ಬಿಜೆಪಿ ಪರ ಜಿ.ಟಿ ದೇವೇಗೌಡ ಮತ್ತೆ ಬ್ಯಾಟಿಂಗ್; ರಾಜಕೀಯ ಪಡಸಾಲೆಯಲ್ಲಿ ರಣಕುತೂಹಲ!

ಡಿಜಿಟಲ್ ಕನ್ನಡ ಟೀಮ್:

ಜೆಡಿಎಸ್ ಮುಖಂಡ, ಮಾಜಿ ಸಚಿವ ಜಿ.ಟಿ. ದೇವೇಗೌಡರು ಬಿಜೆಪಿ ಸರಕಾರದ ಬಗ್ಗೆ ಮತ್ತೆ ಮೃದು ಧೋರಣೆ ಪ್ರದರ್ಶನ ಮಾಡಿದ್ದು, ರಾಜಕೀಯ ಒಳಸುಳಿ ಏನಿರಬಹುದೆಂಬ ಕುತೂಹಲ ಮೂಡಿಸಿದೆ.

ವಿಧಾನಸಭೆಯಲ್ಲಿ ಸೋಮವಾರ ವಿಶ್ವಾಸಮತ ಪಡೆದ ಸಿಎಂ ಯಡಿಯೂರಪ್ಪ ಅವರು ಪೂರಕ ಬಜೆಟ್ ಮಂಡನೆ ಮಾಡಿದಾಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಇದರ ಮೇಲೆ ಚರ್ಚೆ ನಡೆಸದೇ ಅಂಗೀಕಾರ ಮಾಡುವುದು ಸರಿಯಲ್ಲ ಎಂದರು. ಆದರೆ ಇದಕ್ಕೆ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿದ ಜಿ.ಡಿ. ದೇವೇಗೌಡರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಸಿದ್ಧಪಡಿಸಿದ್ದ ಪೂರಕ ಬಜೆಟ್ ಗೆ ಅನುಮೋದನೆ ನೀಡುವುದರಲ್ಲಿ ತಪ್ಪೇನು ಇಲ್ಲ, ಅದರ ಮೇಲೆ ಚರ್ಚೆ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದರಲ್ಲದೆ ಬಿಜೆಪಿ ಸದಸ್ಯರೇ ಹುಬ್ಬೇರಿಸುವಂತೆ ಮಾಡಿದರು.

ಬಿಜೆಪಿ ಬಗ್ಗೆ ಜಿ.ಟಿ. ದೇವೇಗೌಡರು ಈ ರೀತಿ ಮೃದುಭಾವದಿಂದ ಮಾತಾಡುತ್ತಿರುವುದು ಇದೇ ಮೊದಲೇನೂ ಅಲ್ಲ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರೇ ಮುಂದೆ ನಿಂತು ರಾಜ್ಯದಲ್ಲಿ ಅಪರೇಷನ್ ಕಮಲ ಮಾಡಿಸುತ್ತಿದ್ದಾರೆ ಎಂದು ತಿಂಗಳ ಹಿಂದೆ ಸಿದ್ದರಾಮಯ್ಯನವರು ಆರೋಪ ಮಾಡಿದ್ದರು. ಆಗಲೂ ಇದಕ್ಕೆ ತಿರುಗೇಟು ನೀಡಿದ್ದ ಜಿಟಿಡಿ, ಮೋದಿ ಮತ್ತು ಅಮಿತ್ ಶಾ ದೇಶದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಆಪರೇಷನ್ ಕಮಲ ಮಾಡಿಸಲು ಅವರಿಗೇ ಬೇರೇನೂ ಕೆಲಸ ಇಲ್ಲವೇ ಎಂದು ಪ್ರಶ್ನೆ ಮಾಡಿದ್ದರು. ಆಗ ಜಿ.ಡಿ. ದೇವೇಗೌಡರನೇದಾರೂ ಬಿಜೆಪಿಗೆ ಹೋಗುತ್ತಾರೆ ಎಂಬ ಪ್ರಶ್ನೆ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬಂದಿತ್ತು.

ತೀರಾ ಇತ್ತೀಚೆಗೆ ಅಂದರೆ ಕುಮಾರಸ್ವಾಮಿ ಸರಕಾರ ಪತನವಾದ ನಂತರ ನಡೆದ ಜೆಡಿಎಸ್ ಶಾಸಕಾಂಗ ಸಭೆ ನಂತರ ಮಾಧ್ಯಮದವರ ಜತೆ ಮಾತಾಡಿದ್ದ ಜಿಟಿಡಿ, ಪಕ್ಷದ ಕೆಲವು ಶಾಸಕರು ಬಿಜೆಪಿ ಸರಕಾರಕ್ಕೆ ಬಾಹ್ಯ ಬೆಂಬಲ ನೀಡಬೇಕೆಂದು, ಇನ್ನೂ ಕೆಲವರು ಬಿಜೆಪಿ ಸರಕಾರ ಸೇರಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಿ ಆಶ್ಚರ್ಯ ಮೂಡಿಸಿದ್ದರು. ಜಿಟಿಡಿ ನೇತೃತ್ವದಲ್ಲೇ ಒಂದು ತಂಡ ಬಿಜೆಪಿಗೆ ಹೋಗಬಹುದೆಂಬ ಚರ್ಚೆಗೆ ಅವರೇ ಗ್ರಾಸ ಒದಗಿಸಿದ್ದರು. ಇದೀಗ ಬಿಜೆಪಿ ಪರ ಅವರ ಮೃದುಧೋರಣೆ ಮರುಕಳಿಸಿರುವುದರಿಂದ ಈ ಚರ್ಚೆ ಮತ್ತಷ್ಟು ಗಟ್ಟಿಯಾಗಿದೆ.

Leave a Reply