‘ಕಾಫಿ಼ ಕಿಂಗ್ ಸಿದ್ದಾರ್ಥ’ ಸಾವು ಆತ್ಮಹತ್ಯೆಯಲ್ಲ ಕೊಲೆ..!? ಕಾರಣ ಯಾರು?

– ಮಂಜೇಗೌಡ

ಕಾಫಿ ಲೋಕದಲ್ಲಿ ಕಿಂಗ್ ಆಗಿ ಮೆರೆದಾಡಿದ ಮಲೆನಾಡಿನ ಮಾಣಿಕ್ಯ ಎಂದೆಲ್ಲಾ ಬಿರುದಾಂಕಿತ ವಿ.ಜಿ ಸಿದ್ದಾರ್ಥ ಹೆಗಡೆ ಇನ್ನು ಗೋಡೆ ಮೇಲಿನ ಪಟದ ನೆನಪು ಮಾತ್ರ. ನೇತ್ರಾವತಿ ನದಿಯ ಅಳಿವೆ ಬಾಗಿಲು ಬ್ರಿಡ್ಜ್ ಮೇಲಿನಿಂದ ಹಾರಿ ಪ್ರಾಣ ಬಿಟ್ಟಿದ್ದ ಸಿದ್ದಾರ್ಥ ಅವರ ಮೃತದೇಹ ಬುಧವಾರ ಬೆಳಗ್ಗೆ ಮೀನುಗಾರರಿಗೆ‌ ಸಿಕ್ಕಿತ್ತು. ಅಲ್ಲೀವರೆಗೂ ನಾಪತ್ತೆಯಾಗಿದ್ದಾರೆ, ಬದುಕಿ ಬರಬಹುದು ಎಂದು ಕೊಂಡಿದ್ದವರಿಗೆ ಆಘಾತಕಾರಿ ವಿಚಾರವಾಗಿತ್ತು. ಅದಕ್ಕೆ‌ ಕಾರಣ ಅವರ‌ ಪರೋಕಾರಿ ಜೀವನ. ಸಾವಿರಾರು ಕೋಟಿಯ ಒಡೆಯ ಸಾಲದ ಹೊರೆಯಿಂದ ಜಿವನ ಕೊನೆಗೊಳಿಸಿಕೊಂಡಿದ್ದಾನೆ ಎಂದು ಎಲ್ಲರು ಹೇಳುತ್ತಿದ್ದಾರೆ. ಆದರೆ ಅವರಿಗಿದ್ದ ಆಸ್ತಿ, ಸಂಪತ್ತು ನೋಡಿದರೆ ಅವರ ಸಾಲ ಏನು ದೊಡ್ಡದಲ್ಲ. ಹೀಗಾಗಿ ಕೇವಲ ಸಾಲದ ಕಾರಣಕ್ಕೆ ಸಾವಿರಾರು ಜನರ ಅನ್ನದಾತ ಪ್ರಾಣ ಬಿಟ್ಟ ಎಂದರೆ ನಂಬಲು ಕಷ್ಟವಾಗುತ್ತಿದೆ. ಸಿದ್ದಾರ್ಥ್ ಅವರು ನಿರ್ದೇಶಕರಿಗೆ ಬರೆದ ಪತ್ರ ವಿದಾಯದ ಪತ್ರದ ಒಂದು ಭಾಗ ಕಾಣುತ್ತಿದ್ದು ಇದು ಆತ್ಮಹತ್ಯೆಯಾ ಎಂಬ ಅನುಮಾನಕ್ಕೆ ಕಾರಣವಾಗುತ್ತದೆ. ಮತ್ತೊಂದು ಭಾಗ ಆತ್ಮಹತ್ಯೆಗೆ ಪ್ರೇರಣೆ ನೀಡುವಂತಹ ಕಿರುಕುಳದ, ಮಾನಸಿಕ ದೌರ್ಜನ್ಯದ ಅನುಮಾನವನ್ನೂ ಹುಟ್ಟು ಹಾಕಿದೆ. ಹೀಗಾಗಿ ಸಿದ್ದಾರ್ಥ್ ಅವರ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಕವಲುದಾರಿಯಲ್ಲಿ ನಮ್ಮನ್ನು ತಂದು ನಿಲ್ಲಿಸಿದೆ.

ಚಿಕ್ಕಮಗಳೂರಿನ‌ ಹುಡುಗರ ಪಾಲಿನ ಉದ್ಯೋಗದಾತ
ಕಾಫಿ ಡೇ ಸ್ಥಾಪಿಸುವ ಮುನ್ನ ಸಿದ್ದಾರ್ಥ ಅವರ ತಂದೆ ಕಾಫಿ‌ ಎಸ್ಟೇಟ್ ಮಾಲೀಕರಾಗಿದ್ದರು. ಇಂದಿನಷ್ಟು ಆಸ್ತಿ‌ ಇಲ್ಲದಿದ್ದರೂ ಅಂದಿನ ಪರಿಸ್ಥಿತಿಗೆ ಇವರದು ಸಿರಿವಂತ ಮನೆತನವಾಗಿತ್ತು. ಆದರೆ ತಮ್ಮ ಸಂಪತ್ತಿಗೆ ತೃಪ್ತರಾಗದ ಸಿದ್ಧಾರ್ಥ, ನಮ್ಮ ನೆಲದ ಯುವಕರಿಗೆ ಕೆಲಸ ಕೊಡಬೇಕು, ಅದಕ್ಕಾಗಿ ಏನಾದರೂ ಮಾಡಬೇಕು ಎಂದುಕೊಂಡು ಕೆಫೆ ಕಾಫಿ‌ ಡೇ ಎಂಬ ಹೊಸ ಉದ್ಯಮ ಆರಂಭಿಸಲು ಮುಂದಾದ್ರು. ಅದನ್ನೂ ಸಾಧಿಸಿಯೂ‌ ತೋರಿಸಿದ್ರು. ಇಡೀ ವಿಶ್ವಾದ್ಯಂತ 2,100 ಕೆಫೆ ಕಾಫಿ‌ ಡೇ ಸ್ಥಾಪಿಸಿ, ಅಲ್ಲಿ ಕೆಲಸ ಮಾಡಲು ತನ್ನದೇ ಜಿಲ್ಲೆಯ ಯುವಕರ ಪಡೆಯನ್ನು ಸಜ್ಜುಗೊಳಿಸುವ ಕೆಲಸ ಮಾಡಿದ್ರು. ಕನಿಷ್ಠ ಪಕ್ಷ ಆರು ತಿಂಗಳ ಕಾಲ ತರಬೇತಿ‌ ನೀಡಿ ಇಂಗ್ಲಿಷ್ ಭಾಷೆ ಕಲಿಸಿ ಕೆಲಸಕ್ಕೆ ಅಣಿ ಮಾಡ್ತಿದ್ರು. ಉದ್ಯೋಗದ ಬಗ್ಗೆ ಆತ್ಮವಿಶ್ವಾಸ ತುಂಬುತ್ತಿದ್ರು. ಇಷ್ಟೋಂದು ಹೋರಾಟ ಮನೋಭಾವದ, ದೂರದೃಷ್ಟಿ ಇರೋ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ನಂಬುದು ಅಷ್ಟು ಸುಲಭವಲ್ಲ.

ಸಿದ್ದಾರ್ಥ ಮಾಡಿದ ಸಾಲದ ಹೊರೆ ಜಾಸ್ತಿಯಾಯ್ತಾ..?
ಮಾಧ್ಯಮಗಳಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಸಿದ್ದಾರ್ಥ ಹೆಗಡೆ ಮಾಡಿರೋ ಸಾಲ 7,500 ಕೋಟಿ ರೂಪಾಯಿ. ಅದರಂತೆ ಸಿದ್ದಾರ್ಥ ಅವರ ಒಟ್ಟು ಆಸ್ತಿ ಮೌಲ್ಯ 22,000 ಕೋಟಿ ರೂಪಾಯಿ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆಸ್ತಿ ಇದ್ದರೂ ಸಾಲ ತೀರಿಸಲು ಆಗದೆ ಅವರು ಆತ್ಮಹತ್ಯೆಗೆ ಯೋಚನೆ ಮಾಡಲು ಸಾಧ್ಯವಾ? 22 ಸಾವಿರ ಕೋಟಿ ಆಸ್ತಿಯಲ್ಲಿ 7,500 ಕೋಟಿ ಆಸ್ತಿಯನ್ನು ಕಳೆದುಕೊಂಡಿದ್ದರೂ ಉಳಿಯುತ್ತಿದ್ದ 14,500 ಕೋಟಿ ಹಣದಲ್ಲಿ ಜೀವನ ಮಾಡಬಹುದಿತ್ತಲ್ವಾ ಅನ್ನೋದು ಸಾಮಾನ್ಯ ಜನರ ಪ್ರಶ್ನೆ‌. ಹೀಗಿದ್ದರೂ ಆತ್ಮಹತ್ಯೆ ಮಾಡಿಕೊಳ್ಳುವಂತಹದ್ದು ಏನಾಗಿತ್ತು ಅನ್ನೋದನ್ನು ತಿಳಿಬೇಕು ಅನ್ನೋದು ಜನರ ಮನಸಂಕಲ್ಪ. ಆದ್ರೆ ಇದೀಗ ಸಾವಿನ ಕಾರಣದ ಕೈ ತೋರುತ್ತಿರೋದು ಆದಾಯ ತೆರಿಗೆ ಇಲಾಖೆ ಕಡೆಗೆ.

ಆದಾಯ ತೆರಿಗೆ ಇಲಾಖೆ ಅಧಿಕಾರಳ ಕಿರುಕಳ ಹೆಚ್ಚಾಗಿದೆ ಎಂದು ಸಿದ್ದಾರ್ಥ ಅವರ ಕೊನೆಯ ಪತ್ರ ಸಂದೇಶದಲ್ಲಿ ಸೂಚ್ಯವಾಗಿ ಬರೆದುಕೊಂಡಿದ್ದಾರೆ. ಅದರಲ್ಲೂ ಆದಾಯ ತೆರಿಗೆ ಇಲಾಖೆ ಡಿಜಿ ಅವರಿಂದಲೇ ಕಿರುಕುಳ ಎಂದಿದ್ದಾರೆ. ಹಾಗಾದ್ರೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡುವುದು ತಪ್ಪೇ..?  ತೆರಿಗೆಗಳ್ಳರನ್ನು ಸದೆಬಡಿಯುವುದು ತಪ್ಪೇ..? ಎಂದು ಪ್ರಶ್ನೆ ಮಾಡಬಹುದು. ಖಂಡಿತ ತೆರಿಗೆ ವಂಚನೆ ಮಾಡುವವರನ್ನು ಹಿಡಿದು ಬುದ್ಧಿ ಕಲಿಸಬೇಕಾದ ಜವಾಬ್ಧಾರಿ ತೆರಿಗೆ ಇಲಾಖೆ ಮೇಲಿದೆ. ಆದರೆ ಅದಕ್ಕಾಗಿ ಇರುವ ಕಾನೂನಿನಲ್ಲಿ ಭಾರೀ ಅವ್ಯವಸ್ಥೆ ಆಗಿದೆ ಎಂದೆನಿಸುತ್ತದೆ. ಯಾಕಂದ್ರೆ 22 ಸಾವಿರ ಕೋಟಿ ಮೌಲ್ಯದ ಸಂಪತ್ತಿನ ಒಡೆಯ 300 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎಂದರೆ ದೊಡ್ಡ ವಿಚಾರವೇ ಅಲ್ಲ. ಯಾಕಂದ್ರೆ 22 ಸಾವಿರ ಕೋಟಿ ವ್ಯವಹಾರದಲ್ಲಿ 300 ಕೋಟಿ ಏನು ಭಾರಿ ವ್ಯತ್ಯಾಸ ತರುವ ಮೊತ್ತವಲ್ಲ. ಹಾಗಿದ್ದರು ಐಟಿ ಅಧಿಕಾರಿಗಳು ಹೇಗೆ ಕಿರುಕುಳ ಕೊಟ್ಟಿರಬಹುದು..?

ಜಪ್ತಿ ಎಂಬ ಬ್ರಹ್ಮಾಸ್ತ್ರದಿಂದ ಕಿರುಕುಳ..!?
ಐಟಿ ಅಧಿಕಾರಿಗಳು ದಾಳಿ ಮಾಡ್ತಾರೆ. ಅಕ್ರಮ ಆಸ್ತಿ ಸಂಪಾದನೆ ಕಾಣಿಸುತ್ತಿದ್ದ ಹಾಗೆ ಬ್ಯಾಂಕ್ ಖಾತೆಗಳು ಸೇರಿದಂತೆ ಷೇರುಗಳನ್ನು ಮುಟ್ಟುಗೋಲು ಹಾಕಿಕೊಳ್ತಾರೆ. ಅವರಿಗೆ ಎಷ್ಟು ಪ್ರಮಾಣದ ವಂಚನೆ ಆಗಿದೆ ಅಷ್ಟು ಮಾತ್ರ ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ. ಬದಲಿಗೆ ಇಡೀ ವ್ಯವಹಾರವನ್ನೇ ತಡೆದು ನಿಲ್ಲಿಸುವ ಹಾಗೆ ಜಪ್ತಿ‌ ಕಾರ್ಯ ನಡೆಯುತ್ತದೆ. ಉದಾಹರಣೆಗೆ ಓರ್ವ ಬಡವ 2 ಲಕ್ಷ ರೂಪಾಯಿ ಹಣವನ್ನು ಸಾಲವಾಗಿ ಪಡೆದಿರುತ್ತಾರೆ. ಸಾಲ ಮರುಪಾವತಿ ಸಾಧ್ಯವಾಗಿರುವುದಿಲ್ಲ. ಆದ್ರೆ ಸಂಪಾದಿಸಿದ 2 ಲಕ್ಷ ಹಣದಲ್ಲಿ ಮಗಳ ಮದು ಮಾಡುತ್ತಿರುತ್ತಾನೆ. ಆಗ ಏಕಾಏಕಿ ಪ್ರತ್ಯೇಕ್ಷವಾಗುವ ಸಾಲಗಾರ ನನ್ನ ಎರಡು ಲಕ್ಷ ಹಣಕ್ಕೆ ಇಡೀ‌ ಮದ್ವೆ ಮನೆಯಲ್ಲಿ ನಡೆಸಿರುವ ಸಿದ್ಧತೆಯನ್ನು ಮುಟ್ಟುಗೋಲು ಹಾಕಿಕೊಳ್ತಿದ್ದೇನೆ ಎಂದರೆ, ಆ ತಂದೆಯ ಸ್ಥಿತಿ ಏನಾಗಬೇಕು‌ ಅಲ್ಲವೇ..? ಅದೇ ಪರಿಸ್ಥಿತಿಯಲ್ಲಿ ಸುದೀರ್ಘವಾಗಿ ನರಳಿದ ಸಿದ್ಧಾರ್ಥ ಅವರು ಅಂತಿಮವಾಗಿ ನೇತ್ರಾವತಿ ಸೇತುವೆಯ ಬಳಿ ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ ಎಂಬ ಆಯಾಮವೂ ನಮ್ಮ ಮುಂದಿದೆ.

ಸಿದ್ದಾರ್ಥ ಅವರ ಸಾವಿಗೆ ಐಟಿ ಪರೋಕ್ಷ ಕಾರಣ!
ಸಿದ್ದಾರ್ಥ ಅವರ ಸಾವನ್ನು ಸನಿಹಕ್ಕೆ ತಂದು ನಿಲ್ಲಿಸಿದ್ದು, ಐಟಿ ಅಧಿಕಾರಿಗಳ ಹುಚ್ಚಾಟವೇ ಇರಬಹುದು. ಯಾಕಂದ್ರೆ ಮೊದಲೇ ಸಾಲದ ಸುಳಿಯಲ್ಲಿ‌ ಸಿಲುಕಿದ್ದ ಸಿದ್ಧಾರ್ಥ ಅವರಿಗೆ ಹಣ ಬೇಕಿತ್ತು. ಆ ಕಾರಣಕ್ಕಾಗಿ ಮೈಂಡ್ ಟ್ರೀ ಷೇರುಗಳನ್ನು ಬೇರೊಂದು‌ ಕಂಪನಿಗೆ ಮಾರಾಟ ಮಾಡುವಾಗ ಮಧ್ಯಪ್ರವೇಶ ಮಾಡಿದ ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿತ್ತು. ಅಲ್ಲಿ ವ್ಯವಹಾರ ಕುಂಠಿತಗೊಳ್ತು. ಆ ಬಳಿಕ ಕೆಫೆ ಕಾಫಿ ಡೇ ಷೇರುಗಳನ್ನು ಬದಲಿ ರೂಪದಲ್ಲಿ ಕೊಟ್ಟು ಮೈಂಡ್ ಟ್ರೀ ಷೇರು ಮಾರಾಟ ಮಾಡಲಾಯ್ತು. ಆ ವೇಳೆ 46 ಕೋಟಿ ತೆರಿಗೆಯನ್ನೂ ಪಾವತಿ ಮಾಡಲಾಯ್ತು. ಆ ಬಳಿಕ ಕಾಫಿ ಡೇ ಷೇರು ಐಟಿ ಜಪ್ತಿಯಿಂದ ಷೇರು ಕುಸಿಯಲು‌ ಆರಂಭಿಸಿ ಮಾರುಕಟ್ಟೆಯಲ್ಲಿ‌ ನಷ್ಟವೆಂಬ ಭೂತ ಆವರಿಸಲು ಶುರು ಮಾಡಿತ್ತು‌.

ಐಟಿ ಅಧಿಕಾರಿಗಳ ತಪ್ಪೋ..? ಸಿದ್ಧಾರ್ಥ ಅವರ ತಪ್ಪೋ..?
ಸಣ್ಣ ಉದ್ಯಮವೊಂದನ್ನು ಬೆಳೆಸಲು ಸಾಕಷ್ಟು ಶ್ರವ ಹಾಕಿರುವ ಸಿದ್ಧಾರ್ಥ ಅವರು 22 ಸಾವಿರ ಕೋಟಿ ಮೌಲ್ಯದ ಆಸ್ತಿ ಸಂಪಾದನೆಯಲ್ಲಿ ಕೆಲವೊಂದು ವಂಚನೆಯನ್ನೂ ಮಾಡಿರಬಹುದು. ಇರುವೆಗೆ ಇರುವೆಯೇ ಭಾರ. ಆನೆಗೆ ಆನೆಯೇ ಭಾರ ಎನ್ನುವಂತೆ ಸಣ್ಣ ವ್ಯಾಪಾರಿ‌ 100 ಗ್ರಾಂ ಮೋಸ ಮಾಡಿದರೆ ಮಧ್ಯವರ್ತಿ ವ್ಯಾಪಾರಿ ಕ್ವಿಂಟಾಲ್‌ಗಟ್ಟಲೇ ಮೋಸ ಮಾಡೋದು ಸಾಮಾನ್ಯ. ಅದೇ ರೀತಿ ಇವರ ಕಂಪನಿಯಲ್ಲೂ ಕೆಲವೊಂದು ವಂಚನೆ ನಡೆದಿರಬಹುದು. ಆದ್ರೆ ಸರ್ಕಾರಗಳ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡಿ, ಅತ್ಯುತ್ತಮ ಸಂಸ್ಥೆ ಅನ್ನೋ ಹೆಗ್ಗಳಿಕೆ ಪಡೆದ ಸಂಸ್ಥೆ ಮೇಲೆ ಗಧಾ ಪ್ರಹಾರ ಸರಿಯಾದ ಕ್ರಮವಲ್ಲ‌ ಎನಿಸುತ್ತದೆ. ತೆರಿಗೆದಾರರು ಈ ದೇಶದ ಆಸ್ತಿ ಇದ್ದಂತೆ. 22 ಸಾವಿರ ಕೋಟಿ ಆಸ್ತಿ ಹೊಂದಿದ್ದವನು 300 ಕೋಟಿ ತೆರಿಗೆ ಕಟ್ಟೋದನ್ನು ಮುಚ್ಷಿಟ್ಟಿರಬಹುದು. ಅದನ್ನು ಸರಿಯಾದ ಕ್ರಮದಲ್ಲಿ‌ ಅಂದರೆ ದಿನನಿತ್ಯದ ವಹಿವಾಟಿಕೆ ಯಾವುದೇ ಅಡ್ಡಿ ಮಾಡದೆ, ವಂಚನೆಯಾಗಿರುವ ತೆರಿಗೆಯನ್ನು ವಸೂಲಿ ಮಾಡಬಹುದಿತ್ತು. ಆ ರೀತಿ ವಸೂಲಿ ಮಾಡುವ ವ್ಯವಸ್ಥೆ ನಮ್ಮಲ್ಲಿ ಇದೆಯೇ? ತೆರಿಗೆಯಲ್ಲಿ ಅವ್ಯವಹಾರವಾಗಿದೆ ಎಂಬ ಕಾರಣಕ್ಕೆ ಇಡಿ ಉದ್ಯಮದ ಆರ್ಥಿಕ ಬೆನ್ನೆಲುಬನ್ನೆ ಮುರಿದರೆ ಆ ಉದ್ಯಮ ನಿಲ್ಲುವುದಾದರೂ ಹೇಗೆ? ಹೀಗಾಗಿ ಸುಮಾರು 60 ಸಾವಿರ ಯುವಕರಿಗೆ ಉದ್ಯೋಗ ಕೊಟ್ಟಿದ್ದ ಸಿದ್ಧಾರ್ಥ ಅವರ ವ್ಯವಹಾರದ ಮೇಲೆ ಜಪ್ತಿಯ ಅಸ್ತ್ರ ಪ್ರಯೋಗ ಸಿದ್ದಾರ್ಥ ಅವರ ವಹಿವಾಟಿನ ಬುಡವನ್ನೇ ಅಲುಗಾಡಿಸಿದೆ. ಇದಕ್ಕೆ ಕಾರಣ ನಮ್ಮಲ್ಲಿರುವ ವ್ಯವಸ್ಥೆ ಮತ್ತು ಕಾನೂನು.

ಕಾನೂನು ವ್ಯವಸ್ಥೆಯಡಿ ಕ್ರಮ ಕೈಗೊಂಡಿದ್ದೇವೆ ಎಂಬುದು ಅಧಿಕಾರಿಗಳ ಸಮರ್ಥನೆ. ಆದರೆ ಅದೇ ಕಾನೂನು 60 ಸಾವಿರ ಉದ್ಯೋಗಿಗಳ ಅನ್ನದಾತನ ಸಾವಿಗೆ ಕಾರಣ ಎಂಬುದು ಸ್ಪಷ್ಟವಾಗಿ ಗೋಚರಿಸಿದೆ. ಲಕ್ಷಾಂತರ ಜನರ ಜೀವನಕ್ಕೆ ದಾರಿಯಾಗಿದ್ದ ಸಿದ್ದಾರ್ಥ್ ಅವರ ಸಾವಿಗೆ 300 ಕೋಟಿ ತೆರಿಗೆ ಮೌಲ್ಯ ಸಮವಾಗಿಬಿಟ್ಟಿತೇ? ಇದು ನಮ್ಮ ವ್ಯವಸ್ಥೆಯ ದುರಂತವೇ ಸರಿ. ತೆರಿಗೆ ಇಲಾಖೆಯ ಎಲ್ಲ ಅಧಿಕಾರಿಗಳು ಒಂದೇ ರೀತಿ ಇರುವುದಿಲ್ಲ. ಆದರೆ ಕೆಲವರು ತಮ್ಮ ಅಧಿಕಾರವನ್ನು ಅಗತ್ಯಕ್ಕಿಂತ ಹೆಚ್ಚಾಗಿ ಬಳಸಿಕೊಂಡಾಗ ಇಂತಹ ಪ್ರಮಾದಗಳು ನಡೆಯುವ ಸಾಧ್ಯತೆ ಇರುತ್ತದೆ. ಸಿದ್ದಾರ್ಥ ಅವರ ಪತ್ರದ ಪ್ರಕಾರ ಐಟಿಯ ಮಾಜಿ ಡಿಜಿ ಬಾಲಕೃಷ್ಣನ್ ಅವರನ್ನು ಪೊಲೀಸರ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂಬ ವರದಿ ಬಂದಿದೆ. ಈ ಪ್ರಕರಣದಲ್ಲಿ ನಿಜವಾಗಿಯು ಕಿರುಕುಳ ಆಗಿದ್ದರೆ ತನಿಖೆ ಮೂಲಕ ಸಾಬೀತಾಗಿ ಶಿಕ್ಷೆ ಆಗಲಿ. ಅದರ ಜತೆಗೆ ಮುಖ್ಯವಾಗಿ ವ್ಯವಸ್ಥೆಯಲ್ಲಿನ ಲೋಪವು ಸರಿಯಾದರೆ ಮತ್ತೇಂದೂ ಇಂತಹ ಕರಾಳ ಅಧ್ಯಾಯ ನಮ್ಮ ಮುಂದೆ ಬರುವುದಿಲ್ಲ ಎಂಬುದೇ ಎಲ್ಲರ ಆಶಯ.

Leave a Reply