ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ವಿಧಿವಶ!

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿ ಪ್ರಮುಖ ನಾಯಕಿ, ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರು ಮಂಗಳವಾರ ಹೃದಯಾಘಾತಕ್ಕೆ ಒಳಗಾಗಿ ರಾತ್ರಿ ಏಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

2016ರಲ್ಲಿ ಮೂತ್ರಪಿಂಡ ಬದಲಾವಣೆ ಮಾಡಿಕೊಂಡಿದ್ದ ಸುಷ್ಮಾ ಸ್ವರಾಜ್ ಅವರು ನಂತರದ ದಿನಗಳಲ್ಲಿ ಆರೋಗ್ಯ ಸಮಸ್ಯೆ ಎದುರಿಸಿದರು. ಇದೇ ಕಾರಣಕ್ಕೆ ಅವರು 2019ರ ಲೋಕಸಭೆ ಚುನಾವಣೆಯಿಂದ ಹಿಂದೆ ಸರಿದಿದ್ದರು.

ಮಂಗಳವಾರ ಸುಷ್ಮಾ ಅವರಿಗೆ ಹೃದಯಾಘಾತವಾದ ಹಿನ್ನೆಲೆಯಲ್ಲಿ ಅವರನ್ನು ರಾತ್ರಿ 10.30ಕ್ಕೆ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದಂತೆ ತುರ್ತುನಿಗಾ ಘಟಕದಲ್ಲಿ ಇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

ಸುಷ್ಮಾ ಸ್ವರಾಜ್ ಆಸ್ಪತ್ರೆಗೆ ದಾಖಲಿಸಲಾಗುತ್ತಿದ್ದಂತೆ ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿದಂತೆ ಬಿಜೆಪಿ ನಾಯಕರು, ಕೇಂದ್ರ ಸಚಿವರ ದಂಡು ಆಸ್ಪತ್ರೆಯತ್ತ ದೌಡಾಯಿಸಿದರು. ಸುಷ್ಮಾ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೋಣೆಯುಸಿರೆಳೆದಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಆಸ್ಪತ್ರೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಭೇಟಿ ನೀಡಿದ್ದಾರೆ.

2014ರಲ್ಲಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೇಂದ್ರ ವಿದೇಶಾಂಗ ಸಚಿವೆ ಸ್ಥಾನ ಅಲಂಕರಿಸಿದ ಸುಷ್ಮಾ ಸ್ವರಾಜ್ ಅವರ ಕಾರ್ಯ ಶ್ಲಾಘನೀಯ. ಪ್ರಪಂಚದ ಯಾವುದೇ ರಾಷ್ಟ್ರದಲ್ಲಿ ಭಾರತೀಯರು ಸಮಸ್ಯೆಗೆ ಸಿಲುಕಿದ್ದಾರೆ ಎಂಬ ವಿಷಯ ತಿಳಿದರೂ ಅವರ ರಕ್ಷಣೆಗೆ ಮುತುವರ್ಜಿ ವಹಿಸಿದ ಉದಾಹರಣೆಗಳು ಸಾಕಷ್ಟಿವೆ. ಭಾರತ ವಿಶ್ವದ ಇತರೆ ದೇಶಗಳೊಡನೆ ಉತ್ತಮ ಸಂಬಂಧ ವೃದ್ಧಿ ಮಾಡಿಕೊಳ್ಳುವುದರಿಂದ ಹಿಡಿದು, ವಿಶ್ವಸಂಸ್ಥೆಯಲ್ಲಿ ಭಾರತ ವಿರುದ್ಧದ ಪಾಕ್ ಕುತಂತ್ರವನ್ನು ಬಟಾಬಯಲು ಮಾಡಿದವರೆಗೂ ಸುಷ್ಮಾ ಅವರ ಕಾರ್ಯ ಇತರರಿಗೆ ಮಾದರಿ.

ಅತೀ ಚಿಕ್ಕ ವಯಸ್ಸಿನಲ್ಲೇ ಹರಿಯಾಣ ರಾಜ್ಯದಲ್ಲಿ ಸಂಪುಟ ದರ್ಜೆ ಸಚಿವೆ ಆಗಿ ಉತ್ತಮ ಕಾರ್ಯ ನಿರ್ವಹಿಸಸಿದ್ದ ಸುಷ್ಮಾ ಸ್ವರಾಜ್, ನಂತರ ದೆಹಲಿಯ ಮುಖ್ಯಮಂತ್ರಿ ಆಗಿ ಕಾರ್ಯ ನಿರ್ವಹಿಸಿದರು. ತಮ್ಮ ರಾಜಕೀಯ ಜೀವನದಲ್ಲಿ ಮೂರು ಬಾರಿ ಶಾಸಕಿ ಹಾಗೂ ಏಳು ಬಾರಿ ಸಂಸದೆಯಾಗಿದ್ದರು.

ಈ ದೇಶದ ಎರಡನೇ ಮಹಿಳಾ ವಿದೇಶಾಂಗ ಸಚಿವೆಯಾಗಿ ಇವರ ಕಾರ್ಯ ನಿರ್ವಹಣೆ ಸಾಮಾನ್ಯ ಜನರ ಪ್ರಶಂಸೆಗೂ ಪಾತ್ರವಾಗಿತ್ತು. ಒಬ್ಬ ಧೈರ್ಯವಂತೆ ಹಾಗೂ ಮಾತೃ ಹೃದಯಿ ಹೆಣ್ಣು ಎಂಬ ಗೌರವ ಸಂಪಾದಿಸಿದರು ಸುಷ್ಮಾ ಸ್ವರಾಜ್.

ಕರ್ನಾಟಕಕ್ಕೂ ಸುಷ್ಮಾ ಸ್ವರಾಜ್ ಗೂ ಅವಿನಾಭಾವ ನಂಟು.‌ ಬಳ್ಳಾರಿ ‌ಲೋಕಸಭಾ ಕ್ಷೇತ್ರದಿಂದ ಸೋನಿಯಾಗಾಂಧಿ ವಿರುದ್ದ ಸ್ಪರ್ಧಿಸಿದ್ದರು. ಕನ್ನಡದಲ್ಲೇ ಭಾಷಣ ಮಾಡುವ ಮೂಲಕ ಜನಮನ ಗೆದ್ದಿದ್ದರು. ಪ್ರತಿ ವರ್ಷ ವರಮಹಾಲಕ್ಷ್ಮೀ‌ಹಬ್ಬದ ಸಂದರ್ಭದಲ್ಲಿ ಬಳ್ಳಾರಿಗೆ ಭೇಟಿ ನೀಡುತ್ತಿದ್ದರು.

ಕೇಂದ್ರ ಸರ್ಕಾರ ೩೭೦ನೇ ವಿಧಿ ರದ್ದುಪಡಿಸಿದ್ದನ್ನು ಸ್ವಾಗತಿಸಿ‌ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರನ್ನು ಅಭಿನಂದಿಸಿ‌‌ ಕೆಲವೇ ಗಂಟೆಗಳ ಹಿಂದೆ ಟ್ವೀಟ್ ಮಾಡಿದ್ದ ಸುಷ್ಮಾ ಸ್ವರಾಜ್, ‘ನಾನು ಬದುಕಿರುವಾಗ ಇಂತಹದೊಂದು ಶುಭದಿನವನ್ನು ನೀಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು’ ಎಂದು ಟ್ವೀಟ್ ಮಾಡಿದ್ದರು.

ಸುಷ್ಮಾ ಅವರ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ‘ಸುಷ್ಮಾ ಅವರ ಅಗಲಿಕೆ ನನಗೆ ವೈಯಕ್ತಿಕವಾಗಿ ದೊಡ್ಡ ನಷ್ಟ. ಭಾರತಕ್ಕೆ ಅವರು ಸಲ್ಲಿಸಿರುವ ಸೇವೆ ಅವರನ್ನು ಸದಾ ನೆನಪಿಸಿಕೊಳ್ಳುವಂತೆ ಮಾಡುತ್ತದೆ. ಈ ಕಹಿ ಗಳಿಗೆಯ ಹೊತ್ತಲ್ಲಿ ಅವರ ಕುಟುಂಬ ಸದಸ್ಯರು, ಬೆಂಬಲಿಗರು, ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಸಿಗಲಿ. ಓಂ ಶಾಂತಿ’ ಎಂದು ತಿಳಿಸಿದ್ದಾರೆ.

Leave a Reply