ಬಿಜೆಪಿ ನಿಯಂತ್ರಿಸುತ್ತಿರೊ ಮೋದಿ- ಶಾರ ಕೈ ಕಟ್ಟಿಹಾಕಿದ ಬಿಎಸ್ ವೈ!

ಡಿಜಿಟಲ್ ಕನ್ನಡ ಟೀಮ್:

2014ರ ಲೋಕಸಭೆ ಚುನಾವಣೆಯಿಂದ ಇಲ್ಲಿಯವರೆಗೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದೇಶದಾದ್ಯಂತ ಕೇಸರಿ ಹೆಜ್ಜೆ ಗುರುತು ಮೂಡಿಸಲು ಪಣ ತೊಟ್ಟಿದ್ದಾರೆ. ಪಕ್ಷದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿರುವ ಈ ಇಬ್ಬರು ನಾಯಕರು ಹೇಳಿದ್ದೆ ಬಿಜೆಪಿ ಪಾಳೆಯದಲ್ಲಿ ವೇದ ವಾಕ್ಯ. ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣದವೆರಗೂ ಪ್ರತಿ ಹಂತದಲ್ಲೂ ಈ ಇಬ್ಬರ ತೀರ್ಮಾನದಂತೆ ಇತರ ನಾಯಕರು ನಡೆಯ ಬೇಕು. ಆದರೆ ಕರ್ನಾಟಕದ ವಿಚಾರದಲ್ಲಿ ಈ ಇಬ್ಬರನ್ನು ಬಿ.ಎಸ್ ಯಡಿಯೂರಪ್ಪ ಪರೋಕ್ಷವಾಗಿ ಕಟ್ಟಿ ಹಾಕಿದ್ದಾರೆ.

ಹೌದು, ಮೇಲ್ನೋಟಕ್ಕೆ ಹೈ ಕಮಾಂಡ್ ಅನುಮತಿ ಮೇರೆಗೆ ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತಿದೆ ಎಂದು ಕಾಣುತ್ತಿದೆ. ಈ ಸರ್ಕಾರದ ಮೇಲೆ ಅಮಿತ್ ಶಾರ ಕಣ್ಣು ನೆಟ್ಟಿರುತ್ತದೆ. ಸಚಿವ ಸಂಪುಟದಿಂದ ಹಿಡಿದು ಪ್ರತಿಯೊಂದು ವಿಚಾರದಲ್ಲೂ ಹೈಕಮಾಂಡ್ ಹಸ್ತಕ್ಷೇಪ ಖಚಿತ ಎಂದು ಹೇಳಲಾಗುತ್ತಿದೆ. ಇಷ್ಟೇಲ್ಲಾ ನಿಯಂತ್ರಣ ಹೊಂದಿರುವ ಅಮಿತ್ ಶಾ ಹಾಗೂ ನರೇಂದ್ರ ಮೋದಿ, ಯಡಿಯೂರಪ್ಪನವರ ವಿಚಾರದಲ್ಲಿ ತಮ್ಮ ಸಿದ್ಧಾಂತ, ನಿರ್ಧಾರವನ್ನು ಮೂಟೆಕಟ್ಟಿ ಮೂಲೆಗಿಟ್ಟಿದ್ದಾರೆ. ಅದು ಹೇಗೆ ಎಂದರೆ…

ಬಿಎಸ್ ವೈಗೆ ಅನ್ವಯವಾಗದ ವಯೋಮಿತಿ!

2014ರಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂರುತ್ತಿದ್ದಂತೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಕ್ಷದಲ್ಲಿ 75 ವರ್ಷಕ್ಕಿಂತ ಮೇಲ್ಪಟ್ಟ ನಾಯಕರು ಸಾರ್ವಜನಿಕ ಹುದ್ದೆಯನ್ನು ಅಲಂಕರಿಸುವಂತಿಲ್ಲ ಎಂಬ ಹೊಸ ನಿಯಮ ತಂದರು. ಅದರ ಪರಿಣಾಮವಾಗಿ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಮತ್ತು ಶಾಂತ ಕುಮಾರ್ ನಂತಹ ಹಿರಿಯ ನಾಯಕರು ಮೂಲೆಗುಂಪಾದರು. 75 ವರ್ಷಕ್ಕೂ ಮೇಲ್ಪಟ್ಟವರು ಪಕ್ಷದ ಮಾರ್ಗದರ್ಶಕ ಮಂಡಲದಲ್ಲಿ ಮಾರ್ಗದರ್ಶಕರಾಗ ಬೇಕು ಎಂದು ಸೂಚನೆ ಇದಾಗಿತ್ತು. ಕೇವಲ ಈ ಮೂವರು ಮಾತ್ರವಲ್ಲ 2016ರಲ್ಲಿ 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಅವರ ಸರ್ಕಾರದ ಇಬ್ಬರು ಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹೀಗೆ 75 ವರ್ಷ ಮೇಲ್ಪಟ್ಟವರಿಗೆ ಸಾರ್ವಜನಿಕ ಹುದ್ದೆ ಅಲಂಕರಿಸುವಂತಿಲ್ಲ ಎಂಬ ಕಾನೂನನ್ನು ಶಾ ಹಾಗೂ ಮೋದಿ ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದಿದ್ದಾರೆ.

ಆದರೆ, ಈಗ 75 ವರ್ಷವಾಗಿರುವ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಇಂದು ಬಹುಮತ ಸಾಬೀತುಪಡಿಸಲಿದ್ದಾರೆ. ಅದರೊಂದಿಗೆ 75 ವರ್ಷ ಪೂರ್ಣಗೊಂಡ ನಂತರವೂ ಸಾರ್ವಜನಿಕ ಹುದ್ದೆ ಅಲಂಕರಿಸುತ್ತಿರುವ ಮೊದಲ ಬಿಜೆಪಿ ನಾಯಕರಾಗಿದ್ದಾರೆ. ಹೀಗಾಗಿ ಶಾ ಹಾಗೂ ಮೋದಿ, ಬಿಎಸ್ ವೈ ವಿಚಾರದಲ್ಲಿ ಈ ವಯೋಮಿತಿ ನಿರ್ಧಾರವನ್ನು ರಾಜಿ ಮಾಡಿಕೊಂಡಿದ್ದಾರೆ.

ಬಿಜೆಪಿಯ ಸಿಎಂ- ಜಾತಿ ಲೆಕ್ಕಾಚಾರ ಉಲ್ಟಾ

2014ರ ನಂತರ ಶಾ ಹಾಗೂ ನರೇಂದ್ರ ಮೋದಿ ದೇಶದ ಹಲವು ರಾಜ್ಯಗಳಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಪ್ರತಿ ರಾಜ್ಯದಲ್ಲೂ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ಆ ರಾಜ್ಯದಲ್ಲಿನ ಪ್ರಬಲ ಜಾತಿಯ ನಾಯಕರನ್ನು ಹೊರತುಪಡಿಸಿ ಉಳಿದ ಸಮುದಾಯದ ನಾಯಕರನ್ನು ಮುಖ್ಯಮಂತ್ರಿ ಪಟ್ಟದಲ್ಲಿ ಕೂರಿಸಿದ್ದಾರೆ. ಉದಾಹರಣೆಗೆ ಹರಿಯಾಣ, ಪಂಜಾಬ್, ಜಾರ್ಖಂಡ್, ಮಹಾರಾಷ್ಟ್ರಗಳಲ್ಲಿ ಪ್ರಬಲ ಜಾತಿ ನಾಯಕರನ್ನು ಹೊರತುಪಡಿಸಿ ಉಳಿದ ನಾಯಕರನ್ನು ಸಿಎಂ ಆಗಿ ಆಯ್ಕೆ ಮಾಡಿದ್ದಾರೆ. ಇನ್ನು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಠಾಕೂರ್ ಸಮುದಾಯವಾದರೂ ಅದು ಉತ್ತರ ಪ್ರದೇಶದಲ್ಲಿ ಮತಬ್ಯಾಂಕ್ ಲೆಕ್ಕದಲ್ಲಿ ಪ್ರಬಲ ಸಮುದಾಯವಲ್ಲ. ಆದರೆ ಕರ್ನಾಟಕದ ವಿಚಾರದಲ್ಲಿ ಇದು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಅತಿ ಹೆಚ್ಚು ಸಂಖ್ಯೆ ಹೊಂದಿರುವ ದೊಡ್ಡ ಮತಬ್ಯಾಂಕ್ ಆಗಿರುವ ಲಿಂಗಾಯತ ಸಮುದಾಯದ ಯಡಿಯೂರಪ್ಪನವರೇ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಈ ವಿಚಾರದಲ್ಲೂ ಬಿಎಸ್ ವೈ, ಮೋದಿ ಹಾಗೂ ಅಮಿತ್ ಶಾರ ಸಿದ್ಧಾಂತಕ್ಕೆ ಸವಾಲೆಸೆದಿದ್ದಾರೆ.

ಭ್ರಷ್ಟಾಚಾರ ವಿಚಾರದಲ್ಲೂ ರಾಜಿ

ಕಳೆದ 7 ವರ್ಷಗಳಿಂದ ಶಾ- ಮೇದಿ ಆಡಳಿತದ ಬಿಜೆಪಿಯಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವುದು ಭ್ರಷ್ಟಾಚಾರ ವಿರೋಧಿ ನೀತಿ. ಈ ವಿಚಾರದಲ್ಲೂ ಬಿಎಸ್ ವೈ, ಹೈ ಕಮಾಂಡ್ ನಾಯಕರಿಗೆ ಸವಾಲಾಗಿದ್ದಾರೆ. 2011ರಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪ ಹೊತ್ತು, ಲೋಕಾಯುಕ್ತ ವರದಿಯಲ್ಲಿ ಆರೋಪಿಯಾದ ಬಿಎಸ್ ವೈ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಕೆಲ ದಿನಗಳಕಾಲ ಜೈಲು ಶಿಕ್ಷೆ ಅನುಭವಿಸಿದರು. ಆದರೂ ಕೂಡ ಅಮಿತ್ ಶಾ, ಹಾಗೂ ಮೋದಿ ಕರ್ನಾಟಕದಲ್ಲಿ ಬಿಎಸ್ ಯಡಿಯೂರಪ್ಪನವರನ್ನು ಹೊರಗಿಟ್ಟು ಸರ್ಕಾರ ರಚನೆ ಮಾಡುವ ಧೈರ್ಯ ಮಾಡಲು ಸಾಧ್ಯವಾಗಿಲ್ಲ.

ಪ್ರಾದೇಶಿಕ ನಾಯಕತ್ವದ ಸವಾಲು

ಮೋದಿ ಹಾಗೂ ಅಮಿತ್ ಶಾ ಬಿಜೆಪಿಯ ಮೇಲೆ ನಿಯಂತ್ರಣ ಸಾಧಿಸಿದ ನಂತರ ಇದೇ ಮೋದಲ ಬಾರಿಗೆ ಪ್ರದೇಶಿಕ ನಾಯಕತ್ವಕ್ಕೆ ಮನ್ನಣೆ ನೀಡಲಾಗಿದೆ. ಅಮಿತ್ ಶಾ ಹಾಗೂ ಮೋದಿ ನೇತೃತ್ವದಲ್ಲೇ ಬಿಜೆಪಿ ಸಾಗುತ್ತಿದ್ದ ಪರಿಣಾಮ ಹಲವು ರಾಜ್ಯಗಳಲ್ಲಿ ಪ್ರದೇಶಿಕ ನಾಯಕರ ಪ್ರಭಾವ ಕಡಿಮೆಯಾಗಿತ್ತು. ಉದಾಹರಣೆಗೆ ರಾಜಸ್ಥಾನದಲ್ಲಿ ವಸುಂದರಾ ರಾಜೆ ಬಿಜೆಪಿಯಲ್ಲಿ ತಮ್ಮ ನಿಯಂತ್ರಣ ಕಳೆದುಕೊಳ್ಳುತ್ತಿದ್ದಾರೆ. ಅವರ ಬೆಂಬಲಿಗರನ್ನು ಮೂಲೆಗುಂಪು ಮಾಡಲಾಗುತ್ತಿದೆ. ಇನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕಟ್ಟರ್ ಹಿಂದೂ ನಾಯಕನಾಗಿ ಗುರುತಿಸಿಕೊಂಡಿದ್ದು ಪ್ರಾದೇಶಿಕ ನಾಯಕನಾಗಿ ಬೆಳೆಯುತ್ತಿದ್ದಾರೆ. ಕರ್ನಾಟದಲ್ಲಿ ಬಿಎಸ್ ಯಡಿಯೂರಪ್ಪ ಪಕ್ಷದ ಹೈಕಮಾಂಡ್ ನಾಯಕರನ್ನೇ ರಾಜಿ ಮಾಡಿಕೊಳ್ಳುವಂತೆ ಮಾಡಿರುವುದು ಇತರೆ ರಾಜ್ಯಗಳ ಪ್ರಾದೇಶಿಕ ನಾಯಕರಿಗೆ ಮಾದರಿಯಾಗಿದ್ದಾರೆ. ಇದರೊಂದಿಗೆ ಬಿಎಸ್ ವೈ ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಹೊಸ ಆಯಾಮಕ್ಕೆ ದಾರಿಯಾಗುವರೆ ಎಂಬ ಪ್ರಶ್ನೆ ಮೂಡಿದೆ.

Leave a Reply