ನಾನೇ ಕಣ್ರಪ್ಪಾ ಸಿಎಂ; ಬೆಳಗಾವೀಲಿ ಯಡಿಯೂರಪ್ಪ ಪರಿಚಯ ಪ್ರಹಸನ!

ಡಿಜಿಟಲ್ ಕನ್ನಡ ಟೀಮ್:

ಪಾಪ, ಯಡಿಯೂರಪ್ಪನವರ ಪರಿಸ್ಥಿತಿ ನೋಡಿ. ಪ್ರಮಾಣ ಸ್ವೀಕರಿಸಿ ಹದಿಮೂರು ದಿನ ಕಳೆದರೂ ನಾನೇ ಕಣ್ರಪ್ಪಾ ಸಿಎಂ ಅಂತ ಜನರಿಗೆ ಪರಿಚಯ ಮಾಡಿಕೊಳ್ಳೋ ದುಸ್ಥಿತಿ!

ಏನಾಯ್ತು ಅಂದ್ರಾ..? ಏನಿಲ್ಲ, “ಸಂಪುಟ ವಿಸ್ತರಣೆ ಅಮೇಲೆ ನೋಡಿಕೊಳ್ಳೋಣ. ಮೊದ್ಲು ಹೋಗಿ ಬೆಳಗಾವಿ ಪ್ರವಾಹ ಸಂತ್ರಸ್ತರ ಕಷ್ಟಕ್ಕೆ ಪರಿಹಾರ ಒದಗಿಸಿ” ಅಂತಾ ಹೈಕಮಾಂಡ್ ಹೇಳಿ ಕಳುಹಿಸಿದ ಮೇಲೆ ‘ಧಮ ಧಮಾ..’ ಅಂತ ಬುಸುಗುಡುತ್ತಲೇ ದಿಲ್ಲಿಯಿಂದ ಬೆಳಗಾವಿಗೆ ಬಂದು ಠಿಕಾಣಿ ಹೂಡಿರುವ ಯಡಿಯೂರಪ್ಪನವರು ಗುರುವಾರ ಸಂಕೇಶ್ವರ ಪ್ರವಾಸ ಮಂದಿರದಲ್ಲಿ ಪ್ರವಾಹ ಸಂತ್ರಸ್ತರನ್ನು ಭೇಟಿ ಮಾಡಿದರು.

ಆದರೆ ಹಳ್ಳಿ ಜನ, ಅವರಿಗೆ ಕುಮಾರಸ್ವಾಮಿ ಚೇಂಜ್ ಆಗಿ ಯಡಿಯೂರಪ್ಪನವರು ಸಿಎಂ ಆಗಿರೋದರ ಬಗ್ಗೆ ಅಷ್ಟೊಂದು ಅರಿವಿರಲಿಲ್ಲ. ಜತೆಗೆ ಸಂಪುಟವಿಲ್ಲದೇ ಒಂಟಿ ಸಲಗದಂತೆ ಅಲ್ಲಿ ಇಲ್ಲಿ, ಡಿಲ್ಲಿ ತಿರುಗಿಕೊಂಡಿರೋ ಅವರು ಸಿಎಂ ಆಗಿರೋದು ಆ ಜನಕ್ಕೆ ಇನ್ನೂ ಸರಿಯಾಗಿ ರಿಜಿಸ್ಟರ್ ಆಗಿರಲಿಲ್ಲ. ಹಿಂಗಾಗಿ ಇವರ್ಯಾಕೆ ಇಲ್ಲಿಗೆ ಬಂದ್ರು..? ಕುಮಾರಸ್ವಾಮಿ ಬರಬೇಕಿತ್ತಲ್ವಾ..? ಅಂತ ಸೋಜಿಗದಿಂದ ಪಿಳಿಪಿಳಿ ಕಣ್ಣು ಬಿಟ್ಟರು. ಏಳು ಕೆರೆ ನೀರು ಕುಡಿದು ಸಿಎಂ ಆಗಿರೋ ಯಡಿಯೂರಪ್ಪನವರಿಗೆ ತಕ್ಷಣ ಅರ್ಥವಾಗಿ ಹೋಯ್ತು, ಜನರ ಅಂತರಾಳ!

ಪಾಪ, ಅವರು ಕೂಡ ತಡ ಮಾಡಲಿಲ್ಲ. “ಪ್ರಧಾನಿ ಮೋದಿ ಅವರು ನನ್ನನ್ನ ಇಲ್ಲಿಗೆ ಕಳುಹಿಸಿದ್ದಾರೆ. ನಾನು ಸಿಎಂ ಯಡಿಯೂರಪ್ಪ, ನಾನು ಸಿಎಂ ಆಗಿರೋದು ಗೊತ್ತು ತಾನೇ..?” ಅಂತ ಕೇಳಿಯೇ ಬಿಟ್ಟರು. ತಬ್ಬಿಬ್ಬಾಗಿದ್ದ ಜನ ಸಾಹೇಬರು ಏನೋ ಹೇಳ್ತಿದ್ದಾರೆ ಅಂತ “ಆಹಾ.., ಊಹೂ..” ಅಂತ ಗೋಣು ಅಲ್ಲಾಡಿಸುವುದರೊಂದಿಗೆ ಯಡಿಯೂರಪ್ಪನವರ ಸಿಎಂ ಪರಿಚಯ ಪ್ರಹಸನ ಮುಕ್ತಾಯಗೊಂಡಿತು.

Leave a Reply