ಜೆಡಿಎಸ್ಸಿಗೆ ಯಡಿಯೂರಪ್ಪ ದೊಡ್ಡಾಪರೇಷನ್, ದೇವೇಗೌಡರ ಪಾಳೆಯಕ್ಕೆ ಫುಲ್ ಟೆನ್ಷನ್!

 ಕೈ ಹಿಡಿದ ಅದೃಷ್ಟ ಮತ್ತಾಗಿ ಪರಿವರ್ತಿತವಾದರೆ ಅಧಿಕಾರವೆಂಬುದು ಕಾಲಲ್ಲಿ ಒದ್ದೊಡುತ್ತದೆ. ಮತ್ತಿಳಿಯುವ ಹೊತ್ತಿಗೆ ಕಾಲ ಮಿಂಚಿರುತ್ತದೆ. ವಿಷಾದ, ನೋವು, ಹತಾಶೆ ಪಳೆಯುಳಿಕೆಯಾಗಿ ಉಳಿದಿರುತ್ತದೆ ಎಂಬುದಕ್ಕೆ ಸಾಕ್ಷಿ ಜಾತ್ಯತೀತ ಜನತಾ ದಳದ ಪ್ರಸಕ್ತ ಪರಿಸ್ಥಿತಿ.

ಪರಾವಂಬನೆ ಇತಿಮಿತಿಯ ಮರೆವು, ಪರಹಿತ ಅಸಹಿಷ್ಣುತೆ, ಪರಾಧಿಕಾರದಲ್ಲಿ ಹಸ್ತಕ್ಷೇಪ, ಅಯೋಗ್ಯರಿಗೆ ಮಣೆ, ಕುಟುಂಬ ವ್ಯಾಮೋಹ, ಉಪಕಾರ ಸ್ಮರಣೆ ಕೊರತೆ, ಉಡಾಫೆಗಳ ಕಡುಮಿಶ್ರಣದಿಂದ ಜೆಡಿಎಸ್ ತನ್ನ ಮೈತ್ರಿ ಪಾಲುದಾರ ಕಾಂಗ್ರೆಸ್ ಜತೆ ಜತೆಗೆ ಅಧಿಕಾರ ಕಳೆದುಕೊಂಡಿದೆ. ಸ್ವಯಂಕೃತ ಅಪರಾಧ ನಿಮಿತ್ತದ ಅಧಿಕಾರ ಆತ್ಮಹತ್ಯೆಯಿಂದ ತಲ್ಲಣಿಸಿ ಹೋಗಿರುವ ಜೆಡಿಎಸ್ ಇದೀಗ ಪಕ್ಷದ ಅಳಿದುಳಿದ ಸದಸ್ಯರನ್ನೂ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದೆ.

ಆಪರೇಷನ್ ಕಮಲದ ಮೂಲಕ ಹದಿನೇಳು ಶಾಸಕರಿಗೆ ‘ಬೊಂಬಾಯಿ ಮಿಠಾಯಿ’ ತಿನ್ನಿಸಿ ಮೈತ್ರಿ ಸರಕಾರವನ್ನು ಆಪೋಶನ ತೆಗೆದುಕೊಂಡು, ಬಿಜೆಪಿ ಸರಕಾರ ಪ್ರತಿಷ್ಠಾಪಿರುವ ಸಿಎಂ ಯಡಿಯೂರಪ್ಪನವರು ಇದೀಗ ‘ದೊಡ್ಡಾಪರೇಷನ್’ಗೇ ಕೈ ಹಾಕಿದ್ದಾರೆ. ಸ್ಪಷ್ಟ ಬಹುಮತದ ಕೊರತೆ ನೀಗಿಸಿಕೊಳ್ಳುವ ಮೂಲಕ ತಮ್ಮ ಸ್ಥಾನ ಹಾಗೂ ಸರಕಾರದ ಬೇರು ಗಟ್ಟಿಮಾಡಿಕೊಳ್ಳಲು ಜೆಡಿಎಸ್ಸಿನ ಮೂರನೇ ಎರಡರಷ್ಟು ಶಾಸಕರನ್ನು ಸೆಳೆಯಲು ಕಾರ್ಯನಿರತರಾಗಿದ್ದಾರೆ. ಪಕ್ಷಾಂತರ ಕಾಯ್ದೆ ಹಾಗೂ ಮರುಚುನಾವಣೆ ತೊಂದರೆಯಿಂದ ತಪ್ಪಿಸಿಕೊಳ್ಳುವುದು ಇದರ ಹಿಂದಿರುವ ತಂತ್ರ.

ರಾಜಕೀಯ ಭವಿಷ್ಯದ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲದ ಜೆಡಿಎಸ್ ಶಾಸಕರು ಪ್ರತ್ಯೇಕ ಗುಂಪು ಮಾಡಿಕೊಂಡು ಬಿಜೆಪಿ ಸರಕಾರಕ್ಕೆ ಬೆಂಬಲ ವ್ಯಕ್ತಪಡಿಸುವುದೋ ಅಥವಾ ಬಿಜೆಪಿ ಸೇರುವುದೋ ಎಂಬುದರ ಹಿಂದಿನ ಸಾಧಕ-ಬಾಧಕ, ಲಾಭ-ನಷ್ಟಗಳ ಬಗ್ಗೆ ತುಲನೆ ಮಾಡುತ್ತಿದ್ದಾರೆ. ಒಂದೆಡೆ, ಮಂಡ್ಯದಲ್ಲಿ ಸ್ವತಃ ಕುಮಾರಸ್ವಾಮಿ ಅವರ ಪುತ್ರ ನಿಖಿಲ್, ತುಮಕೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರೇ ಸೋತಿರುವಾಗ ಇನ್ನು ತಮ್ಮ ಕತೆಯೇನು ಎಂಬ ಚಿಂತೆ ಅವರನ್ನು ಬಾಧಿಸುತ್ತಿದ್ದರೆ, ಇನ್ನೊಂದೆಡೆ ಜೆಡಿಎಸ್ ಬಿಟ್ಟು ಹೋದರೆ ಭವಿಷ್ಯದಲ್ಲಿ ಸ್ವಂತ ಬಲದಿಂದ ಚುನಾವಣೆ ಗೆಲ್ಲಲು ಸಾಧ್ಯವೇ? ದೇವೇಗೌಡರ ಕುಟುಂಬದ ಸೇಡಿನ ರಾಜಕೀಯದ ಎದಿರು ಈಜಲು ಸಾಧ್ಯವೇ? ಬಿಜೆಪಿಯ ಸಹಕಾರ ದೊರೆಯುತ್ತದೆಯೇ? ಆ ಪಕ್ಷದ ಟಿಕೆಟ್ ಸಿಗುತ್ತದೆಯೇ? ಅಲ್ಲಿ-ಇಲ್ಲಿ ಎಲ್ಲಿಯೂ ಸಲ್ಲದೆ ಅತಂತ್ರರಾಗಿಬಿಟ್ಟರೇ ಎಂಬ ಪ್ರಶ್ನೆಗಳು ನಿರ್ದಿಷ್ಟ ನಿಲುವು ತೆಗೆದುಕೊಳ್ಳಲು ಸತಾಯಿಸುತ್ತಿವೆ.

ಆದರೆ ಗೌಡರ ಪಾಳೆಯ ಹೊರತುಪಡಿಸಿ ಜೆಡಿಎಸ್ಸಿನ ಕೆಲ ಮುಖಂಡರ ವರ್ತನೆ ಅವರನ್ನು ಮತ್ತಷ್ಟು ಗೊಂದಲಕ್ಕೆ ತಳ್ಳಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಹಾಗೂ ಯಡಿಯೂರಪ್ಪ ಅವರ ನಡೆ-ನುಡಿಯನ್ನು ಶ್ಲಾಘಿಸುತ್ತಲೇ ರಾಜಕೀಯ ನಿವೃತ್ತಿಯ ಮಾತಾಡುತ್ತಿರುವ ಮಾಜಿ ಸಚಿವ ಜಿ.ಟಿ. ದೇವೇಗೌಡರ ಮನಸ್ಸಿನಲ್ಲಿ ಬಿಜೆಪಿ ಕುದುರೆ ಓಡುತ್ತಿರುವುದು ಅವರಿಗೆ ಕಾಣಿಸುತ್ತಿದೆ. ಅದೇ ರೀತಿ ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪುರ, ಪುಟ್ಟರಾಜು ಅವರಂಥ ಕೆಲ ನಾಯಕರು ಗೌಡರ ಪಾಳೆಯದ ಅನಾದಾರ ಧೋರಣೆಯಿಂದ ಬೇಸತ್ತು ಒಳಗುದಿಯಲ್ಲಿ ಬೇಯುತ್ತಿರುವುದೂ ಗೋಚರಿಸುತ್ತಿದೆ. ಈ ಮಧ್ಯೆ, ಸರಕಾರ ಪತನದ ನಂತರ ಅಧಿಕಾರದ ಬಗ್ಗೆ ಸನ್ಯಾಸಿಯಂತೆ ಮಾತಾಡಿದ್ದ ಎಚ್.ಡಿ. ರೇವಣ್ಣ ಕೆಎಂಎಫ್ ಅಧ್ಯಕ್ಷ ಗಾದಿ ಹಿಂದೊಡುತ್ತಿರುವುದು ಸೋಜಿಗ ತಂದಿದೆ. ರೇವಣ್ಣ ಅವರಂತೆಯೇ ತಮಗೂ ಅಧಿಕಾರವೇ ಬಹಳ ಮುಖ್ಯವಲ್ಲವೇ ಎಂಬ ಸ್ವಪ್ರಶ್ನೆಯನ್ನು ಮುಂದೊಡ್ಡಿದೆ. ಅಧಿಕಾರವಿದ್ದಾಗ ಪಕ್ಷದ ‘ದೊಡ್ಡ ಬುದ್ದಿ’ಗಳು ತಮ್ಮನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬ ಮುನಿಸಿನಲ್ಲಿರುವ ಅವರೀಗ ಕಾಲಿಗೆ ಬುದ್ಧಿ ಹೇಳಲು ಚಿಂತನೆ ನಡೆಸಿದ್ದು, ಇದು ಜೆಡಿಎಸ್ ದೊಡ್ಡ ನಾಯಕರನ್ನು ಕಂಗೆಡಿಸಿದೆ.

ಈ ಮಧ್ಯೆ ಅನರ್ಹ ಶಾಸಕರಿಂದ ತೆರವಾಗಿರುವ ವಿಧಾನಸಭೆ ಕ್ಷೇತ್ರಗಳ ಮರುಚುನಾವಣೆ ಎದುರು ನೋಡುತ್ತಿರುವ ಗೌಡರ ಕುಟುಂಬ ಕೆ.ಆರ್. ಪೇಟೆಯಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ರಾಜರಾಜೇಶ್ವರಿನಗರದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಕಣಕ್ಕಿಳಿಸಿದರೆ ಹೇಗೆ
ಎಂಬ ಚಿಂತನೆಯಲ್ಲಿದೆ. ಪ್ರಜ್ವಲ್ ಗೆದ್ದರೆ ದೇವೇಗೌಡರಿಗೆ ಹಾಸನವನ್ನು ತೆರವು ಮಾಡಿಕೊಡಬಹುದು, ನಿಖಿಲ್ ಗೆದ್ದರೆ ಮಂಡ್ಯ ಸೋಲಿನ ದುಃಖ ಮರೆಯಬಹುದು ಎಂಬ ದೂರಾಲೋಚನೆ ಅವರದು. ಮತ್ತೆ ಮತ್ತೆ ಮರುಕಳಿಸುತ್ತಿರುವ ಗೌಡರ ಕುಟುಂಬ ಹಿತಚಿಂತನೆ ಜಾಢ್ಯ ಜೆಡಿಎಸ್ ಶಾಸಕರ ಪಕ್ಷವಿಮುಖ ನಿಲುವನ್ನು ಗಟ್ಟಿ ಮಾಡುತ್ತಿದೆ. ಬಿಜೆಪಿ ಅಪ್ಯಾಯಮಾನ, ಪರ್ಯಾಯ ಅವಕಾಶವಾಗಿ ಕಾಣಿಸುತ್ತಿದೆ.

ಅಧಿಕಾರದಲ್ಲಿರುವ ಬಿಜೆಪಿ ಬಗ್ಗೆ ತಮ್ಮ ಶಾಸಕರ ಮನಸ್ಸಿನಲ್ಲಿ ಎಂಥ ಮಂಥನ ನಡೆಯುತ್ತಿದೆ ಎಂಬುದರ ಬಗ್ಗೆ ಸ್ಪಷ್ಟ ಅರಿವಿರುವ ದೇವೇಗೌಡರು ಮೈತ್ರಿ ಸರಕಾರ ಪತನದ ಮರುದಿನದಿಂದಲೇ ಪ್ರತ್ಯಸ್ತ್ರ ಪ್ರಯೋಗ ನಿರತರಾಗಿದ್ದಾರೆ. ಜೆಡಿಎಸ್ ಒಡ್ಡೋಲಗ ಜೆಪಿ ಭವನದಲ್ಲಿ ಠಿಕಾಣಿ ಹೂಡಿರುವ ಅವರು ಪ್ರತಿಯೊಬ್ಬ ಶಾಸಕರನ್ನು ಕರೆದು, ಬೇಕು-ಬೇಡಗಳನ್ನು ವಿಚಾರಿಸುತ್ತಿದ್ದಾರೆ. ಮಾಜಿ ಪ್ರಧಾನಿ ಸ್ಥಾನಮಾನ ಲೆಕ್ಕಿಸದೆ ಪಕ್ಷ ಸಂಘಟನೆ ಹಾಗೂ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನಕ್ಕೆ ಈ ಇಳಿವಯಸ್ಸಿನಲ್ಲೂ ಇಳಿದಿರುವ ಗೌಡರು, ಮರುಚುನಾವಣೆಯಲ್ಲಿ ಪಕ್ಷ ಆರೇಳು ಸ್ಥಾನ ಗೆದ್ದರೆ ಕರ್ನಾಟಕದಲ್ಲಿ ಮತ್ತೆ ಮೈತ್ರಿ ಸರಕಾರ ಪ್ರತಿಷ್ಠಾಪನೆಯ ದೂರದ ಆಸೆ ಹೊತ್ತಿದ್ದಾರೆ. ಆದರೆ ಅಡ್ಡಗೋಡೆ ಮೇಲೆ ಕೂತು ಕಮಲದ ಹೂ ಅರಳುತ್ತಿರುವ ಸೊಬಗು ನೋಡುತ್ತಿರುವ ಜೆಡಿಎಸ್ ಶಾಸಕರು ‘ರಿಂಗ್ ಮಾಸ್ಟರ್’ ಗಾಗಿ ಕಾಯುತ್ತಿದ್ದಾರೆ!

ನಿಜ, ಪಿಡುಗಾಗಬೇಕಿದ್ದ ಪಕ್ಷಾಂತರ ರಾಜಕೀಯದ ಪರಂಪರೆ ಆಗುತ್ತಿದೆ. ಪಕ್ಷಾಂತರ ನಿಷೇಧ ಕಾಯ್ದೆಗಾಗಲಿ, ತತ್ವ-ಸಿದ್ಧಾಂತಾಧರಿತ ನೈತಿಕ ಹೊಣೆಗಾಗಲಿ ಇದನ್ನು ಕಟ್ಟಿ ಹಾಕುವ ಶಕ್ತಿ ಬಂದಿಲ್ಲ. ಆದರೆ, ಶಾಸಕ ಸ್ಥಾನ ತ್ಯಜಿಸಿ ಸಿಗಬಹುದಾದ ಅಥವಾ ಸಿಗದೇ ಇರಬಹುದಾದ ಅಧಿಕಾರ ಅರಸಿ ಹೋಗುವುದು ಸುಲಭದ ಮಾತಲ್ಲ. ಮೈಮೇಲೆ ತೊಂದರೆ ಎಳೆದುಕೊಳ್ಳಲು ಒಂದಷ್ಟು ಕಾರಣಗಳು ಇದ್ದೇ ಇರುತ್ತವೆ. ಇಲ್ಲದಿದ್ದರೆ ಯಾರು ತಾನೇ ಆಡಳಿತ ಪಕ್ಷ ಬಿಟ್ಟು ಹೋಗುತ್ತಾರೆ? ರಾಜಕೀಯ ಭವಿಷ್ಯವನ್ನೇಕೆ ಪಣಕ್ಕಿಡುತ್ತಾರೆ? ಅಂಥ ಕಾರಣಗಳ ಹುತ್ತ ಬಡಿಯುತ್ತಾ ಹೋದರೆ ತಪ್ಪುಗಳೆಂಬ ಗೆದ್ದಲುಗಳ ಹಿಂಡು ಸಾಲು-ಸಾಲಾಗಿ ಹೊರಬರುತ್ತವೆ. ಭತ್ತದ ತೆನೆ ಹೊತ್ತ ಹಸಿರು ಸೀರೆಯ ನೀರೆಯನ್ನು ದಾಟಿ ಮುಂದೆ ಹೋಗುತ್ತವೆ!

37 ಸದಸ್ಯರಿದ್ದ ಜೆಡಿಎಸ್ ಸಿಎಂ ಹುದ್ದೆಯೊಂದಿಗೆ ಅಧಿಕಾರ ಹಿಡಿದದ್ದು ಕಾಂಗ್ರೆಸ್ ದಯಪಾಲಿಸಿದ ಅದೃಷ್ಟ ಬಲದಿಂದ. ಇದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಆದರೆ, ಅಧಿಕಾರದಿಂದ ಬಿಜೆಪಿ ದೂರವಿಡಲು ಸಿಎಂ ಸ್ಥಾನದಾನದ ಜತೆ ಬೇಷರತ್ ಬೆಂಬಲ ಕೊಟ್ಟ ಕಾಂಗ್ರೆಸ್ಸಲ್ಲಿ ಸಾಕಷ್ಟು‘ಹುರಿಗಣ್ಣು’ಗಳಿವೆ ಎಂಬುದನ್ನು ಕುಮಾರಸ್ವಾಮಿ ಅವರು ಅರ್ಥ ಮಾಡಿಕೊಳ್ಳಬೇಕಿತ್ತು. ಅದನ್ನರಿತೇ ಪ್ರತಿಹೆಜ್ಜೆ ಇಡಬೇಕಿತ್ತು. ಅದರೆ ಆರಂಭದಿಂದಲೇ ಅವರು ಯಾಮಾರಿದರು. ಅಧಿಕಾರ ಕೊಟ್ಟ ಕಾಂಗ್ರೆಸ್ಸಿನದಿರಲಿ, ತಮ್ಮದೇ ಪಕ್ಷದ ಬೆನ್ನಾಳುಗಳ ಬೇಕು-ಬೇಡಗಳನ್ನು ನೋಡುವ ಗೊಡವೆಗೆ ಹೋಗಲಿಲ್ಲ. ಸಹೋದರ ರೇವಣ್ಣ ಹಸ್ತಕ್ಷೇಪದ ಬಗ್ಗೆ ಮೈತ್ರಿ ಮಂತ್ರಿಗಳ ಆಕ್ಷೇಪಕ್ಕೆ ಪರಿಹಾರ ರೂಪಿಸಲಿಲ್ಲ. ಕಾರಣ ಕುಮಾರಸ್ವಾಮಿ ಹೇಳಿದ್ದನ್ನು ರೇವಣ್ಣ ಕೇಳಲಿಲ್ಲ. ಇಲ್ಲೇ ಆರಂಭವಾಗಿದ್ದು ಅಪಶಕುನ!

ಸರಕಾರದ ಚುಕ್ಕಾಣಿ ಹಿಡಿಯುವಂತೆ ಕಾಂಗ್ರೆಸ್ ವರಿಷ್ಠ ಗುಲಾಂ ನಬಿ ಅಜಾದ್ ದೂರವಾಣಿ ಕರೆ ಮಾಡಿದಾಗ ತಾವಿದ್ದ ಐಷಾರಾಮಿ ವೆಸ್ಟೆಂಡ್ ಹೋಟೆಲ್ ಅದೃಷ್ಟದ ಸಂಕೇತವೆಂಬ ಡಂಭನಂಬಿಕೆಯಿಂದ ಅಲ್ಲಿಂದಲೇ ಆಳ್ವಿಕೆ ನಡೆಸಲು ಹೊರಟಿದ್ದು ಅವರು ಮಾಡಿದ ಮತ್ತೊಂದು ತಪ್ಪು. ಆ ಜಾಗ ರೈತಪಕ್ಷದ ನಾಯಕನಿಗೆ ಶೋಭೆಯಲ್ಲ ಎಂಬದನ್ನು ಅರಿಯಬೇಕಿತ್ತು. ಅದು ಅದೃಷ್ಟದ ಕುದುರೆಯೇ ಆಗಿದ್ದರೆ ಸರಕಾರವೇಕೆ ಹದಿನಾಲ್ಕೇ ತಿಂಗಳಲ್ಲಿ ಮುಗ್ಗರಿಸಿ ಬೀಳುತ್ತಿತ್ತು?! ಮಂತ್ರಿಗಳು, ಶಾಸಕರು, ಮುಖಂಡರು ಫೈವ್ ಸ್ಟಾರ್ ಹೋಟೆಲ್ಲಿಗೆ ಬರುವಷ್ಟೇ ಸುಲಭವಾಗಿ ಜನಸಾಮಾನ್ಯರು ಬರಲು ಸಾಧ್ಯವಿತ್ತೇ? ಸಿಎಂ ಆದವರು ಜನರ ಸಮಸ್ಯೆಗಳನ್ನಾಲಿಸಲು ಅನುವಾಗಲಿ ಎಂದಲ್ಲವೇ ಸರಕಾರಿ ಬಂಗಲೆಗಳಿರುವುದು? ಜನಸಾಮಾನ್ಯರ ದುರಾದೃಷ್ಟ ಕುಮಾರಸ್ವಾಮಿ ಅವರ ಅದೃಷ್ಟ ಹೇಗಾದಿತು?!

ಇನ್ನು ಮಂತ್ರಿ ಮಂಡಲದಲ್ಲಿ ತಮ್ಮ ಕುಟುಂಬದ ಮೂವರ ಪ್ರತಿಷ್ಠಾಪನೆ ಮತ್ತೊಂದು ತಪ್ಪು. ಸ್ವತಃ ತಾವೇ ಸಿಎಂ ಆಗಿದ್ದರಿಂದ ರೇವಣ್ಣ, ಡಿ.ಸಿ. ತಮ್ಮಣ್ಣ ಬದಲು ಅನ್ಯರಿಗೆ ಸ್ಥಾನ ಕೊಟ್ಟಿದ್ದರೆ ಅವಕಾಶ ವಂಚಿತ ಆಕಾಂಕ್ಷಿಗಳ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಬಹುದಿತ್ತು. ನಾಲ್ಕೈದು ಬಾರಿ ಗೆದ್ದಿರುವ ಎ.ಟಿ. ರಾಮಸ್ವಾಮಿ, ಶಿವಲಿಂಗೇಗೌಡ, ಮೇಲ್ಮನೆಗೆ ಏಳು ಬಾರಿ ಆಯ್ಕೆಯಾಗಿರುವ ಬಸವರಾಜ ಹೊರಟ್ಟಿ, ರಾಜಕೀಯ ಕಡುವೈರಿ ಸಿದ್ದರಾಮಯ್ಯನವರಿಗೆ ಸೆಡ್ಡು ಹೊಡೆದಿದ್ದ ಎಚ್. ವಿಶ್ವನಾಥ್ ಅವರಂಥ ಹಿರಿಯರನ್ನು ಪರಿಗಣಿಸಬಹುದಿತ್ತು. ವಯೋವೃದ್ಧ ಎಂ.ಸಿ. ಮನಗೋಳಿ, ಮಂತ್ರಿಯೆಂದು ಗೊತ್ತಿಲ್ಲದೇ ಹೋದ ಶ್ರೀನಿವಾಸ್ ಅವರಿಗಿಂಥ ಇವರು ಉತ್ತಮ ಆಯ್ಕೆಯಾಗುತ್ತಿದ್ದರು. ಬರೀ ತಮ್ಮ ಮಾತು ಕೇಳುವವರಿಗಷ್ಟೇ ಮಣೆ ಹಾಕಿದರೆ ಉಳಿದವರೇಕೆ ಇವರ ಮಾತು ಕೇಳುತ್ತಾರೆ? ಮುಸ್ಲಿಂ ಹಾಗೂ ಪರಿಶಿಷ್ಟರಿಗೆ ಅವಕಾಶ ಕೊಡಲಿಲ್ಲ. ಚುನಾವಣೆ ವೆಚ್ಚ ‘ಗುರಿಯಾಳು’ ಫಾರೂಕ್ ಲೆಕ್ಕಕ್ಕಿಲದೇ ಹೋದರು. ಅಡುಗೆಮನೆ ಸೌಭಾಗ್ಯದ ರಮೇಶ್ ಗೌಡ ಅವರಂಥವರು ಮೇಲ್ಮನೆ ಏರಿದರು. ರಾಜ್ಯಾಧ್ಯಕ್ಷ ವಿಶ್ವನಾಥ್ ವಿರುದ್ಧ ಕಿವಿಕಚ್ಚುವ ಕಾಯಕನಿಷ್ಠೆಯ ಸಾ.ರಾ. ಮಹೇಶ್ ಒಳಮನೆ ಸೇರಿದರು. ದೇವೇಗೌಡರ ‘ಚಿಂತಕಪಂಥ’ದ ವೈ.ಎಸ್.ವಿ. ದತ್ತಾ ಅವರನ್ನು ತಾವೇ ಸೋಲಿಸಿದ್ದು ಎಂದು ಬಹಿರಂಗವಾಗಿಯೇ ಸಾರಿಕೊಂಡ ಧರ್ಮೇಗೌಡ, ಭೋಜೇಗೌಡ ಅವರಂಥವರು ಮೇಲ್ಮನೆ ಹೊಕ್ಕರಲ್ಲದೇ ಕುಮಾರಸ್ವಾಮಿ ಸುತ್ತಲಿನ ವಿಷವರ್ತುಲದ ‘ಪ್ರಭಾವ’ಳಿಗಳಾದರು. ಇದೆಲ್ಲದರ ಪರಿಣಾಮ ಅರ್ಹರು ಹತ್ತಿರ ಸುಳಿಯದಾದರು.

ಇನ್ನು ಖಾತೆಗಳ ಕ್ಯಾತೆ. ಎಂಟನೇ ಇಯತ್ತೆ ದಾಟದ ಜಿ.ಟಿ. ದೇವೇಗೌಡರಿಗೆ ಉನ್ನತ ಶಿಕ್ಷಣ ಖಾತೆ. ಆ ಮೂಲಕ ತಮಗೆ ಅಪಮಾನ ಮಾಡಲಾಯ್ತು ಎಂದು ಜಿ.ಡಿ. ದೇವೇಗೌಡರೇ ಹೇಳಿಕೊಂಡಿದ್ದಾರೆ. ಸಹಕಾರ ಖಾತೆಯನ್ನಾದರೂ ಕೊಡಿ ಎಂಬ ಅವರ ಕೂಗಿಗೆ ‘ಸಹಕಾರ’ ದೊರೆಯಲಿಲ್ಲ. ಮೈಸೂರು ವಿವಿ ಮಾಜಿ ಕುಲಪತಿ ರಂಗಪ್ಪನವರ ನಿಯಂತ್ರಣದಲ್ಲಿರಲಿ ಎಂಬ ಕಾರಣಕ್ಕೇ ಜಿಟಿಡಿ ಅವರಿಗೆ ಆ ಖಾತೆ ಒಲಿದು ಬಂದಿತ್ತು. ಹಿರಿಯ ಮುಖಂಡ ಶಿರಾದ ಸತ್ಯನಾರಾಯಣ ಮಂತ್ರಿ ಪದವಿ ಬಯಸಿ, ಬಯಸಿಯೇ ಬಸವಳಿದು ಹೋದರು. ರೇವಣ್ಣ ಪರಮಾಪ್ತ ಪುಟ್ಟರಾಜು ಕಣ್ಣಲ್ಲಿ ಸಣ್ಣ ನೀರಾವರಿ ನೀರುಕ್ಕಿಸಿತು.

ಈ ಎಲ್ಲ ಬೆಳವಣಿಗೆಗಳಿಗೆ ಕಳಸವಿಟ್ಟದ್ದು ಎಚ್.ಡಿ. ರೇವಣ್ಣ ಅವರು ಪಕ್ಷಬೇಧವಿಲ್ಲದೆ ಎಲ್ಲ ಮಂತ್ರಿಗಳ ಖಾತೆಯಲ್ಲೂ ಕೈಯಾಡಿಸಿದ್ದು. ಅದು ಯಾವ ಮಟ್ಟಿಗೆ ಎಂದರೆ ಜೆಡಿಎಸ್ ಮಂತ್ರಿಗಳು ಅಲಂಕಾರಕ್ಕೆ ಮಾತ್ರ ಆ ಹುದ್ದೆಗಳಲ್ಲಿದ್ದರು. ನೇಮಕ, ವರ್ಗಾವಣೆ, ಅನುದಾನ ಹಂಚಿಕೆ – ಎಲ್ಲ ತೀರ್ಮಾನಗಳೂ ರೇವಣ್ಣ ಅವರದ್ದೇ. ಕಾಂಗ್ರೆಸ್ಸಿನ ಕೆಲ ಗಟ್ಟಿ ಮಂತ್ರಿಗಳು ಮಾತ್ರ ಅವರನ್ನು ದೂರ ಅಟ್ಟಿದರೆ, ಉಳಿದವರು ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಒಳಗೊಳಗೇ ನರಳಿದರು. ರೇವಣ್ಣ ವಿರುದ್ಧ ನೂರಾರು ದೂರುಗಳು ಬಂದಿದ್ದರೂ, ಮೈತ್ರಿ ಸರಕಾರದ ಪತನಕ್ಕೆ ಅವರೇ ಕಿಡಿಗುಂಡಾಗಿದ್ದರೂ ಕುಮಾರಸ್ವಾಮಿ ಮಾತ್ರ ವಿಧಾನಸಭೆಯ ವಿದಾಯ ಭಾಷಣದಲ್ಲಿ ರೇವಣ್ಣ ಅವರನ್ನು ‘ಅಮಾಯಕ’ ಎಂದು ಸಮರ್ಥಿಸಿಕೊಂಡರು!

ಇನ್ನು ಕುಮಾರಸ್ವಾಮಿ ಅವರು ಮಾಡಿದ ಅಕ್ಷಮ್ಯ ಪ್ರಮಾದ ಪುತ್ರ ನಿಖಿಲ್ ಅವರನ್ನು ಮಂಡ್ಯ ಲೋಕಸಭೆ ಕ್ಷೇತ್ರದಿಂದ ಕಣಕ್ಕೆ ಇಳಿಸಿದ್ದು. ಒಕ್ಕಲಿಗ ಸಮುದಾಯ ಗೌಡರ ಕುಟುಂಬದ ಪಾರುಪಥ್ಯೆಗೆ ನಿಂತಿಲ್ಲ ಎಂಬ ಸಂದೇಶ ನಿಖಿಲ್ ಸೋಲಿಸಿದ ಮಂಡ್ಯದಿಂದ ರವಾನೆಯಾಯಿತಲ್ಲದೆ, ಇದೊಂದೇ ಕ್ಷೇತ್ರದ ಪ್ರತಿಷ್ಠೆ ಹೋರಾಟದಿಂದ ಮೈತ್ರಿ ಪಕ್ಷಗಳು ಕರ್ನಾಟಕದಲ್ಲಿ ಆರೇಳು ಸ್ಥಾನ ಕಳೆದುಕೊಂಡವು. ಚುನಾವಣೆ ಸಂದರ್ಭ ಹಾಗೂ ನಂತರ ಮಂತ್ರಿ ಪುಟ್ಟರಾಜು, ಮಳವಳ್ಳಿ ಶಾಸಕ ಅಂದಾನಿ ಕಹಿಘಟನೆಗಳಿಗೆ ವಸ್ತುವಾದರು. ಪಕ್ಷ ತೊರೆದು ಹೋದ ಕೆ.ಆರ್. ಪೇಟೆ ಶಾಸಕ ನಾರಾಯಣಗೌಡ ಹಾಗೂ ವಿಶ್ವನಾಥ್ ಗೌಡರ ಕುಟುಂಬ ಸದಸ್ಯರಿಂದ ತಮಗಾದ ಅಪಮಾನಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ.

ಸರಕಾರ ಉರುಳಿಸಿದ ಕಾಂಗ್ರೆಸ್ ಶಾಸಕರ ಕಾರಣ, ಆ ಕಾರಣದ ಹಿಂದಿನ ಶಕ್ತಿ ಬೇರೆ ಇರಬಹುದು. ಆದರೆ ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡುವ ಅವಕಾಶ ಕುಮಾರಸ್ವಾಮಿ ಅವರಿಗೆ ಇದ್ದೇ ಇತ್ತು. ಹಿಂದೆ 2006 ರಲ್ಲಿ 20:20 ಸರಕಾರದಲ್ಲಿ ಅವರು ಸಿಎಂ ಆಗಿದ್ದಾಗ ಬಿಜೆಪಿ ಶಾಸಕರು ತಮ್ಮೆಲ್ಲ ಕೆಲಸಗಳಿಗೆ ಕುಮಾರಸ್ವಾಮಿ ಅವರನ್ನೇ ನೆಚ್ಚಿಕೊಂಡಿದ್ದರು. ಡಿಸಿಎಂ ಯಡಿಯೂರಪ್ಪನವರಿಗಿಂಥ ಹೆಚ್ಚಾಗಿ ಕುಮಾರಸ್ವಾಮಿ ಬಳಿಯೇ ಹೋಗುತ್ತಿದ್ದರು. ಅದಕ್ಕೆ ಕಾರಣ ಅವರು ಮೂಡಿಸಿದ್ದ ವಿಶ್ವಾಸ. ಆದರೆ ಈಗ ಕಾಂಗ್ರೆಸ್ ಶಾಸಕರ ವಿಚಾರದಲ್ಲಿ ಆ ವಿಶ್ವಾಸ ಕಾಣಲಿಲ್ಲ.  ತತ್ಪರಿಣಾಮ ಆ ಪಕ್ಷದ‘ಹುರಿಗಣ್ಣು’ಗಳು ಮತ್ತಷ್ಟು ಹಿರಿದಾದವು. ಸಿಎಂ ಬುಡದಲ್ಲೇ ಕತ್ತಿ ಮಸೆದವು!

ಇಲ್ಲಿ ಇನ್ನೊಂದು ವಿಚಾರ. ಸಿಎಂ ಆದ ಕ್ಷಣದಿಂದಲೂ ಕುಮಾರಸ್ವಾಮಿ ಅವರು ಮಾಧ್ಯಮಗಳನ್ನು ದೂರ ಇಟ್ಟದ್ದು. 2018 ರ ವಿಧಾನಸಭೆ ಚುನಾವಣೆ ಸಂದರ್ಭ ಮಾಧ್ಯಮಗಳು ತಮಗೆ ನಿರೀಕ್ಷಿತ ಪ್ರಚಾರ ನೀಡಲಿಲ್ಲ, ಚುನಾವಣೋತ್ತರ ಸಮೀಕ್ಷೆಯಲ್ಲಿ ಜೆಡಿಎಸ್ ಉಪೇಕ್ಷೆ ಮಾಡಿದವು ಎಂಬುದು ಅವರ ಈ ನಿಲುವಿಗೆ ಕಾರಣ. ಆದರೆ ಫಲಿತಾಂಶ ಬಂದಾಗ ಜೆಡಿಎಸ್ ಮೂರನೇ ಸ್ಥಾನಕ್ಕಿಳಿದಿತ್ತು. ರಾಜಕೀಯ ಪರಿಸ್ಥಿತಿ ಅವರನ್ನು ಸಿಎಂ ಗಾದಿಗೆ ಏರಿಸಿತ್ತು. ಇನ್ನು ತಮಗೆ ಮಾಧ್ಯಮಗಳ ಒಡನಾಟ ಅನಗತ್ಯ ಎಂಬ ಭಾವನೆ ಮೂಡಿಸಿತ್ತು. ಅಷ್ಟೇ ಆಗಿದ್ದಿದ್ದರೆ ಪರವಾಗಿರಲಿಲ್ಲ. ಮಾಧ್ಯಮದವರನ್ನು ವಿಧಾನಸೌಧದ ಮೂರನೇ ಮಹಡಿಯಿಂದ ತಳಮಹಡಿಗೆ ತಳ್ಳುವ ಪ್ರಯತ್ನದ ಮೂಲಕ ಅವರ ಸ್ವಾಭಿಮಾನವನ್ನೂ ಕೆಣಕಿತ್ತು.

ಇಷ್ಟೆಲ್ಲ ಆದರೂ ಸಿಎಂ ಸುತ್ತ ಇದ್ದವರು, ಅದರಲ್ಲೂ ವಿಶೇಷವಾಗಿ ‘ಮಾಧ್ಯಮ ಕೊಂಡಿ’ಗಳು ಇಬ್ಬರ ನಡುವಣ ಅಂತರ ಕುಗ್ಗಿಸುವ, ಸಮನ್ವಯ-ಸಂಧಾನ ಏರ್ಪಡಿಸುವ ಗೋಜಿಗೇ ಹೋಗಲಿಲ್ಲ. ಬದಲಿಗೆ ‘ಚೇಳಿನ ಕುಟುಕು ಕೊಂಡಿ’ಗಳಾದರು. ಅವರ ಉಡಾಫೆ ಸಿಎಂ ಮತ್ತು ಮಾಧ್ಯಮದವರ ನಡುವಿನ ಅಂತರವನ್ನು ಹಿಗ್ಗಿಸಿತಲ್ಲದೇ, ಸಂಬಂಧ ಮತ್ತಷ್ಟು ಹಳಸುವಂತೆ ಮಾಡಿತು. ಇದರಿಂದ ಮಾಧ್ಯಮದವರಿಗಾಗಲಿ, ಆ ಕುಟುಕು ಕೊಂಡಿಗಳಿಗಾಗಲಿ ಯಾವ ನಷ್ಟವೂ ಆಗಲಿಲ್ಲ. ಅದದ್ದೂ ಮಾತ್ರ ಕುಮಾರಸ್ವಾಮಿ ಅವರಿಗೇ.

ಇಷ್ಟೆಲ್ಲ ಬೆಳವಣಿಗೆಗಳ ಒಟ್ಟು ಹೂರಣವೇ ಜೆಡಿಎಸ್ ಶಾಸಕರು ಇವತ್ತು ನೆಗೆಹಲಗೆ ಮೇಲೆ ನಿಂತು, ಕೈ ಬೀಸಿ ಕರೆಯುತ್ತಿರುವ ಬಿಜೆಪಿ ಕಡೆ ನೋಡುತ್ತಿರುವುದು. ಇಳಿಗಾಲದ ದೇವೇಗೌಡರ ಬದ್ಧತೆ ಉಳಿದವರಿಗೆ ಈಗಲೂ ಬಾರದಿದ್ದರೆ ಜೆಡಿಎಸ್ಸಿಗೆ ಉಳಿಗಾಲವಿಲ್ಲ ಎಂಬುದು ಅಕ್ಷರಶಃ ಸತ್ಯ!

ಲಗೋರಿ : ಇತಿಹಾಸದಿಂದ ಪಾಠ ಕಲಿಯದಿದ್ದರೆ ಭವಿಷ್ಯವನ್ನು ಮತ್ತದೇ ಇತಿಹಾಸ ನುಂಗುತ್ತದೆ!

Leave a Reply