ಸ್ನೇಹಿತನ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಸಿದ್ದರಾಮಯ್ಯ, ರಮೇಶ್ ಕುಮಾರ್

ಡಿಜಿಟಲ್ ಕನ್ನಡ ಟೀಮ್:

ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಜೈಪಾಲ್ ರೆಡ್ಡಿ ನಿಧನರಾಗಿದ್ದು, ಹೈದ್ರಾಬಾದ್‌ನಲ್ಲಿ ನಡೆದ ಅಂತ್ಯಕ್ರಿಯೆ ಪ್ರಕ್ರಿಯೆಯಲ್ಲಿ ಮಾಜಿ ಸ್ಪೀಕರ್​​ ರಮೇಶ್ ಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿ ಅಂತಿಮ ನಮನ ಸಲ್ಲಿಸಿದ್ರು. ಶವಯಾತ್ರೆ ವೇಳೆ ಪಾರ್ಥಿವ ಶರೀರವನ್ನು ಹೆಗಲು ಮೇಲೆ ಹೊತ್ತುಕೊಂಡು ಆತ್ಮೀಯ ಗೆಳಯನಾಗಿದ್ದ ಜೈಪಾಲ್ ರೆಡ್ಡಿ ಅವರನ್ನು ಕಳುಹಿಸಿಕೊಟ್ಟರು.

ಹೈದ್ರಾಬಾದ್‌ನ ಪ್ರಸಿದ್ಧ ಜ್ಯುಬಿಲಿ ಹಿಲ್ಸ್​ನ ಜೈಪಾಲ್ ರೆಡ್ಡಿ ನಿವಾಸದಿಂದ ಆರಂಭವಾದ ಶವಯಾತ್ರೆ ನೆಕ್ಲೇಸ್​ ರೋಡ್​​ನಲ್ಲಿರುವ ಪಿವಿ ಘಾಟ್ ಸ್ಮಶಾನ ತಲುಪಿತ್ತು. ಇಲ್ಲಿ ಜೈಪಾಲ್​ ರೆಡ್ಡಿ ಅವರ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು. ನಿರ್ಗಮಿತ ಸ್ಪೀಕರ್ ರಮೇಶ್​ ಕುಮಾರ್​ಗೆ ಜೈಪಾಲ್ ರೆಡ್ಡಿ ಆತ್ಮೀಯ ಸ್ನೇಹಿತರಾಗಿದ್ದರು. ಇದೇ ಕಾರಣಕ್ಕಾಗಿ ಸದನದಲ್ಲಿ ಕಾರ್ಯ ಕಲಾಪಗಳನ್ನು ಶೀಘ್ರವಾಗಿ ಮುಗಿಸಿ ರಾಜೀನಾಮೆ ನೀಡಿದ ಬಳಿಕ ನೇರವಾಗಿ ಹೈದ್ರಾಬಾದ್‌ಗೆ ತೆರಳಿದ್ರು. ಜೊತೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಅಂತಿಮ ನಮನಕ್ಕೆ ತೆರಳಿದ್ರು. ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಬಳಿಕ ಸಿದ್ದರಾಮಯ್ಯ ಕೂಡ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಅತ್ತ ರಾಜ್ಯಸಭೆಯಲ್ಲಿ ಬೆಳಗ್ಗೆ ಸಂತಾಪ ಸೂಚಿಸಿದ ಉಪರಾಷ್ಟ್ರಪತಿ‌ ವೆಂಕಯ್ಯ ನಾಯ್ಡು, ಮೌನಾಚರಣೆ ಮೂಲಕ ಸಂತಾಪ ಸೂಚಿಸಿದ್ರು. ಬಳಿಕ ಮಾತನಾಡಿದ ವೆಂಕಯ್ಯ ನಾಯ್ಡು, ನಾನು ಜೈಪಾಲ್ ರೆಡ್ಡಿ ಆತ್ಮೀಯ ಸ್ನೇಹಿತರಾಗಿದ್ದು, ಮೊದಲು ಬೆಳಗ್ಗೆ 8 ಗಂಟೆಗೆ ಅಧಿವೇಶನ ಆರಂಭವಾಗ್ತಿತ್ತು. ಅಷ್ಟರೊಳಗೆ ಬೆಳಗ್ಗೆ 7 ಗಂಟೆ ಒಳಗೆ ನಾವು ತಿಂಡಿಗೆ ಸೇರುತ್ತಿದ್ದೆವೆ. ಜೈಪಾಲ್ ರೆಡ್ಡಿ ವಾಕ್ಚಾತುರ್ಯ, ಜಾಣ್ಮೆ ನನ್ನನ್ನು ಮಂತ್ರಮುಗ್ದನನ್ನಾಗಿ ಮಾಡುತ್ತಿತ್ತು ಎಂದು ನೆನಪು ಮಾಡಿಕೊಂಡರು. ಒಟ್ಟಾರೆ ಕಾಂಗ್ರೆಸ್ ನಾಯಕನಾಗಿದ್ದರು, ಎಲ್ಲಾ ಪಕ್ಷಗಳಲ್ಲೂ ಉತ್ತಮ ಸ್ನೇಹಿತರನ್ನು ಸಂಪಾದಿಸಿದ್ದ ಸಂಸದೀಯಪಟು ಒಬ್ಬರು ಇನ್ನಿಲ್ಲದಂತಾಗಿದೆ.

Leave a Reply