ಹಳ್ಳಿಹಕ್ಕಿ ಗೂಡಿಗೆ ಲಗ್ಗೆ ಹಾಕ್ತಾನಾ ಆಪರೇಷನ್ ಸೈನಿಕ..?

  ಡಿಜಿಟಲ್ ಕನ್ನಡ ಟೀಮ್:

  ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗುವ ಕನಸುಕಾಣುತ್ತಿದ್ದ ಹೆಚ್ ವಿಶ್ವನಾಥ್ ಅವರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ನೀಡಿದ ಅನರ್ಹತೆ ಶಾಕ್ ನಿಂದ ಇನ್ನು ಚೇತರಿಸಿಕೊಳ್ಳುತ್ತಿದ್ದಾರೆ, ಅದ ಬೆನ್ನಲ್ಲೇ ಈಗ ಅವರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಮುಂಬರುವ ಉಪ ಚುನಾವಣೆಯಲ್ಲಿ ವಿಶ್ವನಾಥ್ ಅವರಿಗೆ ಹುಣಸೂರಿನ ಟಿಕೆಟ್ ಸಿಗೋದು ಅನುಮಾನವಾಗಿದೆ. ಕಾರಣ, ಆ ಕ್ಷೇತ್ರದಿಂದ ಯೋಗೇಶ್ವರ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸುತ್ತಿದೆ.

  ಹೌದು, ರಾಜಕೀಯ ವನವಾಸ ಅನುಭವಿಸುತ್ತಿದ್ದ ವಿಶ್ವನಾಥ್ ಅವರನ್ನು ಮೈಸೂರು ಜಿಲ್ಲೆ ಹುಣಸೂರು ಕ್ಷೇತ್ರದಿಂದ ಗೆಲ್ಲಿಸಿಕೊಂಡ ಬಳಿಕ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದರು. ಆದರೂ ಸ್ವಹಿತಾಸಕ್ತಿಗಾಗಿ ರಾಜೀನಾಮೆ ನೀಡಿ ಮುಂಬೈ ವಾಸ್ತವ್ಯ ಮಾಡಿ ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ರಾಜೀನಾಮೆ ಕೊಟ್ಟಷ್ಟೇ ವೇಗವಾಗಿ ಸಚಿವ ಪಟ್ಟ ಅಲಂಕರಿಸಲು ಸಜ್ಜಾಗಿದ್ದ ಅತೃಪ್ತ ಶಾಸಕರನ್ನು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅನರ್ಹ ಮಾಡಿ ಆದೇಶ ಮಾಡುವ ಮೂಲಕ ಸಂವಿಧಾನ ಬದ್ಧವಾದ ಕಾನೂನು ಅಸ್ತ್ರ ಬಳಕೆ ಮಾಡಿದ್ದಾರೆ. ಈ ಮೂಲಕ ಪಕ್ಷಾಂತರ ಮಾಡುವ ಶಾಸಕರಿಗೆ ಎಚ್ಷಿಕೆ ಗಂಟೆ ಎನ್ನುವಂತೆ ಮಾಡಿದ್ದಾರೆ.

  ಶಾಸಕರು ಅನರ್ಹರಾದ ಬಳಿಕ 6 ತಿಂಗಳಲ್ಲಿ ಚುನಾವಣೆ ನಡೆಸಬೇಕಿದ್ದು, ಎಲ್ಲಾ 17 ಕ್ಷೇತ್ರಗಳಿಗೆ ಸದ್ಯದಲ್ಲೇ ಉಪಚುನಾವಣೆ ನಡೆಯಲಿದೆ. ಆದ್ರೆ ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧೆಯನ್ನೂ ಮಾಡುವಂತಿಲ್ಲ. ಅತೀ ಶೀಘ್ರದಲ್ಲೇ ರಚನೆಯಾಗುವ ಬಿಜೆಪಿ ಸರ್ಕಾರದ ಸಚಿವ ಸಂಪುಟಕ್ಕೂ ಸೇರುವಂತಿಲ್ಲ ಎನ್ನುವ ಹಾಗೆ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಇದೀಗ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಸ್ಪೀಕರ್ ತೆಗೆದುಕೊಂಡಿರುವ ನಿರ್ಧಾರ ಕಾನೂನು ಬಾಹಿರ, ಅನರ್ಹತೆ ಮಾಡಿರೋ ಆದೇಶವನ್ನು ವಜಾ ಮಾಡುವ ಮೂಲಕ ಶಾಸಕರಿಗೆ ಇರುವ ಮೂಲಭೂತ ಹಕ್ಕನ್ನು ರಕ್ಷಣೆ ಮಾಡಬೇಕು ಎಂದು ಕೋರಿಕೊಂಡಿದ್ದಾರೆ. ಆದ್ರೆ ಬಿಜೆಪಿ ಅಂಗಳದ ಲೆಕ್ಕಾಚಾರ ಬೇರೆಯದೇ ಆಗಿದ್ದು, ಒಂದು ವೇಳೆ ಸುಪ್ರೀಂಕೋರ್ಟ್‌ನಲ್ಲಿ ಅನರ್ಹತೆ ರದ್ದಾದರೂ ಹುಣಸೂರು ಕ್ಷೇತ್ರದಲ್ಲಿ ಹೆಚ್. ವಿಶ್ವನಾಥ್ ಅವರಿಗೆ ಬಿಜೆಪಿ ಟಿಕೆಟ್ ಸಿಗೋದು ಅನುಮಾನ ಎನ್ನಲಾಗುತ್ತಿದೆ.

  ಆಪರೇಷನ್ ಕಮಲ ಮಾಡುವಲ್ಲಿ‌ ಕೆಲವೊಂದು ಶಾಸಕರು, ಮಾಜಿ ಶಾಸಕರ ಕೆಲಸ ಗಮನಾರ್ಹವಾಗಿದ್ದು, ವಿಶ್ವನಾಥ್ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಾಗಿದೆ. ಚನ್ನಪಟ್ಟಣದ ಮಾಜಿ ಶಾಸಕ ಯೋಗೇಶ್ವರ್ ಅವರು ಆಪರೇಷನ್ ಕಮಲದ ಮುಂದಾಳು ಪಡೆಯಲ್ಲಿ ಗುರ್ತಿಸಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಎದುರು ಪರಾಭವ ಹೊಂದಿರುವ ಅವರನ್ನು ವಿಧಾನಸಭೆಗೆ ಕರೆದುಕೊಂಡು ಬರಲು ಸಿಎಂ ಬಿ.ಎಸ್ ಯಡಿಯೂರಪ್ಪ ನಿರ್ಧಾರ ಮಾಡಿದ್ದಾರೆ ಎನ್ನಲಾಗ್ತಿದೆ. ಹುಣಸೂರು ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳು ನಿರ್ಣಾಯಕ ಪಾತ್ರ ವಹಿಸಲಿದ್ದು, ವಿಶ್ವನಾಥ್ ಅವರಿಗಿಂತಲೂ ಯೋಗೇಶ್ವರ್ ಬಿಜೆಪಿ ಅಭ್ಯರ್ಥಿ ಆದ್ರೆ ಗೆಲುವಿನ ಲೆಕ್ಕಾಚಾರ ಸಲೀಸು ಅನ್ನೋ ರಿಪೋರ್ಟ್ ಕೂಡ ಕಮಲದ ಕೈ ಸೇರಿದೆ ಎನ್ನಲಾಗ್ತಿದೆ. ಅದೇ ಕಾರಣಕ್ಕಾಗಿ ಕ್ಷೇತ್ರ ಗೆಲ್ಲುವುದು ಮುಖ್ಯ ಎನ್ನುವ ಲೆಕ್ಕಾಚಾರಕ್ಕೆ ಬಂದಿದ್ದು, ಯೋಗೇಶ್ವರ್ ಅವರಿಗೆ ಟಿಕೆಟ್ ನೀಡಲಾಗುವುದು ಅನ್ನೋ ಮಾತುಗಳು ಹಳ್ಳಿಹಕ್ಕಿಯ ನಿದ್ರೆಗೆಡಿಸಿದೆ. ಒಟ್ಟಾರೆ ಹಕ್ಕಿ ಗೂಡಿದೆ ಆಪರೇಷನ್ ಕಮಲದ ಹೆಮ್ಮೆಯ ಸೈನಿಕ ಲಗ್ಗೆ ಹಾಕೋದು ಕನ್ಫರ್ಮ್ ಆಗ್ತಿದೆ.

  Leave a Reply