ಅಂತೂ ಇಂತು ಬಿಎಸ್ ವೈ ಪ್ರಮಾಣ! ಬಿಜೆಪಿಗೆ ಸಿಗುತ್ತಾ ಜೆಡಿಎಸ್ ವಿಶ್ವಾಸ?

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಾಗಿದೆ. ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಹಸಿರು ಶಾಲು ಹೊದ್ದು ಆಗಮಿಸಿದ ಯಡಿಯೂರಪ್ಪ, ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ್ದಾರೆ. ನೂರಾರು ಗಣ್ಯರು ಹಾಗೂ ಸಾವಿರಾರು ಜನ ಅಭಿಮಾನಿಗಳ ಎದುರು ಪ್ರತಿಜ್ಞಾವಿಧಿ ಸ್ವೀಕರಿಸಿದ್ರು. ನಾಲ್ಕನೇ ಬಾರಿ ಈ ರಾಜ್ಯದ ಮುಖ್ಯಮಂತ್ರಿ ಆಗಿ ಪ್ರಮಾಣ ಸ್ವೀಕಾರ ಮಾಡಿರುವ ಬಿ.ಎಸ್ ಯಡಿಯೂರಪ್ಪ ಅವರ ಸರ್ಕಾರದ ಸ್ಥಿತಿ ತುಂಬಾ ಉತ್ತಮವಾಗಿಯೇನು ಇಲ್ಲ.

ಸೋಮವಾರ ಸದನದಲ್ಲಿ ಬಿಎಸ್ ಯಡಿಯೂರಪ್ಪ ವಿಶ್ವಾಸಮತ ಯಾಚನೆ ಮಾಡಬೇಕಿದ್ದು, ಒಂದು ವೇಳೆ ವಿಶ್ವಾಸಮತ ಯಾಚನೆ ವೇಳೆ ರಾಜಕೀಯ ಹೈಡ್ರಾಮಾ ನಡೆದರೆ ಮತ್ತೆ ಬಿಜೆಪಿ ಸರ್ಕಾರ ಬಿದ್ದು ಹೋಗಲಿದೆ. ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆದಿದ್ದ ಬಿಜೆಪಿ, ಇದೀಗ ಸರ್ಕಾರವನ್ನು ಸ್ಥಿರವಾಗಿ ಮುಂದುವರಿಸಲು ಮತ್ತಷ್ಟು ಆಪರೇಷನ್ ಕಮಲ ಅನಿವಾರ್ಯವಾಗಿದೆ. ಈಗಾಗಲೇ ಆಪರೇಷನ್ ಕಮಲದಿಂದ ರಾಜ್ಯಾದ್ಯಂತ ಕೆಟ್ಟ ಹೆಸರನ್ನು ಪಡೆದಿರುವ ಕೇಸರಿ ಸೇನೆಯ ಒಂದು ತಂಡ ಮತ್ತೆ ಆಪರೇಷನ್ ಕಮಲ ಮಾಡದಿರಲು ನಿರ್ಧಾರ ಮಾಡಿದೆ ಎಂದು ತಿಳಿದುಬಂದಿದೆ. ಇದೇ ಕಾರಣಕ್ಕಾಗಿ ಜೆಡಿಎಸ್‌ಗೆ ಬಾಹ್ಯ ಬೆಂಬಲ ನೀಡುವಂತೆ ಕೋರಿಕೊಂಡಿದೆ ಅನ್ನೋ ಮಾಹಿತಿಗಳು ಹರಿದಾಡ್ತಿವೆ.

ಜೆಡಿಎಸ್ ಶಾಸಕರನ್ನು ಬಿಜೆಪಿ ನಾಯಕರು ಈಗಾಗಲೇ ಸಂಪರ್ಕ ಮಾಡುತ್ತಿದ್ದು, ಮತ್ತಷ್ಟು ಜನರನ್ನು ಆಪರೇಷನ್ ಕಮಲದ ಮೂಲಕ ಸರ್ಕಾರವನ್ನು ಸ್ಥಿರವಾಗಿ ಇಟ್ಟುಕೊಳ್ಳಲು ಮುಂದಾಗಿದೆ. ಆಪರೇಷನ್ ಕಮಲ ಬೇಡ ಎನ್ನುತ್ತಿರುವ ಬಿಜೆಪಿ ಒಂದು ಗುಂಪು ಜೆಡಿಎಸ್ ನಾಯಕರನ್ನು ಸಂಪರ್ಕ ಮಾಡಿದ್ದು, ಬಾಹ್ಯ ಬೆಂಬಲ ನೀಡುವ ಮೂಲಕ ಅಧಿಕಾರದಲ್ಲಿ‌ ಭಾಗಿಯಾದರೆ ಜೆಡಿಎಸ್ ಶಾಸಕರ ಕ್ಷೇತ್ರಗಳಿಗೂ ಒಳ್ಳೆಯ ಅನುದಾನ ಸಿಗಲಿದ್ದು, ರಾಜ್ಯದ ಅಭಿವೃದ್ಧಿ ಮಾಡಬಹುದು ಎನ್ನುವ ಸಂದೇಶ ಕಳುಹಿಸಿದ್ದಾರೆ. ಇದೇ ಕಾರಣಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ, ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಸಭೆ ಕರೆದಿದ್ದು, ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗ್ತಿದೆ. ಜೆಡಿಎಸ್ ಶಾಸಕರಿಗೂ ಕೂಡ ಬಿಜೆಪಿ ಸರ್ಕಾರದಲ್ಲಿ ಭಾಗಿಯಾಗುವ ಮನಸ್ಸಿದ್ದು, ಯಾವ ನಿರ್ಧಾರ ಹೊರ ಬೀಳಲಿದೆ ಅನ್ನೋ ಕುತೂಹಲ ಹೆಚ್ಚಾಗುತ್ತಿದೆ.

Leave a Reply