ಡಿಜಿಟಲ್ ಕನ್ನಡ ಟೀಮ್:
ಸುಷ್ಮಾ ಸ್ವರಾಜ್… ಈ ಹೆಸರು ಕೇಳಿದರೆ ನಮ್ಮ ತಲೆಗೆ ಕೇವಲ ರಾಜಕಾರಣಿ ಎಂಬುದಷ್ಟೇ ಬರುವುದಿಲ್ಲ. ಓರ್ವ ಧೈರ್ಯವಂತೆ, ಮಾತೃ ಸ್ವರೂಪಿ, ಉತ್ತಮ ವಾಗ್ಮಿ, ಅತ್ಯುತ್ತಮ ಸಂಸದೀಯಪಟು ಹೀಗೆ ಅನೇಕ ಅಂಶಗಳು ಬರುತ್ತವೆ. ಇಂದು ನಾವೆಲ್ಲರೂ ಇಂತಹ ಅಪರೂಪದ ನಾಯಕಿಯನ್ನು ನಾವಿಂದು ಕಳೆದುಕೊಂಡಿದ್ದೇವೆ. ಅವರು ದೈಹಿಕವಾಗಿ ನಮ್ಮೆದುರು ಇಲ್ಲದಿರಬಹುದು, ಆದರೆ ಅವರು ತಮ್ಮ ರಾಜಕೀಯ ಜೀವನದ ಹಾದಿಯಲ್ಲಿ ನಡೆದು ಬಂದ ರೀತಿ, ಅವರ ಕಾರ್ಯಗಳು ಅವರು ಸದಾ ನಮ್ಮೆಲ್ಲರ ಮನಸ್ಸಿನಲ್ಲಿ ಉಳಿಯಲಿದ್ದಾರೆ. ದೇಶ ಕಂಡ ಅಪ್ರತಿಮ ಮಹಿಳಾ ರಾಜಕಾರಣಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಸುಷ್ಮಾ ಅವರ ರಾಜಕೀಯ ಹಾದಿಯನ್ನು ಮೊದಲು ನೋಡೋಣ ಬನ್ನಿ…
- 1977-82 ಹರಿಯಾಣ ವಿಧಾನಸಭೆಯಲ್ಲಿ ಶಾಸಕಿಯಾಗಿ ಮೊದಲ ಬಾರಿಗೆ ಆಯ್ಕೆ.
- 1977-79 ಹರಿಯಾಣ ರಾಜ್ಯ ಸರ್ಕಾರದಲ್ಲಿ ಕಾರ್ಮಿಕ ಹಾಗೂ ಉದ್ಯೋಗ ಸಚಿವೆಯಾಗಿ ಕಾರ್ಯ.
- 1987-90 ಹರಿಯಾಣ ವಿಧಾನಸಭೆಯಲ್ಲಿ ಎರಡನೇ ಬಾರಿಗೆ ಶಾಸಕಿಯಾಗಿ ಆಯ್ಕೆ.
- 1987-90 ಹರಿಯಾಣದಲ್ಲಿ ಶಿಕ್ಷಣ, ಆಹಾರ ಮತ್ತು ನಾಗರೀಕ ಸರಬರಾಜು ಸಚಿವಾಲಯದ ಜವಾಬ್ದಾರಿ ನಿರ್ವಹಣೆ.
- 1990-96 ರಾಜ್ಯ ಸಭೆಗೆ ಆಯ್ಕೆ. (ಮೊದಲ ಬಾರಿ)
- 1996-97 (ಮೇ 15 1996- ಡಿ.4 1997) ಲೋಕಸಭೆಗೆ ಆಯ್ಕೆ. (ಎರಡನೇ ಬಾರಿ)
- 1996 (ಮೇ 16- ಜೂನ್ 1) ಕೇಂದ್ರ ಮಾಹಿತಿ ಹಾಗೂ ಪ್ರಸರಣ ಸಚಿವೆಯಾಗಿ ಕಾರ್ಯ.
- 1998-99 (ಮಾ.10 1988- ಏ.26 1999) ಲೋಕಸಭೆಗೆ ಆಯ್ಕೆ. (ಮೂರನೇ ಬಾರಿ)
- 1998 (ಮಾ.19 ರಿಂದ ಅ.12) ಕೇಂದ್ರ ಮಾಹಿತಿ ಹಾಗೂ ಪ್ರಸರಣ, ಹೆಚ್ಚುವರಿಯಾಗಿ ದೂರಸಂಪರ್ಕ ಖಾತೆ ಸಚಿವೆಯಾಗಿ ಕಾರ್ಯ.
- 1998 (ಅ.13ರಿಂದ ಡಿ.3) ದೆಹಲಿಯ ಮುಖ್ಯಮಂತ್ರಿಯಾಗಿ ಆಯ್ಕೆ.
- 1998 (ನವೆಂಬರ್) ದೆಹಲಿ ವಿಧಾನಸಭೆಗೆ ಹೌಜಾ ಖಾಸ್ ಕ್ಷೇತ್ರದಿಂದ ಆಯ್ಕೆ. ನಂತರ ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಲೋಕಸಭಾ ಸದಸ್ಯತ್ವ ಉಳಿಸಿಕೊಂಡರು.
- 2000-06 ರಾಜ್ಯ ಸಭೆ ಸದಸ್ಯೆ. (ನಾಲ್ಕನೇ ಬಾರಿ)
- 2000-03 (ಸೆ.30 2000- ಜ.29 2003) ಕೇಂದ್ರ ಮಾಹಿತಿ ಹಾಗೂ ಪ್ರಸರಣ ಸಚಿವೆಯಾಗಿ ಕಾರ್ಯ.
- 2003-04 (ಜ.29 2003- ಮೇ 22 2004) ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಂಸದೀಯ ವ್ಯವಹಾರಗಳ ಸಚಿವೆಯಾಗಿ ಕಾರ್ಯ.
- 2006-09 ರಾಜ್ಯಸಭೆ ಸದಸ್ಯರಾಗಿ ಆಯ್ಕೆ. (ಐದನೇ ಬಾರಿಗೆ)
- 2009-14 ಲೋಕಸಭೆಗೆ ಸಂಸದೆಯಾಗಿ ಆಯ್ಕೆ. (ಆರನೇ ಬಾರಿಗೆ)
- 2009 (ಜೂ.3 ರಿಂದ ಡಿ.21) ಲೋಕಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕಿ.
- 2009-14 (ಡಿ.21 2009- ಮೇ 18 2014) ಲಾಲ್ ಕೃಷ್ಣ ಆಡ್ವಾಣಿ ಅವರ ಬದಲಿಗೆ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕಿ ಆದರು.
- 2014-19 ಲೋಕಸಭೆಗೆ ಆಯ್ಕೆ. (ಏಳನೇ ಬಾರಿ)
- 2014-19 ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿ ಕಾರ್ಯ.
ಸುಷ್ಮಾ ಸ್ವರಾಜ್ ಅವರು ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ವಿದೇಶಾಂಗ ಸಚಿವರಾಗಿ ನಡೆಸಿದ ಕಾರ್ಯ ಅವಿಸ್ಮರಣೀಯ. ಅವರು ತಮ್ಮ ಕಾರ್ಯ ವ್ಯಾಪ್ತಿಯನ್ನು ಕೇವಲ ಸೌತ್ ಬ್ಲಾಕ್ ನಲ್ಲಿರುವ ತಮ್ಮ ಕಚೇರಿಗೆ ಮಾತ್ರ ಮೀಸಲಾಗಿರಿಸಲಿಲ್ಲ. ಬದಲಾಗಿ ವಿದೇಶಾಂಗ ಸಚಿವರ ಕೆಲಸವನ್ನು ಸಾಮಾನ್ಯ ಭಾರತೀಯನಿಗೂ ವಿಸ್ತರಿಸಿ ಮಾನವೀಯತೆಯ ಮೌಲ್ಯ ಎತ್ತಿ ಹಿಡಿದ ಖ್ಯಾತಿ ಸುಷ್ಮಾ ಅವರದು. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು ಯಾವುದೇ ರಾಷ್ಟ್ರದಲ್ಲಿ ಭಾರತೀಯನಿಗೆ ಅಭದ್ರತೆ ಎದುರಾದಾಗ ಅಭಯವಾಗಿ ನಿಂತ ನಾಯಕಿ ಸುಷ್ಮಾ ಸ್ವರಾಜ್. ಇವರ ಈ ಕಾರ್ಯ ಶೈಲಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತಲ್ಲದೇ ಟ್ವಿಟರ್ ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿದ ರಾಜಕೀರಣಿಗಳ ಪಟ್ಟಿಯಲ್ಲಿ ಇವರದೂ ಮುಂಚೂಣಿ ಸ್ಥಾನ. ಇಂದಿರಾ ಗಾಂಧಿ ನಂತರ ವಿದೇಶಾಂಗ ಸಚಿವಾಲಯವನ್ನು ನಿಭಾಯಿಸಿದ ಖ್ಯಾತಿ ಸುಷ್ಮಾ ಅವರದು. ಇವರ ಕಾರ್ಯವೈಕರಿ ಎಷ್ಟು ಪ್ರಭಾವಶಾಲಿಯಾಗಿತ್ತು ಎಂದರೆ ಬೇರೆ ರಾಷ್ಟ್ರಗಳ ವಿದೇಶಾಂಗ ಸಚಿವರುಗಳು ಕೂಡ ಸುಷ್ಮಾ ಅವರ ಕಾರ್ಯ ವೈಖರಿಗೆ ತಲೆದೂಗುತ್ತಿದ್ದರು. ಇನ್ನು ಭಾರತದ ನೆರೆ ರಾಷ್ಟ್ರಗಳು ಸಮಸ್ಯೆಗೆ ಸಿಲುಕಿದರೆ ತಕ್ಷಣೆವೇ ಸಹಾಯ ಹಸ್ತ ಚಾಚುತ್ತಿದ್ದರು. 2015ರಲ್ಲಿ ನೇಪಾಳದಲ್ಲಿನ ಭೂಕಂಪ ದುರಂತದ ವೇಳೆ ಅಲ್ಲಿನ ನಾಗರೀಕರ ರಕ್ಷಣೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿ 2019ರಲ್ಲಿ ಸ್ಪೇನ್ ಸರ್ಕಾರ ತನ್ನ ಅತ್ಯುನ್ನತ ನಾಗರೀಕ ಪ್ರಶಸ್ತಿ ‘ಗ್ರಾಂಡ್ ಕ್ರಾಸ್ ಆಫ್ ಆರ್ಡರ್ ಆಫ್ ಸಿವಿಲ್ ಮೆರಿಟ್’ ಅನ್ನು ನೀಡಿ ಗೌರವಿಸಿತು.
ಸುಷ್ಮಾ ಸ್ವರಾಜ್ ಅವರು ವಿದೇಶಾಂಗ ಸಚಿವೆಯಾಗಿ ನಿರ್ವಹಿಸಿದ ಕಾರ್ಯವನ್ನು ನೋಡಿ ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ಸುಷ್ಮಾ ಅವರನ್ನು ‘ಸೂಪರ್ ಮಾಮ್ ಆಫ್ ಇಂಡಿಯಾ’ ಎಂದು ಕರೆದಿತ್ತು. ಸುಷ್ಮಾ ಸ್ವರಾಜ್ ಅವರು ವಿದೇಶಾಂಗ ಸಚಿವಾರಾದ ಮೇಲೆ ಯಾವುದೇ ರಾಷ್ಟ್ರಗಳಲ್ಲಿ ಭಾರತೀಯರಿಗೆ ಸಮಸ್ಯೆ ಎದುರಾದಾಗ ಅವರು ಕಂಗೆಡಬೇಕಾಗುವ ಅಗತ್ಯ ಇರಲಿಲ್ಲ. ರಾಯಭಾರಿ ಕಚೇರಿ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಸಮಸ್ಯೆಯನ್ನು ವಿದೇಶಾಂಗ ಸಚಿವಾಲಯಕ್ಕೆ ಮುಟ್ಟಿಸಿದರೆ ಸಾಕು ಆ ಭಾರತೀಯನ ಬೆನ್ನಿಗೆ ರಾಜತಾಂತ್ರಿಕ ಬಲ ಸಿಗುತ್ತಿತ್ತು. ಇದು ಆಕೆಯ ಮಾತೃ ಸ್ವರೂಪವನ್ನು ಅನಾವರಣ ಮಾಡಿದರೆ, ಇನ್ನು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸುತ್ತಿದ್ದ ರೀತಿ ಹಾಗೂ ಅಮೆರಿಕದಂತಹ ರಾಷ್ಟ್ರಗಳು ಭಾರತೀಯರ ಹಿತರಕ್ಷಣೆಗೆ ಧಕ್ಕೆಯಾಗುವಂತಹ ನಿರ್ಣಯಗಳನ್ನು ತೆಗೆದುಕೊಂಡಾಗ ಅದನ್ನು ಮುಲಾಜಿಲ್ಲದೆ ಟೀಕಿಸುತ್ತಿದ್ದ ರೀತಿ ಆಕೆಯ ಧೈರ್ಯಕ್ಕೆ ಸಾಕ್ಷಿಯಾಗಿತ್ತು. ಸುಷ್ಮಾ ಅವರ ಈ ಕಾರ್ಯ ವೈಖರಿಗೆ ನಮ್ಮ ಮುಂದೆ ಅನೇಕ ಉದಾಹರಣೆಗಳು ಸಿಗುತ್ತವೆ. ಇದೇ ಕಾರಮಗಳಿಂದಾಗಿಯೇ ಸುಷ್ಮಾ ಸ್ವರಾಜ್ ‘ಸೂಪರ್ ಮಾಮ್ ಆಫ್ ಇಂಡಿಯಾ’ ಆಗಿ ಬೆಳೆದಿದ್ದು. ಈ ಹಿಂದೆ ಡಿಜಿಟಲ್ ಕನ್ನಡದಲ್ಲಿ ಸುಷ್ಮಾ ಸ್ವರಾಜರ ದಿಟ್ಟ ಕಾರ್ಯಗಳ ಬಗ್ಗೆ ಪ್ರಕಟವಾದ ಲೇಖನಗಳನ್ನು ನೀವು ಮತ್ತೊಮ್ಮೆ ಮೆಲುಕು ಹಾಕಬಹುದು. ಈ ಹಿಂದೆ ಪ್ರಕಟವಾದ ಲೇಖನಗಳು ಹೀಗಿವೆ…
ವಿಶ್ವಸಂಸ್ಥೆ ಮಹಾಸಭೆಯಲ್ಲಿ ಪಾಕಿಸ್ತಾನ ಜನ್ಮ ಜಾಲಾಡಿದ ಸುಷ್ಮಾ ಸ್ವರಾಜ್!
ಪಾಕಿಸ್ತಾನಕ್ಕೆ ಸುಷ್ಮಾರಿಂದ ಮಾತಿನ ಏಟು!
ಮದುವೆಯಾಗಿ 10 ತಿಂಗಳ ನಂತರ ಕನ್ನಡಿಗ ಪತಿಯನ್ನು ಸೇರಿದ ಪಾಕ್ ಪತ್ನಿ! ಇದೂ ಸುಷ್ಮಾಗಿರಿ
ಅಮೆರಿಕದಿಂದ 271 ಭಾರತೀಯರ ಗಡಿಪಾರು? ಸುಷ್ಮಾ ಹೇಳಿದ್ದೇನು?
ಪಾಕಿಸ್ತಾನದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಸೂಫಿಗಳು ಪತ್ತೆ- ಸುಷ್ಮಾ ಸ್ವರಾಜರಿಗೆ ‘ಥ್ಯಾಂಕ್ ಯೂ…’ ಎಂದ ಸೂಫಿಯ ಪುತ್ರ
ನೆಲಹಾಸಿನ ಮೇಲೆ ತ್ರಿವರ್ಣ ಧ್ವಜ ಬಳಸಿದ ಅಮೇಜಾನಿಗೆ ಸುಷ್ಮಾ ಏಟು, ವ್ಯಾಪಕ ಪ್ರಶಂಸೆ
ಶಾಲೆಗೆ ಪ್ರವೇಶ ಸಿಗದೆ ಪರದಾಡುತ್ತಿದ್ದ ಪಾಕಿಸ್ತಾನ ಮೂಲದ ಮಧುಗೆ ಸುಷ್ಮಾ ಸ್ವರಾಜರ ಸಹಾಯ ಹಸ್ತ!