ಮಳೆ ಅಬ್ಬರ, ಸಾಮಾನ್ಯರ ಬದುಕು ತತ್ತರ

ಡಿಜಿಟಲ್ ಕನ್ನಡ ಟೀಮ್:

ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ರಾಜ್ಯದ ಮುಕ್ಕಾಲು ಭಾಗ ಜಿಲ್ಲೆಗಳು ತತ್ತರಿಸಿದ್ದು, ಜನರ ಬದುಕು ದುಸ್ತರವಾಗಿದೆ.

ಮಹಾರಾಷ್ಟ್ರದಲ್ಲಿನ ಪ್ರವಾಹದ ಜತೆಗೆ ಅತಿಯಾದ ಮಳೆಗೆ ಬೆಳಗಾವಿ ತತ್ತರಿಸಿದ ನಂತರ ಈಗ ನಿರಂತರ ಮಳೆಯಿಂದಾಗಿ ಉತ್ತರ ಕರ್ನಾಟಕದ ಜಿಲ್ಲೆಗಳು ಸೇರಿದಂತೆ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಮಡಿಕೇರಿ ಸೇರಿದಂತೆ ಮಲೆನಾಡು, ಕರಾವಳಿ ಭಾಗದಲ್ಲೂ ಪ್ರವಾಹ ಅಪ್ಪಳಿಸಿದೆ. ಮುಕ್ಕಾಲು ಭಾಗ ಮನೆ ಮುಳುಗಡೆಯಾಗಿದ್ದು, ರಸ್ತೆ ಸಂಪರ್ಕ ಕಡಿತವಾಗಿ ಹಲವು ಪ್ರದೇಶಗಳು ನಡುಗಡ್ಡೆಗಳಾಗಿವೆ.

ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಬೆಳಗಾವಿಯಲ್ಲಿ ಪ್ರವಾಹಪೀಡಿತ ಪ್ರದೇಶಗಳ ವೈಮಾನಿಕ ಪರಿಶೀಲನೆ ನಡೆಸಿದ್ದು, ಸದ್ಯ ಮಳೆಯ ಅವಾಂತರದಿಂದ ಜನ ಜೀವನ ಬಿಗಡಾಯಿಸಿದೆ. ಇನ್ನೂ 3 ದಿನಗಳ ಕಾಲ ಇದೇ ರೀತಿಯ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ಎಲ್ಲೆಲ್ಲಿ ಏನಾಗಿದೆ ನೋಡೋಣ ಬನ್ನಿ…

 • ಪುಬ್ಬಳಿಯಲ್ಲಿ ಮಳೆ ಅಬ್ಬರಕ್ಕೆ ಮನೆ ಗೋಡೆ ಕುಸಿದು ಗೃಹಿಣಿ ಚೆನ್ನಮ್ಮ ಪಾಲಿಕಾರ್ ಸಾವು.
 • ಮಂಗಳೂರಿಗೆ ಚಿಕ್ಕಮಗಳೂರು ಭಾಗದಿಂದ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ಬಂದ್ ಆಗಿದೆ.
 • ಹಾಸನದಿಂದ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್​ ಕೂಡ ಬಂದ್ ಆಗುವ ಸ್ಥಿತಿಯಲ್ಲಿದೆ.
 • ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಸೇತುವೆಗಳು ಮುಳುಗಿವೆ.
 • 2-3 ದಿನಗಳಿಂದ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಇಂದು ಕೂಡ ರಜೆ ಘೋಷಿಸಲಾಗಿದೆ.
 • ಹಾಸನ ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿದ್ದು ಸಕಲೇಶಪುರದ ಆಜಾದ್ ನಗರ ಸಂಪೂರ್ಣ ಮುಳುಗಡೆಯಾಗಿದೆ. 250ಕ್ಕೂ ಹೆಚ್ಚು ಮನೆ 80ಕ್ಕೂ ಹೆಚ್ಚು ಅಂಗಡಿಗಳು ಜಲಾವೃತವಾಗಿವೆ.
 • ಸಾಗರದಲ್ಲಿ ಅತಿಯಾದ ಮಳೆಗೆ ಆನಂದಪುರ-ಶಿಕಾರಿಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ನಿಂತಿದೆ.
 • ಧಾರವಾಡದಲ್ಲಿ ಒಂದೇ ವಾರದಲ್ಲಿ 154 ಮಿ.ಮೀ ಮಳೆಯಾಗಿದ್ದು, ವಾಡಿಕೆಗಿಂತ 5 ಪಟ್ಟು ಹೆಚ್ಚು ಮಳೆಯಾಗಿದೆ.
 • ಮಲಪ್ರಭಾ ನದಿಗೆ ನೀರು ಹರಿಬಿಟ್ಟ ಪರಿಣಾಮ ಉಕ್ಕಿ ಹರಿಯುತ್ತಿದೆ.
 • ಕೃಷ್ಣ ನದಿ ನೀರು ಹೆಚ್ಚಿನ ಹರಿವಿನ ಪರಿಣಾಮ ಅಥಣಿಯ ಸತ್ತಿ ಗ್ರಾಮದ ನಿರಾಶ್ರಿತ ಕೇಂದ್ರಕ್ಕೂ ನೀರು ನುಗ್ಗಿದೆ.
 • ಭಿಮಾ ನದಿಗೆ 80 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದ್ದು ನೆರೆ ಪ್ರಮಾಣ ಹೆಚ್ಚಿದೆ. ಯಾದಗಿರಿ ತಾಲೂಕಿನ ಕೌಳೂರು ಗ್ರಾಮದಲ್ಲಿ ಪಂಪ್ ಸೆಟ್ ತೆಗೆಯಲು ಹೋಗಿ 34 ವರ್ಷದ ಚಂದ್ರಪ್ಪ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
 • ಮಲಪ್ರಭಾ ನದಿಗೆ ಅಪಾರ ನೀರು ಬಿಡುಗಡೆ ಮಾಡಿದ್ದರಿಂದ ನರಗುಂದ ಹಾಗೂ ರೋಣ ತಾಲೂಕಿನ 13 ಗ್ರಾಮಗಳು ಮುಳುಗಡೆ. ವಿದ್ಯುತ್ ಸಂಪರ್ಕ ಸ್ಥಗಿತ, ದೂರವಾಣಿ ಸಂಪರ್ಕ ಸ್ಥಗಿತ.

ಪರಿಹಾರ ಕ್ರಮಗಳು…

 • ರಾಜ್ಯ ಸರ್ಕಾರದ ಮನವಿ ಹಿನ್ನಲೆಯಲ್ಲಿ ಕೇಂದ್ರದಿಂದ 11 ಎನ್ ಡಿಆರ್ ಎಫ್ ತಂಡ ರವಾನೆ. ಇನ್ನೂ 5 ತಂಡಗಳ ರವಾನೆ ಸಾಧ್ಯತೆ.
 • ಕಬಲಾಪುರದ ಪ್ರವಾಹದಲ್ಲಿ ಮನೆ ಕುಸಿದ ಪರಿಣಾಮ ದಂಪತಿಗಳು ಮೂರುದಿನಗಳಿಂದ ಮರವೇರಿ ಕುಳಿತಿದ್ದರು. ಇವರನ್ನು ಬೋಟ್ ಬಳಸಿ ರಕ್ಷಿಸಲಾಗಿದೆ.
 • ಚಿಕ್ಕಮಗಳೂರಿನಲ್ಲಿ ಅಧಿಕಾರಿಗಳ ಜತೆ ಅತಿವೃಷ್ಟಿ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಸಭೆ.
 • ಬೆಳಗಾವಿಯಲ್ಲಿ ಭಾರತೀಯ ಸೇನಾ ಸಿಬ್ಬಂದಿ ಪ್ರವಾಹದಲ್ಲಿ ಸಿಲುಕಿದ್ದ ಹಸುಗೂಸನ್ನು ರಕ್ಷಿಸಿದ್ದಾರೆ.
 • ಮಲೆನಾಡಿನಲ್ಲಿ ಮಳೆ ಹೆಚ್ಚಾಗಿದ್ದು, ಸಂಸದರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ. ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಚಿಕ್ಕಮಗಳೂರು ಶಾಸಕ ಸಿಟಿ ರವಿ, ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ, ತರಿಕೆರೆ ಶಾಸಕ ಡಿ.ಎಸ್ ಸುರೇಶ್ ಭಾಗಿ.
 • ಗೋಕಾಕ್ ತಾಲೂಕಿನ ಹುಣಶಾಲ್ಯ ಗ್ರಾಮದಲ್ಲಿ ಬೋಟ್ ಮೂಲಕ 70 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ.
 • ಘಟಪ್ರಭಾ ನದಿಯಲ್ಲಿ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿದ್ದ 10 ವರ್ಷದ ಬಾಲಕನ ರಕ್ಷಣೆ.

Leave a Reply