ಮರಳಿ ಬರಲಿಲ್ಲ ಸಿದ್ದಾರ್ಥ! ಇಂದೇ ತವರಲ್ಲಿ ಅಂತ್ಯ ಸಂಸ್ಕಾರ

ಡಿಜಿಟಲ್ ಕನ್ನಡ ಟೀಮ್:

ಕಾಫಿ ಡೇ ಸೇರಿದಂತೆ ಅನೇಕ ಉದ್ಯಮಗಳ ಸಂಸ್ಥಾಪಕ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ಅವರ ಮೃತದೇಹ ಮಂಗಳೂರಿನ ಹೊಯ್ಗೆಬಜಾರ್ ಮುಳಿಹಿತ್ಲು ಐಸ್‌ಪ್ಲ್ಯಾಂಟ್ ಸಮೀಪ ಪತ್ತೆಯಾಗಿದೆ. ಸಿದ್ದಾರ್ಥ್ ನಾಪತ್ತೆಯಾದ ಸ್ಥಳಕ್ಕಿಂತ 5 ಕಿಮೀ ದೂರದಲ್ಲಿ ಅವರ ಮೃತದೇಹ ತೇಲುತ್ತಿದ್ದದ್ದು ಮೀನುಗಾರರ ಕಣ್ಣಿಗೆ ಬಿದ್ದಿದೆ.

ಬೆಳಗ್ಗೆ 6.45 ವೇಳೆ ಮೀನುಗಾರರಿಗೆ ಈ ಮೃತದೇಹ ಪತ್ತೆಯಾಗಿದ್ದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ನಂತರ ಅವರ ಮೃತ ದೇಹವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದು, ಪರೀಕ್ಷೆ ಮುಗಿದ ನಂತರ ಆ್ಯಂಬುಲೆನ್ಸ್ ಮೂಲಕ ಅವರ ತವರೂರಿಗೆ ಕೊಂಡೊಯ್ಯಲಾಗುವುದು.

‘ಮರಣೋತ್ತರ ಪರೀಕ್ಷೆ ನಂತರ ಅವರ ಕುಟುಂಬ ಸದಸ್ಯರ ನಿರ್ದೇಶನದಂತೆ ಸಿದ್ದಾರ್ಥ ಅವರ ಮೃತದೇಹವನ್ನು ತವರೂರಾದ ಚಿಕ್ಕಮಗಳೂರಿನ ಚೇತನಹಳ್ಳಿ ಎಸ್ಟೇಟ್ ಗೆ ಕೊಂಡೊಯ್ಯಲಾಗುವುದು’ಎಂದು ಶಾಸಕ ಯು.ಟಿ ಖಾದರ್ ಮಾಹಿತಿ ನೀಡಿದ್ದಾರೆ.

ಚಿಕ್ಕಮಗಳೂರು ನಗರದಲ್ಲಿ ಅವರ ಮೃತ ದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ನಗರದ ಕೆ.ಎಂ.ರಸ್ತೆಯಲ್ಲಿರುವ ಕಾಫಿ ಡೇ ಗ್ಲೋಬಲ್ ಆವರಣದಲ್ಲಿ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಇಂದೇ ಅಂತ್ಯಕ್ರಿಯೆ ನಡೆಸಲು ಕುಟುಂಬ ಸದಸ್ಯರು ನಿರ್ಧರಿಸಿದ್ದು ಮೂಡಿಗೆರೆ ತಾಲೂಕಿನ ಚೆಟ್ನಹಳ್ಳಿಯ ಚೇತನಹಳ್ಳಿ ಎಸ್ಟೇಟ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.

ಸಿದ್ದಾರ್ಥ ಅವರ ಸಮುದ್ರ ಪ್ರವೇಶ ಆಗಿರಲೇ ಇಲ್ಲ‌. ಬದಲಾಗಿ ಅವರು ನದಿಗೆ ಹಾರಿದ್ದ ಜಾಗದಿಂದ ಹಿಂದಕ್ಕೆ ಸಾಗಿ, ನದಿಯ ಹಿನ್ನೀರಿನಲ್ಲಿ ಶವ ಪತ್ತೆಯಾಗಿದೆ. ಕೈಗೆ ಸ್ಮಾರ್ಟ್ ವಾಚ್ ಕಟ್ಟಿಕೊಂಡಿದ್ದು, ಪ್ಯಾಂಟ್ ಕಿಸೆಯಲ್ಲಿ ಮೊಬೈಲ್, ಕರ್ಚೀಫ್ ಪತ್ತೆಯಾಗಿದೆ ಎಂಬ ವರದಿಗಳು ಬಂದಿವೆ.

ಈ ಪ್ರಕರಣ ಸಾಕಷ್ಟು ಪ್ರಾಮುಖ್ಯತೆ ಪಡೆದಿರುವ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ವರದಿ ಮೇಲೆ ಎಲ್ಲರ ಗಮನ ನೆಟ್ಟಿದ್ದು, ಇದು ಆತ್ಮಹತ್ಯೆಯೇ ಎಂಬ ಅನುಮಾನಕ್ಕೆ ಉತ್ತರ ಸಿಗಲಿದೆ. ಸಿದ್ದಾರ್ಥ ಅವರ ಮರಣೋತ್ತರ ಪರೀಕ್ಷಾ ವರದಿ ಇನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರ ಕೈ ಸೇರಲಿದೆ. ಇದೊಂದು ಹೈ ಪ್ರೊಫೈಲ್ ಪ್ರಕರಣವಾಗಿರುವುದರಿಂದ ಪೊಲೀಸರು ಸದ್ಯ ವರದಿಯನ್ನು ಬಹಿರಂಗ ಪಡಿಸುವುದಿಲ್ಲ ಎಂದು ತಿಳಿದುಬಂದಿದೆ.

ಕಾರಿನ ಚಾಲಕ ಬಸವರಾಜು ಅವರು ನೀಡಿದ ಮಾಹಿತಿ ಆಧಾರದಲ್ಲಿ ಸೋಮವಾರ ರಾತ್ರಿ 9ಗಂಟೆಯಿಂದ ನದಿ, ಸಮುದ್ರ ಕಿನಾರೆಯಲ್ಲಿ ಶೋಧ ಕಾರ್ಯಾಚರಣೆ ಆರಂಭಗೊಂಡಿತು. ಸುಮಾರು 33 ಗಂಟೆಗಳ ಶೋಧ ಕಾರ್ಯಾಚರಣೆ ಬಳಿಕ ಸಿದ್ದಾರ್ಥ್ ಮೃತದೇಹ ಪತ್ತೆಯಾಗಿದೆ.

ತಮಗೆ ಅನ್ನ ನೀಡಿ ಬಾಳಿಗೆ ಬೆಳಕಾದ ಸಿದ್ದಾರ್ಥ ಸಾವಿನ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂದು ಕಾಫಿ ಉದ್ಯಮವನ್ನು ಸ್ಥಗಿತಗೊಳಿಸಲಾಗಿದೆ.  ಬೆಂಗಳೂರು ಸೇರಿದಂತೆ ಎಲ್ಲ ಕೆಫೆ ಕಾಫಿ ಡೇ ಸಿಬ್ಬಂದಿಗೆ ರಜೆ ಘೋಷಿಸಲಾಗಿದೆ. ಆದರೆ ಸಿಬ್ಬಂದಿಗಳಿಗೆಲ್ಲ ಕಚೇರಿಗೆ ಬರುವಂತೆ ಸೂಚಿಸಲಾಗಿದ್ದು, ಅನ್ನದಾತನನ್ನು ಕಳೆದುಕೊಂಡಿರುವ ಸಿಬ್ಬಂದಿಯಲ್ಲಿ ಶೋಕ ಮಡುಗಟ್ಟಿದೆ.

Leave a Reply