ಬಿರಿಯಾನಿ ಬಯಸಿದವರಿಗೆ ಚಿತ್ರಾನ್ನ ಕೊಟ್ಟಂತಿದೆ ‘ಮುನಿರತ್ನ ಕುರುಕ್ಷೇತ್ರ’!

ಡಿಜಿಟಲ್ ಕನ್ನಡ ಟೀಮ್:

ಒಂದು ಕಡೆ ಇಡೀ ಕರ್ನಾಟಕವನ್ನೇ ಒದ್ದೆಮುದ್ದೆ ಮಾಡಿರುವ ವರುಣ, ಅವನ ನಿಷ್ಕರುಣೆ ನಿಮಿತ್ತದ ಪ್ರವಾಹದಿಂದ ಬದುಕು ಮುಳುಗಿಸಿಕೊಂಡಿರುವ ಜನಸ್ತೋಮ, ಇದರ ಮಧ್ಯೆ ಬಿಡುಗಡೆ ಆಗಿರುವ ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಕೂಡ ಕೊಚ್ಚಿಕೊಂಡು ಹೋಗಿದೆ. ಇದಕ್ಕೆ ಕಾರಣ ಬರೀ ಪ್ರವಾಹ ಮಾತ್ರವಲ್ಲ. ಬಿರಿಯಾನಿ ಬಯಸುತ್ತಿದ್ದವರಿಗೆ ಚಿತ್ರಾನ್ನ ಕೊಟ್ಟಂತೆ ಜಾಳು, ಜಾಳಾಗಿ ಮೂಡಿ ಬಂದಿರುವ ಚಿತ್ರವೇ ಪ್ರಮುಖ ಕಾರಣ. ಉಳಿದಿದ್ದೆಲ್ಲ ಹಿಮ್ಮೇಳ!

ಕತೆ, ಸಾಹಿತ್ಯ, ನಿರೂಪಣೆ ಎಲ್ಲದರಲ್ಲೂ ಹಿಡಿತ ಕಳೆದುಕೊಂಡಿರುವ ಚಿತ್ರಕ್ಕೆ ಒಂದಷ್ಟು ಮರ್ಯಾದೆ ಏನಾದರೂ ತಂದುಕೊಟ್ಟಿದ್ದರೆ ಅದು ದುರ್ಯೋಧನ ಪಾತ್ರದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಶಕುನಿ ಪಾತ್ರದ ರವಿಶಂಕರ್, ಪಾಂಚಾಲಿ ಪಾತ್ರದ ಸ್ನೇಹ ಮತ್ತು ಅಭಿಮನ್ಯು ಪಾತ್ರದ ನಿಖಿಲ್ ಕುಮಾರಸ್ವಾಮಿ. ಸುಮಾರು 60 ಕೋಟಿ ರುಪಾಯಿ ವೆಚ್ಚದಲ್ಲಿ ಬಹುತಾರಾಗಣದ ಕುರುಕ್ಷೇತ್ರ ಕನ್ನಡದ ಜತೆಗೆ ಹಿಂದಿ, ತಮಿಳ್, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲೂ ನಿರ್ಮಾಣವಾಗಿದೆ ಎಂಬುದೊಂದೇ ಹೆಮ್ಮೆ. ಆದರೆ ಇಡೀ ಚಿತ್ರದ ಕೇಂದ್ರಬಿಂದುವಾಗಿ ಬಿಂಬಿತವಾಗಿರುವ ದರ್ಶನ್ ಅಭಿಮಾನಿಗಳಿಗೇ ಈ ಸಿನಿಮಾ ನಿರಾಸೆ ಮೂಡಿಸಿದೆ. ದಚ್ಚು ಅಭಿಮಾನಿಗಳು ಪೆಚ್ಚು ಮೋರೆ ಹಾಕಿಕೊಂಡು ಲೊಚಗುಡುತ್ತಾ ಚಿತ್ರಮಂದಿರದಿಂದ ಹೊರಬಂದಿರುವುದೇ ಚಿತ್ರಲಕ್ಷಣದ ಪ್ರತಿಬಿಂಬ.

ಮೂರು ಗಂಟೆ ಐದು ನಿಮಿಷ ಕಾಲಾವಧಿಯ ಕುರುಕ್ಷೇತ್ರ ಕತೆಯಿಲ್ಲದ ಬರೀ ಕಾಲಕ್ಷೇಪ. ಮೊದಲಾರ್ಧದಲ್ಲಿ ದರ್ಶನ್ ಅಭಿನಯಕ್ಕೆ ಫೋರ್ಸ್ ಇಲ್ಲದಿರುವುದು ಚಿತ್ರಕ್ಕೆ ಫುಲ್ ಬೋರಿಂಗ್ ಲೇಪ ಹಚ್ಚಿದೆ. ಉಳಿದಿದ್ದರಲ್ಲಿ ಅವರ ಅಭಿನಯ ಗೆದ್ದಿದೆಯಾದರೂ ಅದೊಂದಕ್ಕೇ ಸಿನಿಮಾ ಗೆಲ್ಲಿಸಲು ಸಾಧ್ಯವಾಗುವುದಿಲ್ಲವಲ್ಲ. ದ್ವಿತಿಯಾರ್ಧದಲ್ಲಿ ಮೂಡಿ ಕಾಡುವ ಸಿನಿಮಾ ಯಾವಾಗ ಮುಗಿಯುತ್ತಪ್ಪಾ ಎನ್ನುವ ಭಾವ ಪ್ರೇಕ್ಷಕನ ತಾಳ್ಮೆಗೊಂದು ಸವಾಲು. ಚಿತ್ರಕತೆ ಸಂಪೂರ್ಣ ತೋಪು. ಕುರುಕ್ಷೇತ್ರ ಪೌರಾಣಿಕ ಚಿತ್ರ ಅನ್ನೋ ಫೀಲನ್ನೇ ಕೊಡುವುದಿಲ್ಲ. ಹಾಡುಗಳು ಇಂಪಿಲ್ಲ. ಸಾಹಿತ್ಯ ಸೊಂಪಿಲ್ಲ.

ಶಕುನಿ ಪಾತ್ರದ ರವಿಶಂಕರ್, ಕರ್ಣನ ಪಾತ್ರದಲ್ಲಿ ಅರ್ಜುನ್ ಸರ್ಜಾ, ಪಾಂಚಾಲಿ ಪಾತ್ರದಲ್ಲಿ ಸ್ನೇಹ ಉತ್ತಮವಾಗಿ ನಟಿಸಿದ್ದಾರೆ. ಚೆನ್ನಾಗಿ ಅಭಿನಯಿಸಿದ್ದರೂ ಶ್ರೀ ಕೃಷ್ಣ ಪರಮಾತ್ಮನ ಪಾತ್ರ ರವಿಚಂದ್ರನ್ ಗೆ ಹೊಂದಿಲ್ಲ. ಸಾಮಾಜಿಕ ಚಿತ್ರಗಳಲ್ಲಷ್ಟೇ ಅವರಿಗೆ ಈ ಪಾತ್ರ ಚೆನ್ನಾಗಿ ಹೋಲುತ್ತದೆ.

ಹೋಗಲಿ ಜನ 3D ತಂತ್ರಜ್ಞಾನದಲ್ಲಾದರೂ ಕುರುಕ್ಷೇತ್ರ ಯುದ್ಧದ ರೌದ್ರರಮಣೀಯತೆಯನ್ನು ಕಣ್ತುಂಬಿಕೊಳ್ಳಬಹುದು ಅನ್ನೋ ನಿರೀಕ್ಷೆ ಕೂಡ ಹುಸಿಯಾಗಿದೆ. ತಂತ್ರಜ್ಞಾನ ಬಳಕೆಯಲ್ಲೂ ನಿರ್ಮಾಪಕ ಮುನಿರತ್ನ ಸೋತಿದ್ದಾರೆ. ಇಡೀ ಚಿತ್ರದಲ್ಲಿ ಕೋಪೋದ್ರಿಕ್ತ ದುರ್ಯೋಧನ ದರ್ಶನ್ ಗಾಜುಗಳನ್ನು ಪುಡಿಪುಡಿ ಮಾಡುವ ಏಕೈಕ ದೃಶ್ಯ ಮಾತ್ರ ತ್ರಿಡಿ ತಂತ್ರಜ್ಞಾನದಲ್ಲಿದೆ. ಬಿಲ್ಯುದ್ಧ, ಗಧಾಯುದ್ಧ, ಕತ್ತಿವರಸೆ ಸೇರಿದಂತೆ ಸಂಪೂರ್ಣ ಕುರುಕ್ಷೇತ್ರ ತ್ರಿಡಿಯಲ್ಲಿ ಕಾಣಸಿಗಲ್ಲ. ಕುರುಕ್ಷೇತ್ರದ ಪಾಲುದಾರರಾದ ಪಾಂಡವರನ್ನು ಲಕ್ಷ್ಯಕ್ಕೆ ಇಟ್ಟುಕೊಂಡಿಲ್ಲ. ಅವರಿಗೆ ಚಿತ್ರದಲ್ಲಿ ಸಾಮಾಜಿಕ ನ್ಯಾಯ ದೊರೆತಿಲ್ಲ. ಸಂಪೂರ್ಣ ನಿರ್ಲಕ್ಷಿಸಲಾಗಿದೆ. ದುರ್ಯೋಧನನ ವೈಭವೀಕರಣಕ್ಕೆಂದೇ ಚಿತ್ರ ಹೆಣೆದಂತೆ ಭಾಸವಾಗುತ್ತದೆ.

ಅಭಿಮಾನಿಗಳು ಎನ್ನುವ ಕಾರಣಕ್ಕೆ ದರ್ಶನ್ ಫ್ಯಾನ್ಸ್ ಅವಡುಗಚ್ಚಿ ಒಮ್ಮೆ ನೋಡಬಹುದು. ಉಳಿದವರು ಆ ರಿಸ್ಕ್ ತೆಗೆದುಕೊಳ್ಳುತ್ತಾರೆ ಎಂದೆನಿಸುವುದಿಲ್ಲ. ಇತ್ತೀಚಿನ ಕರ್ನಾಟಕ ರಾಜಕೀಯ ಕುರುಕ್ಷೇತ್ರದಲ್ಲಿ ಮುನಿರತ್ನ ಅತೃಪ್ತ. ಇದೀಗ ಅವರ ಸಿನಿಮಾ ಕುರುಕ್ಷೇತ್ರ ಪ್ರೇಕ್ಷಕರಿಗೆ ಅದೇ ಭಾವ ಕೊಡುವುದರಲ್ಲಿ ಸಂಶಯ ಬೇಡ!

Leave a Reply