ವಿಶ್ವಕಪ್ ಗುಂಗಿನ ನಂತರ ಕ್ರಿಕೆಟ್ ಅಭಿಮಾನಿಗಳಿಗೆ ಟೆಸ್ಟ್ ಚಾಂಪಿಯನ್ ಶಿಪ್ ರಂಗು!

ಡಿಜಿಟಲ್ ಕನ್ನಡ ಟೀಮ್:

ಟಿ20 ಕ್ರೇಜ್ ಹೆಚ್ಚಾಗಿರುವ ಸಂದರ್ಭದಲ್ಲಿ ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್ ಅನ್ನು ಮೇಲೆತ್ತುವ ಉದ್ದೇಶದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಎಂಬ ಹೊಸ ಕಲ್ಪನೆಯೊಂದಿಗೆ ಪ್ರಯೋಗಕ್ಕೆ ಮುಂದಾಗಿದೆ. ಏಕದಿನ ಹಾಗೂ ಟಿ20 ವಿಶ್ವಕಪ್ ಮಾದರಿಯಲ್ಲೇ ಟೆಸ್ಟ್ ಮಾದರಿಯಲ್ಲೂ ಎಲ್ಲ ತಂಡಗಳು ಪಾಲ್ಗೊಂಡು ಚಾಂಪಿಯನ್ ಪಟ್ಟ ಅಲಂಕರಿಸುವ ಉದ್ದೇಶವೇ ಈ ಟೆಸ್ಟ್ ಚಾಂಪಿಯನ್ ಶಿಪ್!

ಸೀಮಿತ ಓವರ್ ಮಾದರಿಯ ವಿಶ್ವಕಪ್ ಗೂ ಟೆಸ್ಟ್ ಚಾಂಪಿಯನ್ ಶಿಪ್ ಗೂ ಬಹಳ ವ್ಯತ್ಯಾಸವಿದೆ. ಏಕದಿನ ಹಾಗೂ ಟಿ20 ವಿಶ್ವಕಪ್ ಅನ್ನು ಒಂದು ತಿಂಗಳಲ್ಲಿ ಮುಗಿಸಬಹುದು. ಆದರೆ ಇದೇ ಮಾದರಿಯಲ್ಲಿ ಟೆಸ್ಟ್ ವಿಶ್ವಕಪ್ ಆಡಿಸುವುದು ಕಷ್ಟ. ಹೀಗಾಗಿ ಐಸಿಸಿ ಎರಡು ವರ್ಷಗಳ ಅವಧಿಯಲ್ಲಿ ಟೆಸ್ಟ್ ಆಡುವ ರಾಷ್ಟ್ರಗಳಿಗೆ ನಿಗದಿತ ಸರಣಿಯನ್ನು ಆಯೋಜಿಸಲಾಗುತ್ತದೆ. ಈ ಸರಣಿಗಳಲ್ಲಿ ಪ್ರತಿ ಪಂದ್ಯಕ್ಕೂ ಅಂಕ ನೀಡಿ 2021ರ ವೇಳೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಎರಡು ಸ್ಥಾನ ಪಡೆಯುವ ತಂಡಗಳು ಲಾರ್ಡ್ಸ್ ಅಂಗಳದಲ್ಲಿ ಫೈನಲ್ ಪಂದ್ಯವನ್ನಾಡಲಿದೆ. ಆ ಪಂದ್ಯವನ್ನು ಗೆದ್ದ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ಆಗಿ ಹೊರಹೊಮ್ಮಲಿದೆ.

ಆಗಸ್ಟ್ 1ರಿಂದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಆಶಸ್ ಸರಣಿ ಆರಂಭವಾಗಲಿದ್ದು, ಈ ಟೂರ್ನಿ ಮೂಲಕವೇ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆ ಚಾಲನೆ ಸಿಗಲಿದೆ. ಇನ್ನು ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ಟೆಸ್ಟ್ ಸರಣಿ ಆಡಲಿದ್ದು, ಈ ಮೂಲಕ ಟೆಸ್ಟ್ ಚಾಂಪಿಯನ್ ಶಿಪ್ ನ ಮೊದಲ ಹಂತದಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಈ ಎರಡು ವರ್ಷಗಳ ಅವಧಿಯಲ್ಲಿ ಭಾರತ ಒಟ್ಟು ಆರು ಟೆಸ್ಟ್ ಸರಣಿ ಆಡಲಿದೆ.

ಟೆಸ್ಟ್ ಚಾಂಪಿಯನ್ ಶಿಪ್ ಟೂರ್ನಿಯ ಮುಖ್ಯಾಂಶಗಳು ಹೀಗಿವೆ…

  • ಎರಡು ವರ್ಷಗಳ ಕಾಲ ನಡೆಯಲಿರುವ ಈ ಚಾಂಪಿಯನ್ ಶಿಪ್ ನಲ್ಲಿ 12ಟೆಸ್ಟ್ ಆಡುವ ತಂಡಗಳ ಪೈಕಿ 9 ತಂಡಗಳು ಇದರಲ್ಲಿ ಭಾಗವಹಿಸಲಿವೆ.
  • ಪ್ರತಿ ತಂಡ ಉಳಿದ ಎಂಟು ತಂಡಗಳ ಪೈಕಿ ಆರು ತಂಡಗಳ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ಪ್ರತಿ ಸರಣಿಯಲ್ಲಿ 2-5 ಟೆಸ್ಟ್ ಪಂದ್ಯಗಳು ನಡೆಯಲಿದೆ.
  • ಪ್ರತಿ ತಂಡಗಳು ಸಮನಾದ ಪಂದ್ಯಗಳನ್ನು ಆಡದಿದ್ದರೂ ಪ್ರತಿ ತಂಡ ಆರು ಸರಣಿಗಳನ್ನು ಆಡಲಿದೆ.
  • ಇದರಲ್ಲಿ ಮು ಸರಣಿ ವಿದೇಶಿ ಪಿಚ್ ಗಳಲ್ಲಿ ನಡೆದರೆ, ಮೂರು ಸರಣಿ ತವರಿನ ಪಿಚ್ ನಲ್ಲಿ ನಡೆಯಲಿದೆ.
  • ಲೀಗ್ ಹಂತ ಮುಕ್ತಾಯದ ವೇಳೆಗೆ ಅತಿ ಹೆಚ್ಚು ಅಂಕ ಪಡೆದಿರುವ ಎರಡು ತಂಡಗಳು ಪ್ರಶಸ್ತಿ ಸುತ್ತಿನ ಪಂದ್ಯ ಆಡಲಿದೆ.
  • ಈ ಪ್ರಶಸ್ತಿ ಸುತ್ತಿನ ಪಂದ್ಯ 2021ರ ಜೂನ್ ನಲ್ಲಿ ಲಾರ್ಡ್ಸ್ ಅಂಗಳದಲ್ಲಿ ನಡೆಯಲಿದೆ.

ಅಂಕ ಮಾದರಿ ಹೇಗಿದೆ?

  • ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಪ್ರತಿ ಪಂದ್ಯದಲ್ಲಿ ಗೆದ್ದವರಿಗೆ 60, ಡ್ರಾಗೆ 20, ಟೈಗೆ 30 ಅಂಕ ನೀಡಲಾಗುತ್ತದೆ.
  • ಮೂರು ಪಂದ್ಯಗಳ ಸರಣಿಯಲ್ಲಿ ಗೆದ್ದ ತಂಡಕ್ಕೆ 40, ಡ್ರಾಗೆ 13.3, ಟೈಗೆ 20 ಅಂಕ.
  • ನಾಲ್ಕು ಪಂದ್ಯಗಳ ಸರಣಿಯಲ್ಲಿ ಗೆದ್ದ ತಂಡಕ್ಕೆ 30, ಡ್ರಾ ಆದರೆ 10, ಟೈಗೆ 15 ಅಂಕ.
  • ಐದು ಪಂದ್ಯಗಳ ಸರಣಿಯಲ್ಲಿ ಗೆದ್ದ ತಂಡಕ್ಕೆ 24, ಡ್ರಾಗೆ 8, ಟೈಗೆ 12 ಅಂಕ.

ಇಲ್ಲಿ ಪ್ರತಿ ಸರಣಿಯಲ್ಲಿ ಎಷ್ಟೇ ಪಂದ್ಯ ಆಡದರೂ ಒಂದು ಸರಣಿಗೆ ಒಟ್ಟು 120 ಅಂಕ ನೀಡಲಾಗಿರುತ್ತದೆ. ಸರಣಿಯಲ್ಲಿ ಯಾವುದೇ ತಂಡ ವೈಟ್ ವಾಷ್ ಮೂಲಕ ಗೆಲವು ಸಾಧಿಸಿದರೆ ಆ ತಂಡ ಆ ಸರಣಿಯಿಂದ 120 ಅಂಕವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲಿದೆ. ಇನ್ನು ಮುಂದೆ ಟೆಸ್ಟ್ ಸರಣಿಯಲ್ಲೂ ಆಟಗಾರರ ಜೆರ್ಸಿ ಮೇಲೆ ಅವರ ಸಂಖ್ಯೆ ಹಾಗೂ ಅವರ ಹೆಸರು ಇರುತ್ತದೆ. ಇನ್ನು ಭಾರತ ಪಾಕಿಸ್ತಾನ ವಿರುದ್ಧ ದ್ವಿಪಕ್ಷೀಯ ಸರಣಿ ಆಡದ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಈ ಚಾಂಪಿಯನ್ ಶಿಪ್ ನಲ್ಲಿ ಮುಖಾಮುಖಿ ಆಗುವುದಿಲ್ಲ.

Leave a Reply