‘ಸರ್ಕಾರ ಬೀಳಿಸೋಕೆ ಸಹಾಯ ಮಾಡ್ಬಿಟ್ರೆ ನಿಮ್ಮ ಮಾತು ಕೇಳ್ಬೇಕಾ..?’ ಬೇಗ್ ಗೆ ಬಿಜೆಪಿ ಪರೋಕ್ಷ ಟಾಂಗ್..!

ಡಿಜಿಟಲ್ ಕನ್ನಡ ಟೀಮ್:

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ಸಹಾಯ ಮಾಡಿದ್ರಿ ಎಂಬ ಕಾರಣಕ್ಕೆ ನೀವು ಹೇಳಿದ್ದನೆಲ್ಲಾ ಕೇಳೋಕೆ ಆಗಲ್ಲ ಅಂತಾ ಬಿಜೆಪಿ ಪರೋಕ್ಷವಾಗಿ ಕಾಂಗ್ರೆಸ್ ಅನರ್ಹ ಶಾಸಕ ರೋಷನ್ ಬೇಗ್ ಗೆ ಟಾಂಗ್ ನೀಡಿದೆ.

ಬಕ್ರೀದ್ ಹಬ್ಬಕ್ಕೆ ಜಾನುವಾರುಗಳ ಬಲಿ ಕೊಡಲು ಅವಕಾಶ ಕೊಡಬೇಕು. ಅಧಿಕೃತವಾಗಿ ಜಾನುವಾರುಗಳ ಸಾಗಣೆ ಮತ್ತು ಖುರ್ಬಾನಿಗೆ ಅವಕಾಶ ಕೊಡಬೇಕು. ಅಧಿಕೃತವಾಗಿ ಜಾನುವಾರುಗಳ ಸಾಗಣೆ ಮಾಡುವ ವೇಳೆ ಅನಗತ್ಯ ಕಿರುಕುಳ ತಪ್ಪಿಸಬೇಕು. ಈ ಬಗ್ಗೆ ಜಿಲ್ಲಾಡಳಿತಕ್ಕೆ ಸೂಕ್ತ ನಿರ್ದೇಶನ ಕೊಡಿ ಎಂದು ಅನರ್ಹ ಶಾಸಕ ರೋಷನ್ ಬೇಗ್ ಅವರು ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದ್ರು. ರೋಷನ್ ಬೇಗ್ ಪತ್ರಕ್ಕೆ ಸಿಎಂ ಬಿಎಸ್‌ವೈ ಯಾವುದೇ ಉತ್ತರ ಕೊಟ್ಟಿರಲಿಲ್ಲ.

ಈ ಮಧ್ಯೆ ಮುಸ್ಲಿಮರು ಬಕ್ರೀದ್ ಹಬ್ಬ ಆಚರಣೆ ಮಾಡಲಿದ್ದು, ಯಾವುದೇ ಕಾರಣಕ್ಕೂ ಗೋಹತ್ಯೆ ಮಾಡಲು ಅವಕಾಶ ಕೊಡಬಾರದು. ಗೋವುಗಳ ಬಲಿ ನಿಷೇಧ ಕಾಯ್ದೆಯನ್ನ ಅನುಷ್ಠಾನಗೊಳಿಸುವ ಮೂಲಕ ಗೋರಕ್ಷಣೆ ಮಾಡುವಂತೆ ಪೊಲೀಸ್ ಮಹಾ ನಿರ್ದೇಶಕರಿಗೆ ಬಿಜೆಪಿ ಪತ್ರ ಬರೆದಿದೆ. ವಿಧಾನ‌ ಪರಿಷತ್ ಸದಸ್ಯ ರವಿಕುಮಾರ್ ನೇತೃತ್ವದಲ್ಲಿ ಪತ್ರ ಸಲ್ಲಿಕೆ ಮಾಡಿದ್ದು, 1959 ರಿಂದಲೂ ಕರ್ನಾಟಕ ಬಲಿ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಆದ್ರೆ ಹಿಂದೂಗಳಿಗೆ ಮಾತ್ರ ಅನ್ವಯಿಸುವಂತೆ ಕಾನೂನು ಜಾರಿ ಮಾಡಲಾಗಿತ್ತು. ಆ ಬಳಿಕ 1975 ರಲ್ಲಿ ಎಲ್ಲಾ ಧರ್ಮದವರಿಗೆ ಅನ್ವಯಿಸುವಂತೆ ಕಾನೂನು ತಿದ್ದುಪಡಿ ಮಾಡಲಾಗಿದೆ. ಈ ಕಾನೂನು ಬಕ್ರೀದ್ ವೇಳೆ ಕೂರ್ಬಾನಿ ಮಾಡುವುದಕ್ಕೆ ಅನ್ವಯವಾಗುತ್ತೆ. ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಹೀಗಾಗಿ ಗೋ ಹತ್ಯೆ ಮತ್ತು ಅಕ್ರಮ ಸಾಗಣೆ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದ್ದಾರೆ. ಕರ್ನಾಟಕ ಬಿಜೆಪಿ ಘಟಕದಿಂದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಸಲ್ಲಿಕೆಯಾಗಿದೆ.

ನಿಜ, ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಮೈತ್ರಿ ಸರ್ಕಾರ ಬೀಳಿಸುವಲ್ಲಿ ಅತೃಪ್ತ ಶಾಸಕರ ರಾಜೀನಾಮೆ ಪ್ರಹಸನ ಬಹುಮುಖ್ಯ ಪಾತ್ರ ವಹಿಸಿತ್ತು. ರಾಜೀನಾಮೆ ಕೊಟ್ಟು ಮುಂಬೈಗೆ ಹೋಗದಿದ್ದರೂ ಶಿವಾಜಿನಗರ ಶಾಸಕ ರೋಷನ್ ಬೇಗ್ ರಾಜೀನಾಮೆ ಕೊಟ್ಟಿದ್ದರು. ಅದಕ್ಕೂ ಮೊದಲೇ ಕಾಂಗ್ರೆಸ್ ನಾಯಕತ್ವದ ವಿರುದ್ಧ ಮಾತನಾಡಿ ಪಕ್ಷದಿಂದ ಸಸ್ಪೆಂಡ್ ಆಗಿದ್ದರು. ಆದರೆ ಆ ಬಳಿಕ ರಾಜೀನಾಮೆ ನೀಡುವ ಮೂಲಕ ಬಿಜೆಪಿಯ ಸರ್ಕಾರ ರಚನೆ ಆಶಯಕ್ಕೆ ಸಹಕಾರಿ ಆದರೂ ಅನ್ನೋದು ಅಷ್ಟೇ ಸತ್ಯ. ಆದ್ರೆ ಸಾವಿರಾರು ಕೋಟಿ ಐಎಂಎ ಹಗರಣದಿಂದ ಪಾರಾಗಲು ಬಿಜೆಪಿ ಬೆಂಬಲಿಸಿದ್ದಾರೆ ಅನ್ನೊ ಆರೋಪ ಕೇಳಿಬಂದಿತ್ತು.‌ ಆದರೀಗ ರೋಷನ್ ಬೇಗ್ ಕೇಳಿದ್ದ ಒಂದು ಮನವಿಗೆ ಬಿಜೆಪಿ ಉಲ್ಟಾ ಹೊಡೆದು, ಅವರ ಮನವಿಯನ್ನು ಕಸದ ಬುಟ್ಟಿಗೆ ಎಸೆದಿದೆ.

Leave a Reply