ಯುವ ಸಮುದಾಯಕ್ಕೆ ಸುಷ್ಮಾ ಸ್ವರಾಜ್ ಉತ್ಕೃಷ್ಟ ಮಾದರಿ; ಸಂತಾಪ ನುಡಿಯಲ್ಲಿ ಡಿಕೆಶಿ ಬಣ್ಣನೆ

ಬೆಂಗಳೂರು, ಜು.7: ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್, ತಮ್ಮ ಹೋರಾಟ ಹಾಗೂ ಬದುಕಿನ ಮೂಲಕ ದೇಶದ ಯುವ ಸಮುದಾಯಕ್ಕೆ ಅವರು ಉತ್ಕೃಷ್ಟ ಮಾದರಿಯಾಗಿದ್ದರು ಎಂದು ಬಣ್ಣಿಸಿದ್ದಾರೆ.

ಮಾತೃ ಹೃದಯ, ದಿಟ್ಟತನ ಎರಡೂ ಮೇಳೈಸಿದ್ದ ಸುಷ್ಮಾ ಸ್ವರಾಜ್ ಅವರು ಚುರುಕುಮತಿ ಹಾಗೂ ಧೀರೋದಾತ್ತ ರಾಜಕಾರಣಿ ಆಗಿದ್ದರು. ಹೀಗಾಗಿಯೇ ಸಣ್ಣ ವಯಸ್ಸಿನಲ್ಲೇ ಶಾಸನಸಭೆ ಪ್ರವೇಶಿಸಿದರು. ಪಕ್ಷ, ತತ್ವ-ಸಿದ್ದಾಂತ ಮೀರಿ ಸರ್ವರನ್ನೂ ಒಳಗೊಳ್ಳುವ ಅವರ ಹೃದಯ ವೈಶಾಲ್ಯ, ಸಮನ್ವಯ ಭಾವ ಎಲ್ಲರ ಮನಗೆದ್ದಿತ್ತು. ನೇರ ನಡೆ-ನುಡಿಗೆ ಹೆಸರಾಗಿದ್ದ ಅವರು ಉತ್ತಮ ಸಂಸದೀಯ ಪಟುವಾಗಿದ್ದರು. ಅವರ ವಾಗ್ಝರಿ ದೇಶ-ವಿದೇಶಗಳ ಮನಗೆದ್ದಿತ್ತು. ಕೇಂದ್ರ ಸಚಿವ ಸ್ಥಾನ, ದಿಲ್ಲಿ ಮುಖ್ಯಮಂತ್ರಿ ಪದವಿ ಸೇರಿದಂತೆ ತಾವು ವಹಿಸಿಕೊಂಡ ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು. ಅಂಥ ಸುಷ್ಮಾ ಸ್ವರಾಜ್ ಅವರ ಅಗಲಿಕೆ ಅತೀವ ನೋವು ತಂದಿದೆ ಎಂದು ಶಿವಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸುಷ್ಮಾ ಸ್ವರಾಜ್ ಅವರ ನಿಧನ ಇಡೀ ದೇಶಕ್ಕೆ ಭರಿಸಲಾರದ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ, ಬಂಧುಗಳು, ಅಭಿಮಾನಿಗಳಿಗೆ ಆ ಭಗವಂತ ನೀಡಲಿ ಎಂದು ಅವರು ಶೋಕ ಸಂದೇಶದಲ್ಲಿ ಹೇಳಿದ್ದಾರೆ.

Leave a Reply