ಐಟಿ ಕಿರುಕುಳದಿಂದ ಸಿದ್ಧಾರ್ಥ್ ಆತ್ಮಹತ್ಯೆ? ಕಾಫಿ ಡೇ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ಏನಿದೆ?

ಡಿಜಿಟಲ್ ಕನ್ನಡ ಟೀಮ್:

ಆದಾಯ ತೆರಿಗೆ ಅಧಿಕಾರಿಗಳ ಕಿರುಕುಳ ನನ್ನಿಂದ ತಡೆಯಲು ಸಾಧ್ಯವಾಗುತ್ತಿಲ್ಲ. ಹಿಂದಿನ ಆದಾಯ ತೆರಿಗೆ ಇಲಾಖೆಯ ಡಿಜಿ ಅವರು ನನಗೆ ಮಾನಸಿಕವಾಗಿ ಬಹಳ ಕಿರುಕುಳ ನೀಡಿದ್ದಾರೆ. ಇಂದಿನ ನನ್ನ ಈ ಪರಿಸ್ಥಿತಿಗೆ ಇದೇ ಕಾರಣ. ಒತ್ತಡದ ಮಧ್ಯೆಯೂ ನಾನು ತೆರಿಗೆ ಸಲ್ಲಿಕೆ ಮಾಡಿದ್ದೇನೆ. ನಾನು ಕಳೆದ ಆರು ತಿಂಗಳ ಹಿಂದೆ ಸ್ನೇಹಿತರಿಂದ ದೊಡ್ಡ ಮಟ್ಟದ ಸಾಲ ಪಡೆದಿದ್ದು, ಒಬ್ಬ ಉದ್ಯಮಿಯಾಗಿ ನಾನು ಸೋತಿದ್ದೇನೆ. ನನ್ನ ಪರಿಸ್ಥಿತಿಯನ್ನು ಮುಂದೊಂದು ದಿನ ಅರ್ಥ ಮಾಡಿಕೊಳ್ಳುತ್ತೀರಿ ಎಂದು ಉದ್ಯಮಿ ವಿ.ಜಿ ಸಿದ್ಧಾರ್ಥ್ ಇತ್ತೀಚೆಗೆ ಕಾಫಿ ಡೇ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ಐಟಿ ಇಲಾಖೆ ವಿರುದ್ಧ ನೇರ ಆರೋಪ ಮಾಡಿದ್ದಾರೆ.

ನಿನ್ನೆಯಿಂದ ಸಿದ್ಧಾರ್ಥ್ ನಾಪತ್ತೆಯಾಗಿದ್ದು, ಆರಂಭದಲ್ಲಿ ಅವರು ಅಪಹರಣವಾಗಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ ಕಾಫಿ ಡೇ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ಅವರು ಹೇಳಿರುವ ವಿಚಾರಗಳನ್ನು ನೋಡಿದರೆ ಸಿದ್ಧಾರ್ಥ್ ಅವರು ಆತ್ಮಹತ್ಯೆಯ ಬಗ್ಗೆ ಯೋಚಿಸಿದ್ದಾರಾ ಎಂಬ ಅನುಮಾನಗಳಿಗೆ ಕಾರಣವಾಗಿದೆ.

ಸಿದ್ಧಾರ್ಥ್ ಅವರ ನಾಪತ್ತೆ ವಿಚಾರ ತಿಳಿಯುತ್ತಿದ್ದಂತೆ ಎಸ್.ಎಂ ಕೃಷ್ಣ ಅವರ ಆಪ್ತರಾದ ಮಾಜಿ ಸಚಿವ ಡಿಕೆ ಶಿವಕುಮಾರ್ ಬೆಳಗಿನ ಜಾವ 4 ಗಂಟೆಗೆ ಅವರ ಮನೆಗೆ ಭೇಟಿ ನೀಡಿದ್ದಾರೆ. ಇನ್ನು ಮಂಗಳವಾರ ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೂಡ ಕೃಷ್ಣ ಅವರ ಮನೆಗೆ ಭೇಟಿ ನೀಡಿದ್ದಾರೆ. ಇನ್ನು ಚಿತ್ರರಂಗದ ಗಣ್ಯರಾದ ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಅವರು ಕೂಡ ಕೃಷ್ಣ ಅವರ ಮನೆಗೆ ಭೇಟಿ ನೀಡಿ ಅವರನ್ನು ಸಮಾಧಾನ ಮಾಡುತ್ತಿದ್ದಾರೆ. ಇದೇ ವೇಳೆ ಸಂಸದೆ ಶೋಭಾ ಕರಂದ್ಲಾಜೆ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ವರಿಗೆ ಈ ವಿಚಾರವಾಗಿ ಮನವಿ ಮಾಡಿದ್ದು, ಸಿದ್ಧಾರ್ಥ್ ಅವರ ಪತ್ತೆಗೆ ಕೇಂದ್ರದ ನೇರವನ್ನು ಕೋರಿದ್ದಾರೆ.

ಸಿದ್ಧಾರ್ಥ್ ಅವರ ಪತ್ತೆಗಾಗಿ ಡಿಜಿಪಿ ನಿಲಮಣಿ ರಾಜು ಅವರ ನೇತೃತ್ವದ ತಂಡ ತನಿಖೆ ನಡೆಸುತ್ತಿದ್ದು, ಸಿದ್ಧಾರ್ಥ್ ನಾಪತ್ತೆಯಾದ ನೇತ್ರಾವತಿ ನದಿ ತೀರದಲ್ಲಿ ಶೇಧಕಾರ್ಯ ನಡೆಸಲಾಗುತ್ತಿದೆ.

ಸಿದ್ಧಾರ್ಥ್ ಅವರು ಕಾಫಿ ಡೇ ಸೇರಿದಂತೆ 30 ಉದ್ಯಮಗಳನ್ನು ನಿಭಾಯಿಸುತ್ತಿದ್ದರು. ಕಾಫಿ ಡೇ ಒಂದರಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಉದ್ಯೋಗ ನೀಡಿದ್ದು, ಒಟ್ಟು 56 ಸಾವಿರ ಜನರಿಗೆ ಉದ್ಯೋಗ ನೀಡಿದ್ದರು. ಎರಡು ವರ್ಷಗಳ ಹಿಂದೆ ಸಿದ್ಧಾರ್ಥ್ ಅವರ ಕಂಪನಿಗಳ ಮೇಲೆ ಐಟಿ ದಾಳಿ ನಡೆದಿತ್ತು. ಈ ವೇಳೆ ಐಟಿ ಇಲಾಖೆ ತೆರಿಗೆ ಹಣದ ಬದಲಾಗಿ ಸಿದ್ಧಾರ್ಥ್ ಅವರ ಮೈಂಡ್ ಟ್ರೀ ಕಂಪನಿ ಷೇರುಗಳನ್ನು ತನ್ನ ವಶಕ್ಕೆ ಪಡೆಯಲಾಗಿತ್ತು. ಮೈಂಡ್ ಟ್ರೀ ಕಂಪನಿಯ ಷೇರುಗಳ ಬದಲಾಗಿ ಬೇರೆ ಕಂಪನಿಗಳ ಷೇರುಗಳನ್ನು ತೆಗೆದುಕೊಳ್ಳಿ ಎಂದು ಬೇಡಿದರೂ ಐಟಿ ಅಧಿಕಾರಿಗಳು ಮನವಿಗೆ ಸ್ಪಂದಿಸಲಿಲ್ಲ. ಕಂಪನಿಯ ಹಣಕಾಸಿನ ಬಿಕ್ಕಟ್ಟಿನಿಂದ ಮೈಂಡ್ ಟ್ರೀ ಷೇರುಗಳನ್ನು ಮಾರಲು ಮುಂದಾಗಿದ್ದರು. ಆದರೆ ಐಟಿಯ ನಿರ್ಧಾರದಿಂದ ಸಿದ್ಧಾರ್ಥ್ ಮೈಂಡ್ ಟ್ರೀ ಷೇರು ಮಾರಾಟ ಸಾಧ್ಯವಾಗದೇ ಇನ್ನಷ್ಟು ಸಂಕಷ್ಟ ಅನುಭವಿದರು. ನಂತರ ಕಾಫಿ ಡೇ ಷೇರುಗಳನ್ನು ಮುಟ್ಟುಗೋಲು ಹಾಕಿಕೊಂಡ ಪರಿಣಾಮ ಸಿದ್ಧಾರ್ಥ್ ಅವರ ಮೇಲೆ ಒತ್ತಡ ಹೆಚ್ಚಿದೆ ಎಂಬ ಮಾಹಿತಿ ಬಂದಿದೆ.

ಜುಲೈ 27ರಂದು ನಿರ್ಧೇಶಕರಿಗೆ ಬರೆದ ಪತ್ರದಲ್ಲಿ, ‘ಕಳೆದ 35 ವರ್ಷಗಳಿಂದ ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ನಾನು ಯಾರಿಗೂ ಮೋಸ ಮಾಡುವ ಉದ್ದೇಶ ಹೊಂದಿಲ್ಲ. ತೆರಿಗೆ ಇಲಾಖೆಯ ಹಿಂದಿನ ಡಿಜಿ ಅವರು ನನಗೆ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಇನ್ನು ಕಂಪನಿಯ ಈಕ್ವಿಟಿ ಷೇರುಗಳನ್ನು ವಾಪಸ್ ಪಡೆಯಿರಿ ಎಂಬ ಒತ್ತಡ ಬರುತ್ತಿದೆ. ಈ ಪರಿಸ್ಥಿತಿಗೆ ನಾನು ಯಾರನ್ನೂ ದೂರುವುದಿಲ್ಲ. ಈ ಜವಾಬ್ದಾರಿ ನಾನೇ ಹೊತ್ತುಕೊಳ್ಳುತ್ತೇನೆ. ನಾನು ಯಶಸ್ವಿ ಉದ್ಯಮಿಯಾಗಲು ಸಾಧ್ಯವಾಗಲಿಲ್ಲ. ಇನ್ನು ನನಗೆ ಈ ಒತ್ತಡಗಳನ್ನು ನಿಭಾಯಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

Leave a Reply