ಅನರ್ಹ ಶಾಸಕರ ಕುಟುಂಬ ಸದಸ್ಯರಿಗೆ ಸಂಪುಟ ಸ್ಥಾನ; ರಾಜ್ಯ ಬಿಜೆಪಿಯಲ್ಲಿ ತಿಕ್ಕಾಟ!

ಡಿಜಿಟಲ್ ಕನ್ನಡ ಟೀಮ್:

ಶಾಸಕ ಸ್ಥಾನದಿಂದ ಅನರ್ಹಗೊಂಡಿರುವವರ ಕುಟುಂಬ ಸದಸ್ಯರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸುವ ಸಿಎಂ ಯಡಿಯೂರಪ್ಪನವರ ನಿರ್ಧಾರಕ್ಕೆ ರಾಜ್ಯ ಬಿಜೆಪಿಯ ಹಿರಿಯ ಮುಖಂಡರು ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಸರಕಾರ ಆರಂಭದಲ್ಲೇ ತಿಕ್ಕಾಟ ಎದುರಿಸುವಂತಾಗಿದೆ.

ಅನರ್ಹ ಶಾಸಕರ ಪತ್ನಿ, ಪುತ್ರ, ಪುತ್ರಿ, ಅಳಿಯ – ಹೀಗೆ ಅವರ ಕುಟಂಬ ಸದಸ್ಯರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಿ, ಮರುಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡುವ ಮೂಲಕ ಮೈತ್ರಿ ಸರಕಾರ ಉರುಳಿಸಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲು ಕಾರಣರಾದವರ ಋಣ ತೀರಿಸುವುದು ಯಡಿಯೂರಪ್ಪನವರ ನಿರ್ಣಯ. ಆದರೆ ಇದಕ್ಕೆ ರಾಜ್ಯ ಬಿಜೆಪಿ ಘಟಾನುಘಟಿ ನಾಯಕರ ಸಮ್ಮತವಿಲ್ಲ. ಅನರ್ಹ ಶಾಸಕರು ಕಾನೂನು ಹೋರಾಟದಲ್ಲಿ ಗೆದ್ದು ಬರಲಿ, ನಂತರ ಬೇಕಾದರೆ ಅವರಲ್ಲಿ ಅರ್ಹರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸೋಣ. ಒಂದೊಮ್ಮೆ ಮರುಚುನಾವಣೆ ಹೊತ್ತಿಗೆ ಅವರ ಕಾನೂನು ಹೋರಾಟ ಇತ್ಯರ್ಥ ಆಗದಿದ್ದರೆ ಕೆಲವು ಕಡೆ ಮಾತ್ರ ಅವರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಬಹುದು ಎನ್ನುವುದು ಅವರ ವಾದ. ಅವರು ತಮ್ಮ ವಾದವನ್ನು ಈಗಾಗಲೇ ದಿಲ್ಲಿ ವರಿಷ್ಠರಿಗೂ ತಲುಪಿಸಿದ್ದಾರೆ. ಹೀಗಾಗಿ ಅತೃಪ್ತರ ವಿಚಾರ ಯಡಿಯೂರಪ್ಪನವರ ಸರಕಾರಕ್ಕೆ ಆರಂಭದಲ್ಲೇ ಕಂಟಕಪ್ರಾಯವಾಗಿ ಪರಿಣಮಿಸಿದೆ.

ಎಲ್ಲ 17 ಮಂದಿ ಅನರ್ಹ ಶಾಸಕರ ಕುಟುಂಬದವರಿಗೆ ಸಂಪುಟ ಹಾಗೂ ನಿಗಮ-ಮಂಡಳಿಯಲ್ಲಿ ಅವಕಾಶ ಕಲ್ಪಿಸಬೇಕು ಎನ್ನುವುದು ಯಡಿಯೂರಪ್ಪನವರ ಆಶಯ. ಏಕೆಂದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪತನಗೊಂಡು, ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರುವಲ್ಲಿ ಅತೃಪ್ತ ಶಾಸಕರ ಕಾಣಿಕೆ ದೊಡ್ಡದು. ಹೀಗಾಗಿ ಅವರೆಲ್ಲರಿಗೂ ಋಣಸಂದಾಯ ಮಾಡಬೇಕು ಎನ್ನುವುದು ಅವರ ಪ್ರಾಮಾಣಿಕ ಚಿಂತನೆ. ಆದರೆ 33 ಸದಸ್ಯಬಲದ ಸಂಪುಟದಲ್ಲಿ ‘ವಲಸಿಗ ಅತೃಪ್ತರ’ಕುಟುಂಬದವರಿಗೇ ಬಹುತೇಕ ಅವಕಾಶ ಕಲ್ಪಿಸಿಬಿಟ್ಟರೆ ಪಕ್ಷಕ್ಕಾಗಿ ಹತ್ತಾರು ವರ್ಷಗಳಿಂದ ಅಹರ್ನಿಶಿ ದುಡಿಯುತ್ತಾ ಬಂದವರು ಎಲ್ಲಿಗೆ ಹೋಗಬೇಕು ಎನ್ನುವುದು ನಿಷ್ಠಾವಂತ ಬಿಜೆಪಿ ಮುಖಂಡರ ಪ್ರಶ್ನೆ. ಅತೃಪ್ತರ ವಿಧಾನಸಭೆ ಕ್ಷೇತ್ರಗಳಲ್ಲಿ ಅವರಿಗಾಗಲಿ ಅಥವಾ ಅವರ ಕುಟುಂಬ ಸದಸ್ಯರಿಗಾಗಲಿ ಟಿಕೆಟ್ ನೀಡಿದರೆ ಆ ಕ್ಷೇತ್ರಗಳಲ್ಲಿ ಅವರ ವಿರುದ್ಧ ಹೋರಾಟ ಮಾಡುತ್ತಾ ಬಂದಿರುವ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಏನು ಮಾಡಬೇಕು ಎನ್ನುವ ಪ್ರಶ್ನೆಯೂ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.

ಯಡಿಯೂರಪ್ಪನವರ ಸಂಪುಟದಲ್ಲಿ ಸ್ಥಾನ ಸಿಗುತ್ತದೆ ಎಂಬ ಕಾರಣಕ್ಕೆ ಅತೃಪ್ತರು ಕುಮಾರಸ್ವಾಮಿ ಸರಕಾರದಿಂದ ಹೊರಬಂದಿದ್ದಾರೆ. ಅಷ್ಟೇ ಅಲ್ಲದೇ ಪಕ್ಷವಿರೋಧಿ ಚಟುವಟಿಕೆ ಆರೋಪದ ಮೇಲೆಗೆ ಅವರೆಲ್ಲರನ್ನೂ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ. ಹೀಗಿರುವಾಗ ಅವರನ್ನು ಮಧ್ಯದಲ್ಲಿ ಕೈ ಬಿಟ್ಟರೂ ಕಷ್ಟ, ಬಿಡದೆ ಎಲ್ಲರನ್ನೂ ಕಟ್ಟಿಕೊಂಡರೂ ಕಷ್ಟ ಎಂಬಂಥ ಇಕ್ಕಟ್ಟಿನ ಪರಿಸ್ಥಿತಿ ಯಡಿಯೂರಪ್ಪನವರಿಗೆ ಎದುರಾಗಿದೆ.

ಈ ಮಧ್ಯೆ, ಯಡಿಯೂರಪ್ಪನವರು ಮಂಗಳವಾರ ದಿಲ್ಲಿಗೆ ತೆರಳುತ್ತಿದ್ದು, ಅಮಿತ್ ಷಾ, ಜೆ.ಪಿ. ನಡ್ಡಾ ಮತ್ತಿತರ ವರಿಷ್ಠರ ಜತೆ ಈ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅಲ್ಲಿ ವರಿಷ್ಠರು ತೆಗೆದುಕೊಳ್ಳುವ ನಿರ್ಣಯವೇ ಅಂತಿಮವಾಗಲಿದೆ.

Leave a Reply