ತ್ರಿವಳಿ ತಲಾಕ್, 370ನೇ ವಿಧಿ ಆಯ್ತು… ಮೋದಿ ಮುಂದಿನ ಹೆಜ್ಜೆ ಯಾವುದು?

ಡಿಜಿಟಲ್ ಕನ್ನಡ ಟೀಮ್:

ಪ್ರಸ್ತುತ ಮುಂಗಾರು ಸಂಸತ್ ಅಧಿವೇಶನದಲ್ಲಿ ಹಲವು ಮಸೂದೆಗಳನ್ನು ಮಂಡಿಸಲಾಗಿದ್ದು, ಅವುಗಳಲ್ಲಿ ತ್ರಿವಳಿ ತಲಾಕ್ ನಿಷೇಧ ಕಾಯ್ದೆ ಹಾಗೂ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಮೋಟಕುಗೊಳಿಸುವ ನಿರ್ಧಾರಗಳು ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಮಾಸ್ಟರ್ ಸ್ಟ್ರೋಕ್ ಗಳಾಗಿವೆ. ಈ ಎರಡು ಮಹತ್ವದ ನಿರ್ಧಾರದ ಬಳಿಕ ಮೋದಿ ಹಾಗೂ ಅಮಿತ್ ಶಾ ಅವರ ಮುಂದಿನ ಹೆಜ್ಜೆ ಏನು ಎಂಬ ಕುತೂಹಲ ಮೂಡಿದ್ದು, ಅದಕ್ಕೆ ಉತ್ತರ ಏಕರೂಪ ನಾಗರೀಕ ಕಾಯ್ದೆ, ಅಯೋಧ್ಯೆ ರಾಮ ಮಂದಿರ.

ತ್ರಿವಳಿ ತಲಾಕ್ ನಿಷೇಧ ಕಾಯಿದೆಯನ್ನು ರಾಜ್ಯಸಭೆಯಲ್ಲಿ ಯಶಸ್ವಿಯಾಗಿ ಅನುಮೋದನೆ ಪಡೆದ ಒಂದೇ ವಾರದ ಅಂತರದಲ್ಲಿ ಸೋಮವಾರ ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ತೆರವುಗೊಳಿಸುವ ನಿರ್ಧಾರವನ್ನು ಯಶಸ್ವಿಯಾಗಿ ಜಾರಿಗೊಳಿಸಿತು. ಈ ಎಲ್ಲ ಅಂಶಗಳು ಮೋದಿ ಸರ್ಕಾರ ತನ್ನ ಎರಡನೇ ಅವಧಿಯಲ್ಲಿ ತನ್ನ ವೇಗ ಹೆಚ್ಚಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ. ಎರಡು ಭರ್ಜರಿ ಯಶಸ್ಸು ಸಾಧಿಸಿದ ಬಳಿಕ ಮೋದಿ ಸರ್ಕಾರ ಈಗ ಕಣ್ಣಿಟ್ಟಿರುವುದು ಏಕರೂಪ ನಾಗರೀಕ ಕಾಯಿದೆ ಮೇಲೆ.

ಈ ಕಾಯಿದೆಗೆ ಅಂಗೀಕಾರ ಪಡೆಯುವುದು ಸುಲಭವಲ್ಲವಾದರೂ ಸದ್ಯ ಮೋದಿ ಹಾಗೂ ಅಮಿತ್ ಶಾ ಅವರು ಇಡುತ್ತಿರುವ ಹೆಜ್ಜೆಗಳನ್ನು ನೋಡಿದರೆ ಅಸಾಧ್ಯದ ಕೆಲಸವಲ್ಲ ಎಂಬುದು ಸ್ಪಷ್ಟವಾಗಿದೆ. ಇನ್ನು ಅಯೋಧ್ಯೆ ರಾಮಮಮಂದಿರ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಇಂದಿನಿಂದ ನಿರಂತರ ವಿಚಾರಣೆ ನಡೆಯಲಿದ್ದು, ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಈ ವಿಚಾರ ಧಾರ್ಮಿಕ, ರಾಜಕೀಯವಾಗಿ ಸೂಕ್ಷ್ಮ ಪ್ರಕರಣವಾಗಿದ್ದು ಅಂತಿಮ ಘಟ್ಟಕ್ಕೆ ತಲುಪಿರುವುದು ಕೇಂದ್ರ ಸರ್ಕಾರ ಮತ್ತೊಮ್ಮೆ ತಮ್ಮ ಪಕ್ಷದ ಅಜೆಂಡಾವನ್ನು ಪೂರ್ಣ ಪ್ರಮಾಣದಲ್ಲಿ ಸಾಕಾರಗೊಳಿಸುವಲ್ಲಿ ಯಶಸ್ವಿಯಾಗುವ ನಿರೀಕ್ಷೆ ಇದೆ.

370ನೇ ವಿಧಿಯನ್ನು ತೆರವುಗೊಳಿಸುವ ಮೂಲಕ ಮೋದಿ ಸರ್ಕಾರ ತನ್ನ ರಾಷ್ಟ್ರೀಯತೆ ಹಾಗೂ ಹಿಂದುತ್ವ ಅಜೆಂಡಾವನ್ನು ಪೂರ್ಣಗೊಳಿಸಿದೆ. ಅಲ್ಲದೆ ಈ ಕ್ರಮವನ್ನು ನೆಹರೂವಿನ ಜಾತ್ಯಾತೀತ ತತ್ವಕ್ಕೆ ಪರ್ಯಾಯ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಅದೇ ರೀತಿ ಏಕರೂಪ ನಾಗರೀಕ ಕಾಯಿದೆ ಹಾಗೂ ಅಯೋಧ್ಯೆ ವಿಚಾರದಲ್ಲೂ ಗುರಿ ಸಾಧಿಸಿದರೆ ಮೋದಿ ಸರ್ಕಾರದ ಯಶಸ್ಸಿನ ಹಾದಿ ಮುಂದುವರಿಯಲಿದೆ.

Leave a Reply