ಅಂದು ಗೋಲಿಬಾರ್, ಇಂದು ಲಾಠಿ ಚಾರ್ಜ್; ಪ್ರವಾಹ ಸಂತ್ರಸ್ತರಿಗೆ ಯಡಿಯೂರಪ್ಪ ಮಹಾಪ್ರಸಾದ!

ಡಿಜಿಟಲ್ ಕನ್ನಡ ಟೀಮ್:

2008 ರಲ್ಲಿ ರಸಗೊಬ್ಬರಕ್ಕೆ ಆಗ್ರಹಿಸಿದ ರೈತರ ಮೇಲೆ ಗೋಲಿಬಾರ್, 2019 ರಲ್ಲಿ ಪ್ರವಾಹ ಸಂತ್ರಸ್ತರ ಮೇಲೆ ಲಾಠಿ ಚಾರ್ಜ್..!

ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಹಳೇ ತಪ್ಪಿನಿಂದ ಇನ್ನೂ ಪಾಠ ಕಲಿತಿಲ್ಲ. ಗದಗದ ನರಗುಂದದಲ್ಲಿ ಶುಕ್ರವಾರ ಅವರನ್ನು ಭೇಟಿ ಮಾಡಲು ಬಯಸಿದ ಪ್ರವಾಹ ಸಂತ್ರಸ್ತರಿಗೆ ಲಾಠಿ ರುಚಿ ತೋರಿಸಲಾಗಿದೆ.

ನರಗುಂದದ ಕೊಣ್ಣೂರು ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದ ಯಡಿಯೂರಪ್ಪ ಅವರು ಮರಳುವಾಗ ಪ್ರವಾಹ ಸಂತ್ರಸ್ತರು ಅವರನ್ನು ಭೇಟಿ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಅಧಿಕಾರಿಗಳು ಅವಕಾಶ ನೀಡಿದಿದ್ದಾಗ ಆಕ್ರೋಶಗೊಂಡ ಅವರು ಸಿಎಂ ವಾಹನದ ಮುಂದೆ ಘೇರಾವ್ ಹಾಕಿದರು. ಈ ವೇಳೆ ಪೊಲೀಸರು ಅವರ ಮೇಲೆ ಲಾಠಿ ಬೀಸಿದರು.

ತಮ್ಮ ಎದುರೇ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿದ್ದರೂ ಯಡಿಯೂರಪ್ಪನವರು ಸಂತ್ರಸ್ತರ ಕಡೆ ತಿರುಗಿ ನೋಡದೇ ತೆರಳಿದರು.

ಇದರಿಂದ ಮತ್ತಷ್ಟು ಕೆರಳಿದ ಗ್ರಾಮಸ್ಥರು ಪೊಲೀಸ್ ವಾಹನ ಅಡ್ಡಗಟ್ಟಿ, ಅದನ್ನು ಗುದ್ಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರವಾಹ ಪರಿಸ್ಥಿತಿ ಪರಿಶೀಲಿಸಲು ಬಂದವರು ನಮ್ಮನ್ನು ಭೇಟಿ ಮಾಡದೆ, ಪರಿಹಾರ ಕಲ್ಪಿಸದೆ ಹಾಗೆ ಬಂದು ಹೀಗೆ ಹೋಗುವುದಾದರೆ ಅವರು ಮುಖ್ಯಮಂತ್ರಿಯಾಗಿ ಯಾಕಿರಬೇಕು? ಇಲ್ಲಿಗೆ ಯಾಕಾದರೂ ಬರಬೇಕಿತ್ತು ಎಂದು ಕಿಡಿಕಾರಿದರು.

ನಮ್ಮ ಕಷ್ಟವನ್ನು ಹೇಳಿಕೊಳ್ಳೋಣ ಎಂದರೆ ಮಂತ್ರಿಗಳಿಲ್ಲ ಇರೋದು ಸಿಎಂ ಅವರೊಬ್ಬರೆ. ಈಗ ಅವರು ನಮ್ಮ ಸಂಕಷ್ಟ ಕೇಳಲಿಲ್ಲ ಅಂದಮೇಲೆ ಪ್ರವಾಹದ ಬಳಿ ನಮ ದುಃಖ ತೊಡಿಕೊಳ್ಳಬೇಕೆ ಎಂದು ಅಲವತ್ತುಕೊಂಡರು. ಆಕ್ರೋಶಗೊಂಡವರನ್ನು ಸಮಾಧಾನಪಡಿಸಲು ಸ್ಥಳೀಯ ಬಿಜೆಪಿ ಮುಂಖಂಡರು ಮತ್ತು ಪೊಲೀಸರು ಕ್ಷಮೆ ಕೇಳಿದರು.

ನೆರೆ ಪರಿಸ್ಥಿತಿ ವೀಕ್ಷಣೆ ಮಾಡಿದ ನಂತರ ಮಾಧ್ಯಮದವರ ಜತೆ ಮಾತನಾಡಿದ ಯಡಿಯೂರಪ್ಪನವರು, ‘ನೆರೆ ಪರಿಸ್ಥಿತಿ ಕುರಿತು ಕೇಂದ್ರದ ಗಮನಕ್ಕೆ ತರಲಾಗಿದೆ. ಸದ್ಯದಲ್ಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಾಲ ಸೀತಾರಾಮನ್ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಅವರ ಭೇಟಿ ನಂತರ ನೆರೆ ಪರಿಹಾರಕ್ಕೆ ಹಣ ಪಡೆಯುವುದಾಗಿ ತಿಳಿಸಿದರು. ಸದ್ಯಕ್ಕೆ ನೂರು ಕೋಟಿ ಬಿಡುಗಡೆಗೊಳಿಸಲಾಗಿದ್ದು, ಸಂತ್ರಸ್ತರಿಗಾಗಿ ಯಾವುದೇ ರೀತಿಯ ಸಹಾಯಕ್ಕೂ ಸರ್ಕಾರ ಸಿದ್ಧವಿದೆ’ ಎಂದರು.

Leave a Reply