ಸಚಿವ ಸಂಪುಟ ವಿಸ್ತರಣೆ ತಡ ಆಗ್ತಿದೆಯಲ್ಲ ಯಾಕೆ..?

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಮೈತ್ರಿ ಸರ್ಕಾರ ಪತನವಾಗಿ 10 ದಿನ ಆಯ್ತು. ಹೊಸ ಸರ್ಕಾರ ರಚನೆಯಾಗಿ 7 ದಿನಗಳಾಯ್ತು. ಸಿಎಂ ಆಗಿ ಬಿ.ಎಸ್ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ ಮಾಡಿದ್ದೂ ಆಯ್ತು. ಆ ಬಳಿಕ ಕಳೆದ ಸೋಮವಾರ ಸ್ಪೀಕರ್ ರಾಜೀನಾಮೆ ಕೊಟ್ಟ ಬಳಿಕ ನಿನ್ನೆ ಅಂದರೆ ಬುಧವಾರ ಹೊಸ ಸ್ಪೀಕರ್ ಆಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ಸದ್ಯವೇ ಸಚಿವ ಸಂಪುಟ ವಿಸ್ತರಣೆ ಮಾಡುವ ಯಾವುದೇ ಲಕ್ಷಗಳು ಕಾಣಿಸುತ್ತಿಲ್ಲ. ಇದಕ್ಕೆ ಕಾರಣ ಬಿಎಸ್ ಯಡಿಯೂರಪ್ಪ ಅವರ ಮೇಲೆ ಬಿಜೆಪಿ ಹೈಕಮಾಂಡ್ ಹದ್ದಿನ ಕಣ್ಣಿಟ್ಟು ನಿಯಂತ್ರಣ ಮಾಡ್ತಿರೋದು ಕಾರಣ ಅನ್ನೋ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಬಿಎಸ್ ಯಡಿಯೂರಪ್ಪ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವವರ ಪಟ್ಟಿಯನ್ನು ಸಿದ್ಧ ಮಾಡಿಕೊಂಡಿದ್ದು, ದೆಹಲಿಗೆ ತೆರಳಿ ಹೈಕಮಾಂಡ್ ಒಪ್ಪಿಗೆ ಪಡೆಯಲು ಮುಂದಾಗಿದ್ರು. ಈ ನಡುವೆ ಹೈಕಮಾಂಡ್ ಕೊಟ್ಟ ಶಾಕ್‌ನಿಂದ ಪ್ರವಾಸವನ್ನೇ ಮೊಟಕು ಗೊಳಿಸಿದ್ದಾರೆ ಅನ್ನೋ ಅನುಮಾನ ಕೂಡ ಬಿಜೆಪಿಯ ಹಲವು ಶಾಸಕರನ್ನು ಕಾಡುತ್ತಿದೆ. ಯಾಕಂದ್ರೆ ಸ್ಪೀಕರ್ ಸ್ಥಾನಕ್ಕೆ ಬಿಎಸ್‌ವೈ ಬಣದಲ್ಲಿ ಗುರ್ತಿಸಿಕೊಂಡಿದ್ದ ಕೆ‌.ಜಿ ಬೋಪಯ್ಯ ಅವರನ್ನು ಆಯ್ಕೆ ಮಾಡಿ ನಾಮಪತ್ರ ಸಲ್ಲಿಕೆಗೆ ನಿರ್ಧಾರ ಮಾಡಲಾಗಿತ್ತು. ಆದ್ರೆ ಏಕಾಏಕಿ ಮಧ್ಯಪ್ರವೇಶ ಮಾಡಿದ ಕೇಂದ್ರ ಸಮಿತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಆಯ್ಕೆ ಮಾಡಿ, ನಾಮಪತ್ರ ಸಲ್ಲಿಕೆಗೆ ಸೂಚಿಸಿತ್ತು.

ಕೆ.ಜಿ ಬೋಪಯ್ಯ ಕಳೆದ ಬಾರಿ ಸ್ಪೀಕರ್ ಆಗಿ ತೆಗೆದುಕೊಂಡಿದ್ದ ಪಕ್ಷಪಾತಿ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿತ್ತು. ಆ ಬಳಿಕ ಮತ್ತೆ ಸ್ಪೀಕರ್ ಸ್ಥಾನಕ್ಕೆ ಕೆ.ಜಿ ಬೋಪಯ್ಯ ಅವರನ್ನು ಆಯ್ಕೆ ಮಾಡಲಾಗ್ತಿದೆ ಅನ್ನೋ ಸುದ್ದಿ, ಭಾರೀ ಚರ್ಚೆಗೆ ಗ್ರಾಸವಾಯ್ತು. ಒಂದು ಕಡೆ ಸ್ಪೀಕರ್ ಆಗಿ ರಮೇಶ್ ಕುಮಾರ್ ತೆಗೆದುಕೊಂಡ ನಿಲುವುಗಳನ್ನು ಪ್ರಶಂಸಿಸುತ್ತಾ, ಇನ್ನೊಂದು ಕಡೆ ಕೆ.ಜಿ ಬೋಪಯ್ಯ ಅವರ ಆಯ್ಕೆ ಚಾಟಿ ಬೀಸಲು ಶುರು ಮಾಡಿದ್ರು. ಇನ್ನೂ ಕೆ.ಜಿ ಬೋಪಯ್ಯ ಅವರನ್ನೇ ಸ್ಪೀಕರ್ ಆಗಿ ಆಯ್ಕೆ ಮಾಡಿದ್ರೆ ಪಕ್ಷಕ್ಕೆ ಮುಜುಗರ, ಬಿಎಸ್‌ವೈ ಆಯ್ಕೆಯನ್ನು ತಡೆಯಬೇಕು ಎಂದು ಸಂಘ ಪರಿವಾರದ ಕಾಗೇರಿಯವರನ್ನು ಆಯ್ಕೆ ಮಾಡಲಾಯ್ತು ಎನ್ನಲಾಗ್ತಿದೆ. ಇಷ್ಟೆಲ್ಲಾ ಕಾರಣದಿಂದ ಕೇಂದ್ರ ಸಮಿತಿ ಬಿಎಸ್ ಯಡಿಯೂರಪ್ಪ ನಿರ್ಧಾರಕ್ಕೆ ನೋ ಅನ್ನೋ ಸಂದೇಶ ರವಾನೆ ಮಾಡಿತ್ತು. ಇದೀಗ ಸಚಿವಾಕಾಂಕ್ಷಿಗಳ ಪಟ್ಟಿಯಲ್ಲೂ ಯಡಿಯೂರಪ್ಪ ರೀ ವರ್ಕ್ ಮಾಡ್ತಿದ್ದಾರೆ ಎನ್ನಲಾಗಿದೆ.

ಮೊದಲು ಸಿದ್ಧ ಮಾಡಿ ಇಟ್ಟುಕೊಂಡಿದ್ದ ಪಟ್ಟಿಯಲ್ಲಿ ಬಿ.ಎಸ್ ಯಡಿಯೂರಪ್ಪ ತಮ್ಮ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿದ್ದ ಕೆಲವರಿಗೆ ಸಚಿವ ಸ್ಥಾನ ನೀಡುವ ಇಚ್ಛೆ ಹೊಂದಿದ್ದರು ಎನ್ನಲಾಗಿದೆ. ಇದೀಗ ಹೈಕಮಾಂಡ್ ನಡೆ ಗಮನಿಸಿ ಹೊಸದಾಗಿ ಪಟ್ಟಿ ಸಿದ್ಧಪಡಿಸಲು ನಿರ್ಧಾರ ಮಾಡಿದ್ದು, ಅಚ್ಚರಿಯ ಆಯ್ಕೆಗಳನ್ನು ಹೈಕಮಾಂಡ್ ಎದುರು ಮಂಡಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗ್ತಿದೆ. ತಮ್ಮ ಹಿಂಬಾಲಕ ಪಡೆಯನ್ನು ಈ ಬಾರಿ ಸಂಪೂರ್ಣ ಕಡೆಗಣಿಸಿ, ಹೊಸ ಮುಖಗಳಿಗೆ ಅವಕಾಶ ಕೊಟ್ಟು ಜನಪರ ಆಡಳಿತ ಕೊಡಬೇಕು ಎಂದು ಬಿ.ಎಸ್ ಯಡಿಯೂರಪ್ಪ ಅವರೇ ಹೇಳಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದೇ ಕಾರಣಕ್ಕಾಗಿ ಬುಧವಾರ ಭೇಟಿಯಾದ ಲಿಂಗಾಯತ ಸಮುದಾಯ ನಾಲ್ಕು ಸಚಿವ ಸ್ಥಾನಗಳನ್ನು ನೀಡುವಂತೆ ಒತ್ತಾಯ ಮಾಡಿದಾಗ, ನಾಲ್ಕು ಸಾಕಾ..? ಐದು ಬೇಡ್ವಾ ಎಂದು ಕೋಪದಲ್ಲಿ ಮರು ಪ್ರಶ್ನೆ ಎಸೆದರು ಅನ್ನೋ ಮಾಹಿತಿ ಜೈ ಜೈ ಎನ್ನುತ್ತಿದ್ದ ಶಾಸಕರಿಗೆ ಬಿಸಿತುಪ್ಪ ಸುರಿದಂತಾಗಿದೆ.

Leave a Reply