ಸೆ. 2ನೇ ವಾರದಲ್ಲಿ ಬಿಎಸ್ ವೈ ಮಧ್ಯಂತರ ಬಜೆಟ್?

ಡಿಜಿಟಲ್ ಕನ್ನಡ ಟೀಮ್:

ಹೊಸ ಹುರುಪಿನೊಂದಿಗೆ ಸರ್ಕಾರ ರಚನೆ ಮಾಡಿರುವ ಬಿಎಸ್ ಯಡಿಯೂರಪ್ಪ ಅವರಿಗೆ ಸಂಪುಟ ರಚನೆ ಕಗ್ಗಂಟಾಗಿದೆ. ತಮಗೂ ಪೂರ್ಣ ಸ್ವಾತಂತ್ರ್ಯ ಇಲ್ಲದೇ ಹೈಕಮಾಂಡ್ ಅನುಮತಿಯೂ ದೊರೆಯದೇ ಕಾದು ಕುಳಿತಿರುವ ಬಿಎಸ್ ವೈ ಅವರು ಮುಂದಿನ ತಿಂಗಳು 2ನೇ ವಾರ ಮಧ್ಯಂತರ ಬಜೆಟ್ ಮಂಡನೆ ಮಾಡಲು ತಯಾರಿ ನಡೆಸುತ್ತಿದ್ದಾರೆ.

ಸರ್ಕಾರ ರಚನೆಯಾಗಿ ವಾರ ಕಳೆದರು ಸಚಿವ ಸಂಪುಟ ಸ್ವರೂಪ ಪಡೆದಿಲ್ಲ. ಶೀಘ್ರದಲ್ಲೇ ಈ ಸಮಸ್ಯೆಯನ್ನು ನಿಭಾಯಿಸಿಕೊಂಡು ಬಜೆಟ್ ಮಂಡನೆ ಮಾಡಲು ಯಡಿಯೂರಪ್ಪ ನಿರ್ಧರಿಸಿದ್ದಾರೆ.

ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲು ಯಡಿಯೂರಪ್ಪ ನಿರ್ಧರಿಸಿದ್ದು, ಮಧ್ಯಂತರ ಬಜೆಟ್ ಅನ್ನು ಅವರೇ ಮಂಡಿಸುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಈ ಹೈಕಮಾಂಡ್ ನಿರ್ಧಾರ ಏನಾಗಿರುತ್ತದೆ ಎಂಬುದನ್ನು ಕಾದುನೋಡಬೇಕಿ.

ಮುಖ್ಯಮಂತ್ರಿಗಳು ನಿರಂತರವಾಗಿ ಅಧಿಕಾರಿಗಳ ಜತೆ ಸಭೆ ನಡೆಸುತ್ತಿದ್ದು, ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪನ್ಮೂಲಗಳ ಕ್ರೂಢೀಕರಣ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ ಬಜೆಟ್‍ನಲ್ಲಿ ಖರ್ಚಾಗಿರುವ ಅನುದಾನ, ಹೊಸ ಕಾರ್ಯಕ್ರಮಗಳ ಘೋಷಣೆ ಸೇರಿದಂತೆ ಹೊಸ ಬಜೆಟ್ ಮಂಡನೆಗೆ ಕೈಗೊಳ್ಳಬೇಕಾದ ಸಿದ್ಧತೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ಮೂಲಗಳ ಪ್ರಕಾರ ಸೆಪ್ಟೆಂಬರ್ ತಿಂಗಳ ಎರಡನೇ ವಾರದಲ್ಲಿ ಯಡಿಯೂರಪ್ಪ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಲಿದ್ದು, ಎರಡು ವಾರಗಳ ಕಾಲ ಅಧಿವೇಶನ ನಡೆಸುವ ಸಾಧ್ಯತೆ ಇದೆ. ಇತ್ತೀಚೆಗೆ ಯಡಿಯೂರಪ್ಪ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವ ವೇಳೆ ದೋಸ್ತಿ ಸರ್ಕಾರದ ಬಜೆಟ್‍ಗೆ ಕೇವಲ ಮೂರು ತಿಂಗಳ ಲೇಖಾನುದಾನ ಪಡೆದಿದ್ದರು. ಪೂರ್ಣಾವಧಿಗೆ ಲೇಖಾನುದಾನ ಪಡೆದರೆ ಹೊಸ ಬಜೆಟ್ ಮಂಡಿಸಲು ಅವಕಾಶ ಸಿಗುವುದಿಲ್ಲ ಎಂಬ ಕಾರಣಕ್ಕಾಗಿಯೇ ಮುಂಜಾಗ್ರತ ಕ್ರಮವಾಗಿ ಕೇವಲ ಮೂರು ತಿಂಗಳ ಅವಧಿಗೆ ಮಾತ್ರ ಸದನದಲ್ಲಿ ಲೇಖಾನುದಾನ ಮಂಡಿಸಿದ್ದರು.

ಈ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟಿದ್ದು ಯಡಿಯೂರಪ್ಪನವರು ತಮ್ಮ ಸರ್ಕಾರದ ಬಗ್ಗೆ ಜನರ ಪ್ರೀತಿ ನಂಬಿಕೆ ಹೆಚ್ಚಿಸಿಕೊಳ್ಳಲು ಯಾವ ರೀತಿ ಕಾರ್ಯಕ್ರಮ ಘೋಷಿಸಿದ್ದಾರೆ ಎಂಬ ಕುತೂಹಲ ಮೂಡಿದೆ.

Leave a Reply