ಸಂಪುಟ ಇಲ್ಲ.. ವಿಪಕ್ಷಗಳ ಸದ್ದಿಲ್ಲ.. ಅನರ್ಹರ ಸುಳಿವಿಲ್ಲ.. ಪ್ರವಾಹ ಪೀಡಿತರ ಕಷ್ಟ ತಪ್ಪಿಲ್ಲ!?

ಡಿಜಿಟಲ್ ಕನ್ನಡ ಟೀಮ್:

ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಪರಿಸ್ಥಿತಿಯಲ್ಲಿ ಸಿಲುಕಿ ಜನ ನಲುಗುತ್ತಿದ್ದಾರೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ಜನರಿಗೆ ಆಸರೆಯಾಗಿ ರಕ್ಷಣೆ ನೀಡಬೆಕಿದ್ದ ಜನಪ್ರತಿನಿಧಿಗಳು ಎಲ್ಲಿದ್ದಾರೆ ಎಂದು ರಾಜ್ಯದ ಜನ ಯೋಚಿಸುವಂತಹ ಪರಿಸ್ಥಿತಿಗೆ ಸಿಲುಕಿದ್ದಾರೆ.

ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ವಿಶ್ವಾಸ ಮತ ಸೋತು 15 ದಿನ ಆಯ್ತು. ಬಿಎಸ್ ಯಡಿಯೂರಪ್ಪ ಸಿಎಂ ಆಗಿ 10 ಆಗಿದೆ. ಆದರೆ ರಾಜ್ಯದಲ್ಲಿ ಪೂರ್ಣ ಪ್ರಮಾಣದ ಸರ್ಕಾರ ಇಲ್ಲದಂತಾಗಿದೆ. ಬಿಜೆಪಿ ಸರ್ಕಾರದಲ್ಲಿ ಸಿಎಂ ಇದ್ದಾರೆ ಆದರೆ ಸಂಪುಟವೇ ಇಲ್ಲಾ. ಅದರೊಂದಿಗೆ ರಾಜ್ಯದಲ್ಲಿ ಏಕವ್ಯಕ್ತಿ ಸರ್ಕಾರ ಇದೆ.

ಈ ಮಧ್ಯೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಎಂ ವೈಮಾನಿಕ ಸಮೀಕ್ಷೆ ನಡೆಸಿ ಆದರ ಬೆನ್ನಲ್ಲೇ ಸಂಭಾವ್ಯ ಸಚಿವರ ಪಟ್ಟಿ ಹಿಡಿದು ಹೈಕಮಾಂಡ್ ಅನುಮತಿ ಪಡೆಯಲು ದೆಹಲಿಗೆ ಹಾರಿದ್ದಾರೆ. ಅಲ್ಲಿ ಅನುಮತಿ ಸಿಗೋವರೆಗೂ ಇಲ್ಲಿ ಸಂಪುಟ ರಚನೆ ಆಗಲ್ಲ. ಶೀಘ್ರದಲ್ಲೇ ಅನುಮತಿ ಸಿಗುತ್ತಾ ಅಂತಾ ಬಿಜೆಪಿ ನಾಯಕರನ್ನು ಪ್ರಶ್ನಿಸಿದರೆ ಅವರಿಂದ ಖಚಿತ ಉತ್ತರ ಸಿಗುತ್ತಿಲ್ಲ. ಕಾರಣ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ತೆರವು ಸೇರಿದಂತೆ ಇತರೆ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಫುಲ್ ಬ್ಯುಸಿ.

ರಾಜ್ಯದ ಹಲವು ಜಿಲ್ಲೆಗಳಲ್ಲಿ‌ ಭಾರೀ ಮಳೆಯಾಗ್ತಿದ್ದು, ನದಿಗಳಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಅಪಾಯದ ಮಟ್ಟ ಮೀರಿ ನದಿಗಳಲ್ಲಿ ನೀರು ಹರಿಯುತ್ತಿದೆ. ಅದೆಷ್ಟೋ ಗ್ರಾಮಗಳು ಜಲಾವೃತವಾಗಿವೆ. ಸಂಪರ್ಕ‌ ಕಳೆದುಕೊಂಡಿರುವ ಸೇತುವೆಗಳು ಲೆಕ್ಕಕ್ಕಿಲ್ಲ. ಬಾಗಲಕೋಟೆ, ಬೆಳಗಾವಿ, ಚಿಕ್ಕೋಡಿ ಭಾಗದಲ್ಲಿ ಊರುಗಳೇ ಸಂಪರ್ಕ ಕಳೆದುಕೊಂಡು ನಡುಗಡ್ಡೆಗಳಾಗಿವೆ. ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ‌ ಸೇರಿದಂತೆ ಕರಾವಳಿ ಭಾಗದಲ್ಲೂ ಭಾರೀ ಮಳೆಯಾಗ್ತಿದ್ದು, ಅಲ್ಲಿಲ್ಲಿ‌ ಭೂಕುಸಿತ ಜನರಲ್ಲಿ ಆತಂಕ ಮೂಡಿಸಿದೆ. ಅಧಿಕಾರಿಗಳು ಆಡಳಿತಾತ್ಮಕ ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ ಜನಪ್ರತಿನಿಗಳು‌ ಎನಿಸಿಕೊಂಡವರು, ಸರ್ಕಾರದ ಭಾಗವಾದ ಮಂತ್ರಿ ಮಹೋದಯರು ಭೇಟಿ‌ ನೀಡಿ ಜನರ ಕಷ್ಟ ಕೇಳುತ್ತಾರೆ‌ ಎಂದರೆ ಅವರ‌್ಯಾರು ಇಲ್ಲವೇ ಇಲ್ಲ.

ಸರ್ಕಾರ ಮಂದಗತಿಯಲ್ಲಿದ್ದಾಗ ಫುಲ್ ಜೋಶ್ ನಲ್ಲಿ ಟೀಕಾಪ್ರಹಾರ ನಡೆಸಿ ಛಾಟಿ ಬೀಸಬೇಕಿದ್ದ ವಿರೋಧ ಪಕ್ಷಗಳು ಎಲ್ಲಿ ಅವಿತು ಕುಳಿತಿವೆ ಎಂಬಷ್ಟರ ಮಟ್ಟಿಗೆ ಮೌನ ವಹಿಸಿದ್ದಾರೆ. ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಗಢದ್ ನಿದ್ರೆಯಲ್ಲಿ ಮುಳುಗಿವೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಆಡಿದ್ದೇ ಆಟ ಎನ್ನುವಂತಾಗಿದೆ.

ಇನ್ನು ಪ್ರವಾಹಕ್ಕೆ ಸಿಲುಕಿರುವ ಬೆಳಗಾವಿಯ 3 ವಿಧಾನಸಭಾ ಕ್ಷೇತ್ರದ ಶಾಸಕರು ರಾಜೀನಾಮೆ ನೀಡಿ ಅನರ್ಹರಾಗಿದ್ದಾರೆ. ಅಲ್ಲಿಗೆ ಪ್ರವಾಹ ಪೀಡಿತರಿಗೆ ನಾಯಕರೂ ಇಲ್ಲ, ಸಚಿವರೂ ಇಲ್ಲ, ಶಾಸಕರೂ ಇಲ್ಲದಂತಾಗಿದೆ. ಸ್ವಹಿತಾಸಕ್ತಿಗಾಗಿ ಪಕ್ಷದ್ರೋಹ ಮಾಡಿರುವ ನಾಯಕರು ತಮ್ಮನ್ನು ಗೆಲ್ಲಿಸಿದ್ದ ಜನರ ಜೀವನ ಹಾಳಾದರೂ ಪರವಾಗಿಲ್ಲ ನಮ್ಮ ರಾಜಕೀಯ ಭವಿಷ್ಯ ಗಟ್ಟಿ ಮಾಡಿಕೊಳ್ಳುವತ್ತ ಮಗ್ನರಾಗಿದ್ದಾರೆ. ಇಂತಹ ವ್ಯವಸ್ಥೆಯಲ್ಲಿ ನಮ್ಮ ಸಮಸ್ಯೆಯನ್ನು ಯಾರಿಗೇಳೋಣ ಎಂದು ಜನರು ಆಕ್ರೋಶ ಹೊರ ಹಾಕ್ತಿದ್ದಾರೆ.

ರಾಜ್ಯ ಸರ್ಕಾರದಿಂದ ನಮ್ಮ ಕ್ಷೇತ್ರಗಳ ಅಭಿವೃದ್ಧಿ ಆಗ್ತಿಲ್ಲ. ಕ್ಷೇತ್ರದ ಜನರಿಗಾಗಿ ನಾವು ರಾಜೀನಾಮೆ ಕೊಡ್ತಿದ್ದೇವೆ. ಅಭಿವೃದ್ಧಿ ಮಾಡಲು ಸಾಧ್ಯವಾಗದೇ ಇದ್ದರೆ ನಾವು ಶಾಸಕರಾಗಿ ಇದ್ದೂ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದ ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದರು. ಇದೀಗ ಗೋಕಾಕ್ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಸೇರಿ ಇನ್ನೂ ಸಾಕಷ್ಟು ಕ್ಷೇತ್ರದಲ್ಲಿ ಪ್ರವಾಹ ಪರಿಸ್ಥಿತಿಯಲ್ಲಿ ಜನರು ಸಿಲುಕಿ ಪರದಾಡುತ್ತಿದ್ರೂ ಅನರ್ಹ ಶಾಸಕರು ಮಾತ್ರ ನಾವು ಈಗ ಜನಪ್ರತಿನಿಧಿಗಳು ಅಲ್ಲ ಅನ್ನೋ ಕಾರಣಕ್ಕೆ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡ್ತಿಲ್ಲ. ಜನರಿಗಾಗಿ ರಾಜೀನಾಮೆ ನೀಡಿದ ಮೇಲೆ ಜನರ ಕಷ್ಟಗಳಿಗೆ ಯಾವಾಗಲೂ ನಿಲ್ಲಬೇಕಾದ ಕರ್ತವ್ಯ ಇರುತ್ತದೆ. ಆದರೆ ಜನರ ನೆಪ ಹೇಳಿ ಸೇಲಾದ ಆರೋಪ ಹೊತ್ತಿರುವ ಅಷ್ಟೂ ಮಂದಿ ಜನರ ಕಡೆ ತಿರುಗಿ ನೋಡ್ತಿಲ್ಲ.

Leave a Reply