ಸ್ಪೀಕರ್ ಹುದ್ದೆಗೆ ರಾಜೀನಾಮೆ ಕೊಟ್ಟ ರಮೇಶ್ ಕುಮಾರ್! ವಿದಾಯದ ವೇಳೆ ಅವರು ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಕಳೆದ ಒಂದು ವರ್ಷದಿಂದ ಸ್ಪೀಕರ್ ಆಗಿ ನಾನು ನನ್ನ ಆತ್ಮಸಾಕ್ಷಿಗೆ ಬದ್ಧವಾಗಿ ಕೆಲಸ ಮಾಡಿದ್ದೇನೆ. ಈಗ ಈ ಜವಾಬ್ದಾರಿಯಿಂದ ನಾನು ಮುಕ್ತನಾಗಲು ಬಯಸುತ್ತೇನೆ. ಬಿಎಸ್ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಬಡವರ, ನಿರ್ಗತಿಕರ, ಅಶಕ್ತರ ಪರವಾಗಿ ಕಾರ್ಯ ನಿರ್ವಹಿಸಲಿ ಎಂದು ಶುಭ ಕೋರುತ್ತಾ ಈ ಹುದ್ದೆಗೆ ರಾಜೀನಾಮೆ ನೀಡುತ್ತೇನೆ ಎಂದು ರಮೇಶ್ ಕುಮಾರ್ ಅವರು ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸೋಮವಾರ ವಿಶ್ವಾಸಮತ ಯಾಚನೆ ಹಾಗೂ ಹಣಕಾಸು ವಿಧೇಯಕ ಮಂಡನೆಯಾದ ನಂತರ ಸದನ ಉದ್ದೇಶಿಸಿ ಮಾತನಾಡಿದ ರಮೇಶ್ ಕುಮಾರ್, ‘ಕಳೆದ ವರ್ಷ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಅಧ್ಯಕ್ಷರಾದ ರಾಹುಲ್ ಗಾಂಧಿ ಅವರು ಕರೆ ಮಾಡಿ ಸ್ಪೀಕರ್ ಸ್ಥಾನ ಅಲಂಕರಿಸುವಂತೆ ಹೇಳಿದರು. ಆಗ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರಿಗೆ ಹೇಳಿ ಎಂದೆ. ನಂತರ ಬಿಜೆಪಿಯವರು ಸುರೇಶ್ ಕುಮಾರ್ ಅವರನ್ನು ಸ್ಪೀಕರ್ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದರೂ ನಂತರ ನನ್ನನ್ನು ಸರ್ವಾನುಮತದಿಂದ ಆರಿಸಿದರು. ಇಷ್ಟು ದಿನಗಳ ಕಾಲ ನಾನು ಪಕ್ಷಾತೀತವಾಗಿ ನನ್ನ ಆತ್ಮಸಾಕ್ಷಿಗೆ ತಕ್ಕಂತೆ ಕಾರ್ಯ ನಿರ್ವಹಿಸಿದ್ದೇನೆ. ಈ ಹಂತದಲ್ಲಿ ನನ್ನ ಗಡಸು ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ. ನನ್ನ ಕಲಾವಧಿಯಲ್ಲಿ ನನಗೆ ಸಹಕಾರ ನೀಡಿದ ಡಿ ಗ್ರೂಪ್ ನೌಕರರಿಂದ ಇಲಾಖೆ ಕಾರ್ಯದರ್ಶಿವರೆಗೂ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ’ ಎಂದರು.

‘ಈ ಸಂದರ್ಭದಲ್ಲಿ ನಾನು ಎಲ್ಲ ಪಕ್ಷದವರಿಗೂ ಒಂದು ಮಾತನ್ನು ಹೇಳಲು ಬಯಸುತ್ತೇನೆ. ದೇಶದಲ್ಲಿ ಚುನಾವಣಾ ಸುಧಾರಣೆ ಗಬೇಕಿದೆ. ಲೋಕಯುಕ್ತ ಕಾನೂನು ಸುಧಾರಣೆಯಾಗಬೇಕಿದೆ. ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ ಹಲವು ನಾಯಕರು ತಮ್ಮ ಆಸ್ತಿಯನ್ನು ಘೋಷಿಸಲು ನಿರಾಕರಿಸಿದ್ದೀರಿ. ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ತಮ್ಮ ಆಸ್ತಿ ಘೋಷಣೆ ಮಾಡುತ್ತಾರೆ. ಅದನ್ನು ಚುನಾವಣೆ ಆಯೋಗ ದಾಖಲಿಸಿಕೊಂಡು ಸುಮ್ಮನಿರುತ್ತದೆ. ಆದರೆ ಅವರಿಗೆ ಆದಾಯ, ಸಂಪತ್ತು ಹೇಗೆ ಬಂದಿದೆ ಅಂತಾ ಪರಿಶೀಲನೆ ನಡೆಸಬೇಕು. ಹೀಗಾಗಿ ಅದನ್ನು ಐಟಿ ಹಾಗೂ ಇಡಿ ಅವರಿಗೆ ಕಳುಹಿಸಬೇಕು. ಇಲ್ಲವಾದರೆ ಪಾರದರ್ಶಕತೆ ಬರುವುದಿಲ್ಲ. ಈ ಎಲ್ಲ ವಿಚಾರವಾಗಿ ನಮ್ಮ ವಿಧಾನಸಭೆಯಿಂದಲೇ ಸುಧಾರಣೆ ಆಗಿ ಇತರೆ ವಿಧಾನಸಭೆಗಳಿಗೂ ಸ್ಫೂರ್ತಿಯಾಗಲಿ’ ಎಂದು ರಮೇಶ್ ಕುಮಾರ್ ಸಲಹೆ ನೀಡಿದರು.

Leave a Reply