ಉಪಚುನಾವಣೆಯಲ್ಲಿ ನಾನೇ ಬಿಜೆಪಿ ಅಭ್ಯರ್ಥಿ! ಎಂಟಿಬಿಗೆ ಶಾಕ್ ಕೊಟ್ಟ ಕಮಲ ನಾಯಕ

ಡಿಜಿಟಲ್ ಕನ್ನಡ ಟೀಮ್:

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹರಾಗಿರುವ ಮಾಜಿ ಸಚಿವ ಎಂಟಿಬಿ ನಾಗರಾಜ್, ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಅವರ ಈ ನಿರೀಕ್ಷೆಗೆ ಬಿಜೆಪಿ ಯುವ ನಾಯಕ ಶರತ್ ಬಚ್ಚೇಗೌಡ ಶಾಕ್ ನೀಡಿದ್ದಾರೆ.

ಮುಂಬರುವ ಹೊಸಕೋಟೆ ಉಪಚುನಾವಣೆಯಲ್ಲಿ ನಾನೇ ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿಕೊಂಡಿರುವ ಶರತ್ ಈ ಮೂಲಕ ಟಿಕೆಟ್ ಆಕಾಂಕ್ಷಿ ಎಂದು ತಿಳಿಸಿದ್ದಾರೆ.

ಹೊಸಕೋಟೆಯ ಬೈಲನರಸಾಪುರ ಪಂಚಾಯ್ತಿ ವ್ಯಾಪ್ತಿಯಲ್ಲಿ ಶನಿವಾರ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿದ ಅವರು, ‘ನಾವು ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಹೀಗಾಗಿ ಪಕ್ಷ ನಮ್ಮನ್ನು ಕೈ ಬಿಡುವುದಿಲ್ಲ ಎಂಬ ನಂಬಿಕೆ ಇದೆ. ಮುಂಬರುವ ಉಪ ಚುನಾವಣೆಯಲ್ಲಿ ನಾನೇ ಬಿಜೆಪಿ ಅಭ್ಯರ್ಥಿಯಾಗುವ ವಿಶ್ವಾಸವಿದೆ’ ಎಂದರು.

ಎಂಟಿಬಿ ನಾಗರಾಜ್ ಅವರು ಬಿಜೆಪಿಗೆ ಬಂದು ಬಿಜೆಪಿಯಿಂದ ಸ್ಪರ್ಧಿಸುತ್ತಾರೆ. ಹೀಗಾಗಿ ಶರತ್ ಅವರನ್ನು ಕಾಂಗ್ರೆಸ್ ನಾಯಕರು ಸಂಪರ್ಕಿಸಿದ್ದಾರೆ ಎಂಬ ವದಂತಿಗೆ ಪ್ರತಿಕ್ರಿಯೆ ನೀಡಿದ ಅವರು ಹೇಳಿದ್ದಿಷ್ಟು…

‘ಕಳೆದ ಎರಡು ವಾರಗಳಲ್ಲಿ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದೆ. ನನ್ನನ್ನು ಯಾವುದೇ ಕಾಂಗ್ರೆಸ್ ನಾಯಕರು ಸಂಪರ್ಕಿಸಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಊಹಾಪೋಹಕ್ಕೆ ಪ್ರತಿಕ್ರಿಯೆ ನೀಡಲು ಆಗುವುದಿಲ್ಲ. ನಮ್ಮ ಪಕ್ಷಕ್ಕೆ ಬೇರೆಯವರು ಯಾರು ಸೇರಿಲ್ಲ. ಅವರು ಸೇರಿ ಅವರಿಗೆ ನಮ್ಮ ಪಕ್ಷ ಟಿಕೆಟ್ ನೀಡುತ್ತದೆ ಎಂಬುದು ದೂರದ ವಿಚಾರ. ಇಂದಿನ ರಾಜಕೀಯ ಬೆಳವಣಿಗೆ ನಾಳೆಗೆ ಇರುವುದಿಲ್ಲ. ಹೀಗಾಗಿ ಈ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ.

ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಲೋಕಸಭೆ ಚುನಾವಣೆಯಲ್ಲಿ ನಮ್ಮ ಕ್ಷೇತ್ರದಿಂದ ಪಕ್ಷಕ್ಕೆ ಉತ್ತಮ ಲೀಡ್ ಸಿಕ್ಕಿದೆ. ನಮ್ಮ ಕ್ಷೇತ್ರ ಮಾತ್ರವಲ್ಲ ಬೇರೆ ಕ್ಷೇತ್ರಗಳಲ್ಲೂ ಹೋಗಿ ಪಕ್ಷದ ಸಂಘಟನೆ ಮಾಡಿದ್ದೇವೆ. ಯುವ ಮೋರ್ಚಾದಲ್ಲೂ ನಮಗೆ ಅವಕಾಶ ನೀಡಿದ್ದಾರೆ. ಹೀಗಾಗಿ ಪಕ್ಷ ನಮ್ಮನ್ನು ಕೈ ಬಿಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಉಪಚುನಾವಣೆಯಲ್ಲಿ ನಾನೇ ಅಭ್ಯರ್ಥಿ ಆಗುತ್ತೇನೆ.’

Leave a Reply