ಪ್ರವಾಹದಲ್ಲಿ ಮುಳುಗಿದ ಮಲೆನಾಡು; 3 ಸಾವಿರ ಕೋಟಿ ಬಿಡುಗಡೆಗೆ ಮನವಿ

ಡಿಜಿಟಲ್ ಕನ್ನಡ ಟೀಮ್:

ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ವರುಣನ ಅಬ್ಬರ ಮುಂದುವರೆದಿದ್ದು, ಪ್ರವಾಹ ಪ್ರಮಾಣ ಕೊಂಚವೂ ಕಡಿಮೆಯಾಗಿಲ್ಲ. ಈ ಮಧ್ಯೆ ರಾಜ್ಯದ ಪ್ರವಾಹ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿ ತಕ್ಷಣವೇ 3 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.

ಶನಿವಾರ ವಿಶೇಷ ಸುದ್ದಿಗೋಷ್ಠಿ ನಡೆಸಿದ ಸಿಎಂ ಹೇಳಿದ್ದಿಷ್ಟು…

‘ಇದುವರೆಗೆ ಪ್ರವಾಹ ಪೀಡಿತ ಪ್ರದೇಶದಲ್ಲಿ 6 ಸಾವಿರ ಕೋಟಿ ರೂ ನಷ್ಟ ಆಗಿದೆ. ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿ ತಕ್ಷಣ ಕೇಂದ್ರಕ್ಕೆ 3 ಸಾವಿರ ಕೋಟಿ ರೂ ಬಿಡುಗಡೆ ಮಾಡಲು ಮನವಿ ಮಾಡಿದ್ದೇವೆ.

ಕೇಂದ್ರದಿಂದ ಅಗತ್ಯ ನೆರವು ಸಿಕ್ತಿದೆ. ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದ್ದರಲ್ಲಿ ಯಾವುದೇ ವಿಳಂಬ ಆಗಿಲ್ಲ. ಪ್ರಹ್ಲಾದ್ ಜೋಷಿ ಹೇಳಿಕೆಯಲ್ಲಿ ಸತ್ಯಾಂಶ ಇಲ್ಲ. ಈಗಾಗಲೇ ಕೇಂದ್ರ ಎಸ್ ಡಿ ಆರ್ ಎಫ್ ಮೂಲಕ 126 ಕೋಟಿ ರೂ ತುರ್ತು ನೆರವು ಕೊಟ್ಟಿದೆ.

ಸರ್ಕಾರದ ಮುಂದೆ ಹತ್ತಾರು ತಕ್ಷಣದ ಸವಾಲುಗಳಿವೆ. ಕೆಲವು ಗ್ರಾಮಗಳನ್ನು ಶೇ.100 ರಷ್ಟು ಸ್ಥಳಾಂತರ ಮಾಡಬೇಕಿದೆ. ಇದಕ್ಕೆ ಬೇಕಾದ ಭೂಮಿ‌ ಖರೀದಿ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗ್ತಿದೆ. ಸಿಆರ್ ಪಿಎಫ್ ನೇಮಕಾತಿ ಪ್ರಕ್ರಿಯೆ ಮುಂದೂಡುವ ಬಗ್ಗೆ ಚಿಂತನೆ ನಡೆದಿದೆ. ಆ ಭಾಗದ ಅಭ್ಯರ್ಥಿಗಳು ಅಂಕಪಟ್ಟಿ ಹಾಗೂ ಮೂಲ ದಾಖಲೆಗಳನ್ನ ಕಳೆದುಕೊಂಡಿದ್ದಾರೆ. ಈ ಕುರಿತು ವಿದ್ಯಾರ್ಥಿಗಳು ಮನವಿ ಮಾಡಿದ್ದು, ಆ ಬಗ್ಗೆ ಕ್ರಮ ತೆಗೆದುಕೊಳ್ತೇನೆ.

ಸಚಿವ ಸಂಪುಟ ಇಲ್ಲದಿರಬಹುದು. ನಾನೊಬ್ಬನೇ ಇದ್ದರೂ ನಮ್ಮ ಎಲ್ಲ ಶಾಸಕರೂ ಸಚಿವರಂತೆ ಕೆಲಸ ಮಾಡ್ತಿದಾರೆ. ಎಲ್ಲ ಪಕ್ಷದ ಶಾಸಕರೂ ಕರ್ತವ್ಯ ನಿಭಾಯಿಸ್ತಿದಾರೆ. ಎಳ್ಳಷ್ಟೂ ಕೊರತೆ ಆಗದಂತೆ ಪರಿಹಾರ, ಪುನರ್ವಸತಿ ಕಾರ್ಯ ಕೈಗೊಂಡಿದ್ದೇವೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ನೀಡುತ್ತಿದ್ದೇವೆ.ಮೃತಪಟ್ಟವರಿಗೆ 5 ಲಕ್ಷ ರೂ., ಜಾನುವಾರುಗಳು ಸಾವನ್ನಪಿದ್ದರೆ 30 ಸಾವಿರ ರೂ., ಇನ್ನೂ ಕರುಗಳು ಸಾವನ್ನಪ್ಪಿದ್ರೆ 15 ಸಾವಿರ ನೆರವು ಕೊಡಲಾಗುವುದು.’

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಳಗಾವಿಗೆ ಭೇಟಿ ನೀಡಿದ್ದು, ಪ್ರವಾಹ ಪರಿಸ್ಥಿತಿ ಪರಿಶೀಲನೆ ನಡೆಸಿದರು.

ಇನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 41 ಲಕ್ಷ ನೀಡಲಾಗಿದೆ. ಪರಿಹಾರ ನಿಧಿಯ ಚೆಕ್ ನ್ನು ಕೆಪಿಸಿಸಿ ಪರವಾಗಿ ಪ್ರಧಾನ ಕಾರ್ಯದರ್ಶಿಗಳಾದ ವಿ.ವೈ. ಘೋರ್ಪಡೆ ಹಾಗೂ ಹಾಜಿ ಷಫಿಉಲ್ಲ ಅವರು ವಿಧಾಸೌಧದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಲಾಗಿದೆ.

ಪ್ರವಾಹದ ಅಬ್ಬರ ಎಲ್ಲೆಲ್ಲಿ ಹೇಗಿದೆ…

ಕೊಡಗು ತೋರಾದಲ್ಲಿ 8 ಮಂದಿ ನಾಪತ್ತೆಯಾಗಿದ್ದಾರೆ. ಗುಡ್ಡ ಕುಸಿತದಿಂದ ರಕ್ಷಣಾ ಕಾರ್ಯಚರಣೆ ಅಡ್ಡಿಯಾಗಿದೆ. ಸ್ಥಳದಲ್ಲಿ ಭಾರೀ ಮಣ್ಣು, ಕೆಸರು ಇದ್ದು ತೋರಾ ಗ್ರಾಮದಲ್ಲಿ NDRF ಸಿಬ್ಬಂದಿ ಮನೆಗಳನ್ನ ಹುಡುಕಲಾಗದ ಸ್ಥಿತಿ ನಿರ್ಮಾಣವಾಗಿದೆ.

ಮೂಡಿಗೆರೆ ಬಳಿ ಮತಿಕಟ್ಟೆ ಬಾಳೂರು ಹೊರಟ್ಟಿ ಗ್ರಾಮ
ಗುಡ್ಡಕುಸಿದು ತಾಯಿ ಶೇಷಮ್ಮ (55) ಸತ್ತಿದ್ದು, ಮಗ ಸತೀಶ್ ನಾಪತ್ತೆಯಾಗಿದ್ದಾನೆ. ಅವಶೇಷಗಳಡಿ ತಾಯಿ ಶವ ಪತ್ತೆ, ಮಗನ ಸುಳಿವಿಲ್ಲ.

ಜಮಖಂಡಿಯ ಲಿಂಗದಕಟ್ಟಿ ಗ್ರಾಮ ಸಂಪೂರ್ಣ ಜಲಾವೃತ. ಕಳೆದ ರಾತ್ರಿ ಇದ್ದಕ್ಕಿದ್ದಂತೆ ಹೆಚ್ಚಿದ ಕೃಷ್ಣಾ ನದಿ ನೆರೆ
ಸರ್ಕಾರಿ ಶಾಲೆ ಸೇರಿ ಗ್ರಾಮದ ಎಲ್ಲಾ ಮನೆ ಜಲಾವೃತವಾಗಿವೆ.

ಮಲೆನಾಡಿನಲ್ಲೂ ಪ್ರವಾಹ ಅಬ್ಬರ ಹೆಚ್ಚಾಗಿದ್ದು, ಮೂಡಿಗೆರೆ ತಾಲೂಕಿನ ಹತ್ತಾರು ಗ್ರಾಮದಲ್ಲಿ ಸಂಪರ್ಕ ಕಡಿತದಿಂದ ಹೊರಬರಲಾಗದೆ ಪ್ರವಾಹದಲ್ಲಿ 100ಕ್ಕೂ ಜನರು ಪರದಾಟ. ಮಧುಗುಣಿ, ಚನ್ನಹಡ್ಲು ದುರ್ಗದಹಳ್ಳಿ, ಕೆಳಗೂರು, ಯಲ್ಲಂದೂರು, ಸುಂಕಶಾಲೆ ಬಲಿಗೆ, ಹೊರನಾಡು, ಬಲಿಗೆ ಗ್ರಾಮದಲ್ಲಿ ಜನರು ಅತಂತ್ರ ಪರಿಸ್ಥಿತಿಯಲ್ಲಿ ಇದ್ದು, ಸ್ಥಳಕ್ಕೆ ಹೋಗಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

Leave a Reply