ಅತೃಪ್ತರಿಗೆ ಅನರ್ಹತೆ ಶಾಕ್ ಕೊಟ್ಟ ಸ್ಪೀಕರ್!

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ ಅತೃಪ್ತ ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹ ಮಾಡಿ ಆದೇಶ ಹೊರಡಿಸಿದ್ದಾರೆ.

ಇತ್ತೀಚೆಗೆ ಆರ್.ಶಂಕರ್, ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿ ಅವರನ್ನು ಅನಾರ್ಹಗೊಳಿಸಿದ್ದ ಸ್ಪೀಕರ್, ಭಾನುವಾರ ಇನ್ನುಳಿದ 12 ಶಾಸಕರ ವಿರುದ್ಧದ ತೀರ್ಪು ಪ್ರಕಟಿಸಿದ್ದಾರೆ.

ಇದರೊಂದಿಗೆ ಜೆಡಿಎಸ್ ನ ಎಚ್.ವಿಶ್ವನಾಥ್, ಗೋಪಾಲಯ್ಯ, ನಾರಾಯಣಗೌಡ, ಕಾಂಗ್ರೆಸ್ ನ ಮುನಿರತ್ನ, ಎಸ್.ಟಿ ಸೋಮಶೇಖರ್, ಭೈರತಿ ಬಸವರಾಜು, ಆನಂದ್ ಸಿಂಗ್, ಶಿವರಾಂ ಹೆಬ್ಬಾರ್, ರೋಷನ್ ಬೇಗ್, ಶ್ರೀಮಂತ ಪಾಟೀಲ್, ಪ್ರತಾಪ್ ಗೌಡ ಪಾಟೀಲ್, ಎಂಟಿಬಿ ನಾಗರಾಜ್, ಸುಧಾಕರ್, ಎಂಬಿ ಪಾಟೀಲ್ ಅವರು 15ನೇ ವಿಧಾನಸಭೆಯ ಸದಸ್ಯತ್ವ ಅನರ್ಹಗೊಂಡಿದ್ದಾರೆ.

ಈ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಕಾನೂನಿನ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ. ಮಾಧ್ಯಮಗಳಲ್ಲಿ ಪ್ರತಿಕ್ರಿಯೆ ನೀಡಿರುವ ಎಚ್.ವಿಶ್ವನಾಥ್, ‘ಸ್ಪೀಕರ್ ಅನರ್ಹತೆ ತೀರ್ಮಾನ ಏಕಪಕ್ಷೀಯವಾಗಿದೆ. ಅವರು ಕೇವಲ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಕುಮಾರಸ್ವಾಮಿ ಅವರ ಮನವಿಯನ್ನು ಮಾತ್ರ ಆಲಿಸಿದ್ದು ಆತುರದ ನಿರ್ಧಾರ ಕೈಗೊಂಡಿದ್ದಾರೆ. ನಾವು ಬೇರೆ ಹುದ್ದೆ ಬಯಸಿ ರಾಜೀನಾಮೆ ಕೊಟ್ಟಿಲ್ಲ. ಬದಲಿಗೆ ಕುಟುಂಬ ರಾಜಕಾರಣ, ಹೊಲಸು ರಾಜಕಾರಣದಿಂದ ಬೇಸತ್ತು ರಾಜೀನಾಮೆ ನೀಡಿದ್ದೇವೆ. ಈ ತೀರ್ಪಿನ ವಿರುದ್ಧ ನಾವು ಕಾನೂನು ಹೋರಾಟ ನಡೆಸುತ್ತೇವೆ’ ಎಂದು ತಿಳಿಸಿದರು.

Leave a Reply