ಸಾಕಪ್ಪಾ ಸಾಕು.. ಈ ಸಿಎಂ ಹುದ್ದೆ ಸಹವಾಸ..!?

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಜೆಡಿಎಸ್ ದೋಸ್ತಿ ಸರ್ಕಾರ ಬೀಳಿಸುವಾಗ ರಾಜ್ಯ ಬಿಜೆಪಿಯಲ್ಲಿ ಇದ್ದ ಉತ್ಸಾಹ ಈಗ ಅಧಿಕಾರಕ್ಕೆ ಬಂದ ಮೇಲೆ ಕಾಣುತ್ತಿಲ್ಲ. ಸರ್ಕಾರ ರಚನೆಯಿಂದ ಹಿಡಿದು ಸಂಪುಟ ರಚನೆವರೆಗೂ ಬಿಜೆಪಿ ನಾಯಕರು ಹೈಕಮಾಂಡ್ ದೆಹಲಿಯತ್ತ ನೋಡುವಂತಾಗಿದೆ. ಇದರ ಮಧ್ಯೆ ಇಡೀ ಅರ್ಧ ರಾಜ್ಯವನ್ನೇ ನುಂಗಿರುವ ಭೀಕರ ಪ್ರವಾಹವನ್ನು ಏಕಾಂಗಿಯಾಗಿ ನಿಭಾಯಿಸುವಷ್ಟರಲ್ಲಿ ಸಿಎಂ ಯಡಿಯೂರಪ್ಪ ಹೈರಾಣಾಗಿದ್ದಾರೆ.

ಸಂಪುಟ ರಚನೆ ಇರಲಿ ಈ ಬಗ್ಗೆ ಚರ್ಚೆ ನಡೆಸಲು ಕೂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರಿಗೆ ಸಮಯ ಇಲ್ಲದಂತಾಗಿದೆ. ಪರಿಣಾಮ ರಾಜ್ಯದಲ್ಲಿ ಸಧ್ಯಕ್ಕೆ ಸಚಿವ ಸಂಪುಟ ರಚನೆ ಕನಸಾಗಿದೆ. ಇದೆಲ್ಲದರ ಪರಿಣಾಮ ಯಡಿಯೂರಪ್ಪ ಅವರ ತಲೆ ಮೇಲೆ ಬೆಟ್ಟದಷ್ಟು ಜವಾಬ್ದಾರಿ ಬಿದ್ದಿದೆ.

ಬಿಜೆಪಿ ಹೈಕಮಾಂಡ್ ಸಚಿವ ಸಂಪುಟ ರಚನೆಗಷ್ಟೇ ಅಲ್ಲ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವಂತೆ ಆದೇಶ ನೀಡಲು 3 ದಿನ ಸತಾಯಿಸಿತು. ಇನ್ನು ಸ್ಪೀಕರ್ ಸ್ಥಾನಕ್ಕೆ ತಮ್ಮ ಆಪ್ತ ಬೋಪಯ್ಯ ಅವರನ್ನು ಆಯ್ಕೆ ಮಾಡಲು ಮುಂದಾದ ಯಡಿಯೂರಪ್ಪನವರಿಗೆ ಹೈಕಮಾಂಡ್ ಬ್ರೇಕ್ ಹಾಕಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ನೇಮಿಸಿದೆ.

ಸತತ ಪ್ರಯತ್ನದ ನಂತರ ಸಿಎಂ ಆದ ಬಿಎಸ್ ವೈ ರಾಜ್ಯವನ್ನು ಆಳುವ ಕನಸಿನಲ್ಲಿದ್ದರು. ಆದರೆ ಹೈಕಮಾಂಡ್ ತಮ್ಮ ಪ್ರತಿ ಹೆಜ್ಜೆಗೂ ಅಡ್ಡಿಯಾಗಿ ನಿರೀಕ್ಷಿತ ಸಹಕಾರ ದೊರೆಯದಿರುವುದು ಬಿಎಸ್ ವೈ ಕಂಗಾಲಾಗುವಂತೆ ಮಾಡಿದೆ. ಈ ಮಧ್ಯೆ ಗಾಯದ ಮೇಲೆ ಬರೆ ಎಳೆದಂತೆ ಪ್ರವಾಹ ಪರಿಸ್ಥಿತಿ ಯಡಿಯೂರಪ್ಪನವರನ್ನು ಇನ್ನಿಲ್ಲದಂತೆ ಕಾಡುತ್ತಿದೆ.

ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಪ್ರದೇಶದ 15 ಜಿಲ್ಲೆಗಳು ಪ್ರವಾಹಕ್ಕೆ ತತ್ತರಿಸಿವೆ. ಸರ್ಕಾರ ಇದ್ದರೂ ಆಡಳಿತ ಯಂತ್ರವನ್ನು ಸುಗಮವಾಗಿ ನಡೆಸಲು ಸಚಿವರು ಇಲ್ಲದಿರುವುದು ಬಿಎಸ್ ವೈ ಸಂಪೂರ್ಣ ಜವಾಬ್ದಾರಿಯನ್ನು ತಾವೇ ಹೊರಬೇಕಾಗಿದೆ.

ಈ ಮಧ್ಯೆ ರಾಜ್ಯ ಸರ್ಕಾರ ಪ್ರವಾಹಕ್ಕೆ ಕೇಂದ್ರದ ಪರಿಹಾರ ಕೇಳುವಲ್ಲಿ ವಿಳಂಬ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಹೇಳಿಕೆ ಅಚ್ಚರಿ ಮೂಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಸಿಎಂ, ಅವರ ಮಾತಲ್ಲಿ ಸತ್ಯ ಇಲ್ಲ. ಕೇಂದ್ರಕ್ಕೆ ಪರಿಹಾರ ಕೋರುವಲ್ಲಿ ಯಾವುದೇ ವಿಳಂಬ ಆಗಿಲ್ಲ. ಹೀಗಾಗಲೇ ಏನ್ ಡಿ ಆರ್ ಎಫ್ ಮೂಲಕ ಕೇಂದ್ರ ತುರ್ತು ಪರಿಹಾರ ಬಿಡುಗಡೆ ಮಾಡಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಹೈಕಮಾಂಡ್ ಬಿಎಸ್ ವೈ ಆಪ್ತರಿಗೆ ಮಂತ್ರಿಗಿರಿ ನೀಡಲು ಬಿಲ್ ಕುಲ್ ಒಪ್ಪುತ್ತಿಲ್ಲ ಹೀಗಾಗಿ ಸಂಪುಟ ರಚನೆ ಮುಗಿಯದ ಪ್ರಹಸನವಾಗುತ್ತಿದೆ. ಬಿಎಸ್ ವೈ ದೆಹಲಿಗೆ ತೆಗೆದುಕೊಂಡು ಹೋಗಿರುವ ಪಟ್ಟಿಯನ್ನು ಒಪ್ಪಿಲ್ಲ. ಅಮಿತ್ ಶಾ ಹಾಗೂ ಬಿಎಸ್ ವೈ ಭೇಟಿಯಾಗಲು ಸಾಧ್ಯವಾಗಿಲ್ಲ. ಹೀಗಾಗಿ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂಬ ವರದಿ ಬಂದಿವೆ. ಆದರೆ ಏನು ಮಾತನಾಡಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಯಾರೂ ನೀಡಿಲ್ಲ. ಹೀಗಾಗಿ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಎರಡೂ ಸರ್ಕಾರಗಳ ನಡುವೆ ಹೊಂದಾಣಿಕೆ ಕಾಣುತ್ತಿಲ್ಲ.

ವಿರೋಧ ಪಕ್ಷಗಳಿಗಿಂತ ತಮ್ಮ ಪಕ್ಷದವರೇ ಯಡಿಯೂರಪ್ಪ ಅವರಿಗೆ ದೊಡ್ಡ ಸವಾಲಾಗಿ ಕಾಡುತ್ತಿದ್ದು, ಈ ಸಿಎಂ ಹುದ್ದೆ ಸಾಕು ಎನ್ನುವಷ್ಟರ ಮಟ್ಟಿಗೆ ಬಿಎಸ್ ವೈ ಸುಸ್ತಾಗಿದ್ದಾರೆ.

Leave a Reply