ಕೇಂದ್ರದ ವಿರುದ್ಧ ಮಲತಾಯಿ ಧೋರಣೆ ಆರೋಪ ಹೆಚ್ಚುತ್ತಿರೋ ಹೊತ್ತಲ್ಲಿ ನಿರೀಕ್ಷೆ ಮೂಡಿಸಿದೆ ಅಮಿತ್ ಶಾ ಭೇಟಿ

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅದಿಕಾರದಲ್ಲಿದ್ದರೂ ಕೇಂದ್ರ ಸರ್ಕಾರ ರಾಜ್ಯದ ಪ್ರವಾಹವನ್ನು ನಿರ್ಲಕ್ಷಿಸಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಪ್ರವಾಹವಾದಾಗ ತೋರುವ ಮುತುವರ್ಜಿ ದಕ್ಷಿಣ ಭಾರತ ರಾಜ್ಯಗಳ ಪ್ರವಾಹದ ವೇಳೆ ತೋರುವುದಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿದೆ. ಈ ಟೀಕೆಗಳ ಮಧ್ಯೆ ಇಂದು ಅಮಿತ್ ಶಾ ಬೆಳಗಾವಿಗೆ ಭೇಟಿ ನೀಡಲಿದ್ದು, ರಾಜ್ಯಕ್ಕೆ ಎಷ್ಟು ಪರಿಹಾರ ಘೋಷಣೆ ಮಾಡ್ತಾರೆ? ಎಂಬ ಪ್ರಶ್ನೆ ಮೂಡಿದೆ.

ಅನೇಕ ದಶಕಗಳ ನಂತರ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬಂದಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದೆ. ಅದು ಸಂಪುಟವಿಲ್ಲದೇ ಮುಖ್ಯಮಂತ್ರಿ ಯಡಿಯೂರಪ್ಪನವರ ಸರ್ಕಾರ. ಅತ್ತ ಕೇಂದ್ರದಲ್ಲೂ ಬಿಜೆಪಿ ಅಧಿಕಾರದಲ್ಲಿರುವುದರಿಂದ ರಾಜ್ಯದಲ್ಲಿ ಉತ್ತಮ ಕೆಲಸಗಳಾಗುವ ನಿರೀಕ್ಷೆ ಎಲ್ಲರಲ್ಲೂ ಮೂಡಿತ್ತು. ಸರ್ಕಾರ ರಚನೆಯಾದ ಎರಡೇ ವಾರದಲ್ಲಿ ಪ್ರವಾಹ ಪರಿಸ್ಥಿತಿ ಒನ್ ಮ್ಯಾನ್ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.

ಪ್ರವಾಹಕ್ಕೆ ಸಿಲುಕಿದವರ ರಕ್ಷಣೆಗಾಗಿ ಕೇಂದ್ರ ಸರ್ಕಾರದಿಂದ ಸೇನಾಪಡೆ ಹಾಗೂ ವಾಯುಪಡೆಯ ಹೆಲಿಕಾಪ್ಟರ್ ಬಳಕೆ ಮಾಡಿಕೊಳ್ಳಲಾಗ್ತಿದೆ. ಎನ್‌ಡಿಆರ್‌ಎಫ್ ಸಿಬ್ಬಂದಿ ಹಗಲು ರಾತ್ರಿ ಎನ್ನದೆ ನಾಗರಿಕರ ರಕ್ಷಣೆಗೆ ಶ್ರಮವಹಿಸಿದ್ದಾರೆ. ಇಷ್ಟೆಲ್ಲಾ ಸಮಸ್ಯೆ ಆದರೂ ರಾಜ್ಯದಲ್ಲಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಪೂರ್ಣ ಪ್ರಮಾಣದ ಸರ್ಕಾರವಿಲ್ಲ. ಪರಿಣಾಮ ಸಿಎಂ ಯಡಿಯೂರಪ್ಪ ಏಕಾಂಗಿಯಾಗಿ ಓಡಾಡುವ ಪರಿಸ್ಥಿತಿ ಎದುರಾಗಿದೆ.

ಶನಿವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂ ರಾಜ್ಯಸಭೆಗೆ ಆಯ್ಕೆಯಾಗಿದ್ದು, ರಾಜ್ಯದ ಪರಿಸ್ಥಿತಿ ಅವಲೋಕಿಸಿದ್ದಾರೆ. ಅದರಲ್ಲು ಗಂಜಿ ಕೇಂದ್ರಗಳಿಗೆ ಭೇಟಿ ಕೊಡದೆ, ಕೇವಲ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ ಅನ್ನೋ ಆರೋಪಗಳೂ ಕೇಳಿ ಬಂದಿವೆ. ಈ ನಡುವೆ ದೆಹಲಿಯಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗದೆ ವಾಪಸ್ ಕಳುಹಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಬೆಳಗಾವಿಗೆ ಬರುತ್ತಿದ್ದಾರೆ. ಹೀಗಾಗಿ ಸಿಎಂ ಪ್ರವಾಸದಲ್ಲಿ ಬದಲಾವಣೆ ಆಗಿದ್ದು, ಇಂದು ಬೆಳಗ್ಗೆ ಬೆಳಗಾವಿಗೆ ತೆರಳಲಿದ್ದಾರೆ.

ಇಂದು ಮಧ್ಯಾಹ್ನ 2.30 ರ ವೇಳೆಗೆ ಅಮಿತ್ ಶಾ ಬೆಳಗಾವಿಗೆ ಆಗಮಿಸಲಿದ್ದು, ನೆರೆ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ‌. ಈಗಾಗಲೇ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಎರಡೂವರೆ ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಟ್ಟಿರುವ ಕಾರಣ, ಕೃಷ್ಣ ನದಿ ಪಾತ್ರ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಜಲಾವೃತವಾಗಿದೆ.

ಪ್ರವಾಹ ಪರಿಸ್ಥಿತಿ ಅಧ್ಯಯನದ ಜತೆಗೆ ಸಿಎಂ ಯಡಿಯೂರಪ್ಪ, ಅಮಿತ್ ಶಾ ಚರ್ಚೆ ನಡೆಸಲಿದ್ದು, ಕೇಂದ್ರದಿಂದ ಪರಿಹಾರ ಪಡೆಯುವ ಹಾಗೂ ರಾಜ್ಯದಲ್ಲಿ ಸಚಿವ ಸಂಪುಟ ರಚನೆ ಕುರಿತು ಚರ್ಚಿಸುವ ಸಾಧ್ಯತೆ ಇದೆ. ಕಳೆದ ವರ್ಷ ಕೊಡಗು ಪ್ರವಾಹ ಪರಿಸ್ಥಿತಿ ವೇಳೆ ದೋಸ್ತಿ ಸರ್ಕಾರ ಅದಿಕಾರದಲ್ಲಿತ್ತು. ಆಗ ಕೇಂದ್ರಕ್ಕೆ 3 ಸಾವಿರ ಕೋಟಿ ಪರಿಹಾರ ನೀಡುವಂತೆ ಕೋರಲಾಗಿತ್ತಾದರೂ ಕೇಂದ್ರ ಕೊಟ್ಟಿದ್ದು 500ರಿಂದ 1000 ಕೋಟಿ. ಈ ಬಾರಿ ಪ್ರವಾಹದಿಂದ 6 ಸಾವಿರ ಕೋಟಿ ನಷ್ಟವಾಗಿದೆ. ಕೇಂದ್ರ ಸರ್ಕಾರ ತಕ್ಷಣ 3 ಸಾವಿರ ಕೋಟಿ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಹೀಗಾಗಿ ಈ ಬಾರಿ ಕೇಂದ್ರ ಯಾವ ನಿಲುವು ತಾಳಲಿದೆ ಎಂಬುದನ್ನು ಕಾದು ನೋಡಬೇಕು.

Leave a Reply