುಕ್ರ’ದೆಸೆ! ಇಂದೇ ರಾಜ್ಯಪಾಲರಲ್ಲಿ ಹಕ್ಕು ಮಂಡನೆ, ಪ್ರಮಾಣ ವಚನ

ಡಿಜಿಟಲ್ ಕನ್ನಡ ಟೀಮ್:

ಮತ್ತೆ ರಾಜ್ಯದ ಮುಖ್ಯಮಂತ್ರಿ ಗದ್ದುಗೆ ಅಲಂಕರಿಸಬೇಕೆಂಬ ಹಂಬಲದಲ್ಲಿದ್ದ ಬಿಎಸ್ ಯಡಿಯೂರಪ್ಪನವರಿಗೆ ಶುಕ್ರವಾರ ಶುಕ್ರ ದೆಸೆ ಸಿಕ್ಕಿಂತಾಗಿದೆ. ಕಳೆದ ಮೂರು ದಿನಗಳಿಂದ ಸರ್ಕಾರ ರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಗಾಗಿ ಕಾದು ಕುಳಿತಿದ್ದ ಯಡಿಯೂರಪ್ಪನವರಿಗೆ ಅಮಿತ್ ಶಾ ಬೆಳಗ್ಗೆ ದೂರವಾಣಿ ಕರೆ ಮಾಡಿ ಸರ್ಕಾರ ರಚಿಸಿ ಎಂದು ನಿರ್ದೇಶನ ನೀಡಿದ್ದಾರೆ. ಅಷ್ಟೇ ಅಲ್ಲ ಇಂದೇ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಿ ಇಂದೇ ಪ್ರಮಾಣ ವಚನ ಸ್ವೀಕರಿಸಿ ಎಂದು ಶಾ ತಿಳಿಸಿದ್ದಾರೆ.

ಹೈ ಕಮಾಂಡ್ ನಿಂದ ನಿರ್ದೇಶನ ಬರುತ್ತಿದ್ದಂತೆ ಚುರುಕುಗೊಂಡ ಬಿ.ಎಸ್ ಯಡಿಯೂರಪ್ಪ, ಶಾಸಕಾಂಗ ಪಕ್ಷದ ಸಭೆಯನ್ನೂ ನಡೆಸದೆ ರಾಜ್ಯಪಾಲರನ್ನು ಭೇಟಿಗಾಲು ತೆರಳಿದ್ದಾರೆ. ರಾಜ್ಯಪಾಲರನ್ನು ಭೇಟಿ ಮಾಡುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಬಿಎಸ್ ವೈ, ‘ನಾನು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡುವಂತೆ ಅವಕಾಶ ಕೋರಲು ಹೋಗುತ್ತಿದ್ದೇನೆ. ಇಂದು ಮಧ್ಯಾಹ್ನ 12.30ಕ್ಕೆ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ಮಾಡಿಕೊಡಿ ಎಂದು ಕೇಳಿಕೊಳ್ಳುತ್ತೇನೆ. ನಾನು ಈಗಾಗಲೇ ವಿರೋಧ ಪಕ್ಷದ ನಾಯಕರಾಗಿರುವುದರಿಂದ ಶಾಸಕಾಂಗ ಪಕ್ಷದ ಸಭೆ ಅಗತ್ಯವಿಲ್ಲ’ ಎಂದು ತಿಳಿಸಿದರು.

ಕೇವಲ 2 ಗಂಟೆಯಲ್ಲಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಿದ್ಧತೆ ಸಾಧ್ಯವಾಗುವುದಿಲ್ಲ ಎಂದು ರಾಜಭವನ ಸಿಬ್ಬಂದಿ ತಿಳಿಸಿರುವ ಹಿನ್ನೆಲೆಯಲ್ಲಿ ಇಂದು ಸಂಜೆ 6 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಇಂದು ಕೇವಲ ಬಿಎಸ್ ಯಡಿಯೂರಪ್ಪನವರು ಮಾತ್ರ ಪ್ರಮಾಣ ವಚನ ಸ್ವೀಕರಿಸಲಿದ್ದು, ನಂತರ ಹೈಕಮಾಂಡ್ ನಿರ್ದೇಶನದ ಮೇರೆಗೆ ಸಚಿವ ಸಂಪುಟ ಹಂಚಿಕೆಯಾಗುವ ನಿರೀಕ್ಷೆ ಇದೆ. ಇದರೊಂದಿಗೆ ಈಗ ಬಿಎಸ್ ವೈ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Leave a Reply