ಡಿಜಿಟಲ್ ಕನ್ನಡ ಟೀಮ್:
ಇಂದು ಸಂಜೆ 6 ಗಂಟೆಗೆ 4ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿರುವ ಬಿ.ಎಸ್ ಯಡಿಯೂರಪ್ಪ, ಬಹುಮತ ಸಾಬೀತು ಪಡಿಸಬೇಕಿದೆ.
ಪ್ರಮಾಣವಚನ ಸ್ವೀಕಾರ ಮಾಡಿದ ಬಳಿಕ ಮೊದಲು ಬಹುಮತ ಸಾಬೀತು ಮಾಡಬೇಕು ಎಂದು ರಾಜ್ಯಪಾಲರು ತಿಳಿಸಿದ್ದು, ಅದರಂತೆ ಸೋಮವಾರ ತಮ್ಮ ಪಕ್ಷಕ್ಕೆ ಬಹುಮತ ಇದೆ ಎಂಬುದನ್ನು ತೋರಿಸಬೇಕಿದೆ.
ಈಗಾಗಲೇ ಅಧಿವೇಶನ ಕರೆಯಲು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಬಿ.ಎಸ್ ಯಡಿಯೂರಪ್ಪ ಮನವಿ ಮಾಡಿದ್ದು, ಸೋಮವಾರ ವಿಶೇಷ ಅಧಿವೇಶನದಲ್ಲಿ ನೂತನ ಮುಖ್ಯಮಂತ್ರಿಯಾಗಿ ಬಹುಮತ ಸಾಬೀತುಪಡಿಸಲಿದ್ದಾರೆ. ಬಿಜೆಪಿ ಸರ್ಕಾರ ಬಹುಮತ ಸಾಬೀತು ಪಡಿಸುವಲ್ಲಿ ಯಶಸ್ವಿಯಾಗುತ್ತಾ ಅಥವಾ ಬಿಎಸ್ ವೈ ಕೇವಲ ಮೂರು ದಿನಕ್ಕೆ ಮುಖ್ಯಮಂತ್ರಿ ಆಗ್ತಿದ್ದಾರಾ ಅನ್ನೋ ವಿಚಾರ ಸೋಮವಾರ ಸದನದಲ್ಲಿ ಗೊತ್ತಾಗುತ್ತದೆ.
ಅಸಲಿ ರಾಜಕೀಯದ ಆಟ ಈಗ ಶುರುವಾಗಲಿದ್ದು, ಪ್ರಮಾಣವಚನ ಸ್ವೀಕಾರಕ್ಕೆ ಯಾವುದೇ ಅಡ್ಡಿ ಆತಂಕವಿಲ್ಲ. ಅತಿದೊಡ್ಡ ಪಕ್ಷವಾಗಿರುವ ಬಿಜೆಪಿ ಸರ್ಕಾರ ರಚನೆ ಮಾಡಬಹುದು. 13 ಶಾಸಕರ ರಾಜೀನಾಮೆ ಇನ್ನು ಅಂಗೀಕಾರವಾಗಿಲ್ಲ. ಹೀಗಾಗಿ ಬಹುಮತಕ್ಕೆ 111 ಮತಗಳ ಅವಶ್ಯಕತೆ ಇದೆ. ಸದ್ಯ 105+1 ಒಟ್ಟು 106 ಸದಸ್ಯ ಬಲ ಹೊಂದಿರುವ ಬಿಜೆಪಿ ಇನ್ನು 5 ಮತಗಳನ್ನು ಎಲ್ಲಿಂದ ತರುತ್ತಾರೆ ಅನ್ನೋ ಲೆಕ್ಕಾಚಾರ ಶುರುವಾಗಿದೆ.
ಈಗಾಗಲೇ ರಾಜೀನಾಮೆ ನೀಡಿರೋ ಶಾಸಕರ ರಾಜೀನಾಮೆ ವಿಚಾರ ಇನ್ನೂ ಕೂಡ ಇತ್ಯರ್ಥ ಆಗಿಲ್ಲ. ಒಂದು ವೇಳೆ ರಾಜೀನಾಮೆ ನೀಡಿರುವ ಶಾಸಕರು ಕಲಾಪಕ್ಕೆ ಗೈರು ಹಾಜರಾದರೆ ಸದನದ ಬಲಾಬಲ ಮೊನ್ನೆ ವಿಶ್ವಾಸ ಮತ ಯಾಚಿಸಿದ ಹಂತಕ್ಕೆ ಕುಸಿಲಿದೆ. ಆಗ ವಿಶ್ವಾಸ ಮತದಲ್ಲಿ ಬಿಎಸ್ವೈ ಗೆಲ್ಲಬಹುದು ಅನ್ನೋದು ಕಮಲಪಡೆಯ ಲೆಕ್ಕಾಚಾರ. ಒಂದು ವೇಲೆ ಕಮಲಪಡೆಯ ಲೆಕ್ಕಾಚಾರ ಸಕ್ಸಸ್ ಆದ್ರೆ ಸಿಎಂ ಆಗಿ ಮುಂದುವರಿಯಲಿದ್ದಾರೆ. ಏರುಪೇರಾದ್ರೆ ಮತ್ತೆ ಮೂರು ದಿನಕ್ಕೆ ರಾಜೀನಾಮೆ ಸಲ್ಲಿಸಬೇಕಾಗುತ್ತದೆ.