ಅತೃಪ್ತರ ಅನರ್ಹತೆ ಬಲದೊಂದಿಗೆ ಬಿಎಸ್ ವೈ ವಿಶ್ವಾಸಮತ!

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ – ಜೆಡಿಎಸ್‌ನಿಂದ ಸಿಡಿದು ಮುಂಬೈಗೆ ಹೋಗಿದ್ದ ಎಲ್ಲಾ ಶಾಸಕರನ್ನೂ ಸ್ಪೀಕರ್ ರಮೇಶ್ ಕುಮಾರ್ ಅನರ್ಹ ಮಾಡಿ ಆದೇಶ ಮಾಡಿದ್ದಾರೆ. ಪ್ರತಿಯೊಬ್ಬ ಶಾಸಕರಿಗೂ ಸ್ಪೀಕರ್ ರಮೇಶ್ ಕುಮಾರ್ ಪ್ರತ್ಯೇಕ ಕಾರಣ ಕೊಟ್ಟು ಅನರ್ಹ ಮಾಡುವ ನಿರ್ಧಾರ ಪ್ರಕಟಿಸಿದ್ದಾರೆ. ಹೀಗಾಗಿ ಇಂದು ನಡೆಯಲಿರುವ ವಿಶೇಷ ವಿಧಾನಸಭೆ ಕಲಾಪದಲ್ಲಿ ಬಿಜೆಪಿ ಆತ್ಮವಿಶ್ವಾಸದೊಂದಿಗೆ ಬಹುಮತ ಸಾಬೀತುಪಡಿಸಲು ಮುಂದಾಗಿದೆ.

ನಿನ್ನೆ ತಡರಾತ್ರಿ ಅನರ್ಹಗೊಂಡ ಬಹುತೇಕ ಶಾಸಕರು ಸಪ್ಪೆ ಮೋರೆ ಹಾಕಿಕೊಂಡು ಬೆಂಗಳೂರಿಗೆ ಆಗಮಿಸಿದ್ದಾರೆ. ಇನ್ನುಳಿದ ಕೆಲವರು ಇಂದು ಸುಪ್ರೀಂ ಕೋರ್ಟ್ ಮೊರೆ ಹೋಗುವ ನಿರ್ಧಾರ ಮಾಡಿದ್ದು, ಸ್ಪೀಕರ್ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಲಿದ್ದಾರೆ ಅನ್ನೋದು ಗೊತ್ತಾಗಿದೆ. ಇನ್ನು ಅನರ್ಹಗೊಂಡ ಬಳಿಕ ಮಾಧ್ಯಮಗಳಿಂದಲೂ ದೂರ ಉಳಿದಿರುವ ಶಾಸಕರು ಇಂದು ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ. ಅತೃಪ್ತರು ಕೊನೆ ಕ್ಷಣದಲ್ಲಿ ಉಲ್ಟಾ ಹೊಡೆದು ಪಕ್ಷಕ್ಕೆ ಮುಖಭಂಗವಾಗುತ್ತಾ ಎಂಬ ಆತಂಕದಲ್ಲಿದ್ದ ಬಿಜೆಪಿ ಸ್ಪೀಕರ್ ತೀರ್ಪಿನಿಂದ ನಿಟ್ಟುಸಿರು ಬಿಟ್ಟಿದ್ದು, ಸರ್ಕಾರ ರಚನೆ ಖಚಿತ ಎಂಬ ಸಂತೋಷದಲ್ಲಿದ್ದಾರೆ.

ಶಾಸಕರ ಅನರ್ಹತೆ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ತೆಗೆದುಕೊಂಡ ತೀರ್ಪಿನಿಂದ ಬಿಜೆಪಿಗೆ ಅನುಕೂಲವಾಗಿದೆ. ಆದರೂ ಸರ್ಕಾರ ಉರುಳಿಸಲು ಸಾಥ್ ಕೊಟ್ಟ ಶಾಸಕರು ಕಾನೂನು ಕುಣಿಕೆಗೆ ಸಿಲುಕಿರುವ ಕಾರಣಕ್ಕೆ ಅವರನ್ನು ಬಚಾವ್ ಮಾಡುವ ಎಲ್ಲಾ ಹೋರಾಟದಲ್ಲಿ ನೆರವು ನೀಡಲು ಬಿಜೆಪಿ ನಿರ್ಧಾರ ಮಾಡಿದೆ. ಆದರೆ ಅನರ್ಹತೆಯಿಂದಾಗಿ ಬಹುಮತ ಸಾಬೀತು ಮಾತ್ರವಲ್ಲದೇ, ಸಚಿವ ಸಂಪುಟದಲ್ಲಿ ಅತೃಪ್ತರಿಗೆ ಸ್ಥಾನ ನೀಡುವ ತಲೆನೋವು ಕೂಡ ಬಿಜೆಪಿಗೆ ನಿವಾರಣೆಯಾಗಿದೆ.

ಬಿ.ಎಸ್ ಯಡಿಯೂರಪ್ಪ ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡಲಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಏನಾದರೂ ತಂತ್ರ ಮಾಡಬಹುದು ಎಂಬ ಗುಮಾನಿಯಿಂದ ನಿನ್ನೆ ರಾತ್ರಿ ಬೆಂಗಳೂರಿನ ಚಾನ್ಸರಿ ಪೆವಿಲಿಯನ್ ಹೊಟೇಲ್‌ನಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಸಿ ಎಲ್ಲಾ ಶಾಸಕರನ್ನು ಹೋಟೆಲ್‌ನಲ್ಲೇ ಹಿಡಿದಿಡುವ ಕೆಲಸ ಮಾಡಲಾಗಿದೆ. ಸುಮಾರು 70 ರಿಂದ 80 ಶಾಸಕರು ಹೊಟೇಲ್‌ನಲ್ಲೇ ವಾಸ್ತವ್ಯ ಮಾಡಿದ್ದು ಹಿರಿಯ ನಾಯಕರು ಮಾತ್ರ ಮನೆಗಳಿಗೆ ವಾಪಸ್ ಆಗಿದ್ದಾರೆ. ಬಿಜೆಪಿ ಶಾಸಕಾಂಗ ಸಭೆಯಲ್ಲಿ ಒಟ್ಟು 98 ಶಾಸಕರು ಭಾಗಿಯಾಗಿದ್ದು, ಇನ್ನೂ ಏಳು ಮಂದಿ ಶಾಸಕರು ಗೈರಾಗಿದ್ದರು. ಈ ಅಂಶ ಬಿಜೆಪಿ ನಾಯಕರಿಗೆ ತಲೆ ನೋವು ತರಿಸಿದ್ದು, ಇಂದಿನ ವಿಶ್ವಾಸಮತ ಯಾಚನೆ ಪ್ರಸ್ತಾಪದ ಬಳಿಕ ಹೈಡ್ರಾಮಾ ನಡೆಯುತ್ತಾ ಅನ್ನೋ ಕುತೂಹಲ ಹುಟ್ಟುಹಾಕಿದೆ.

Leave a Reply