ಸಂತ್ರಸ್ತರ ಎದುರು ಬಯಲಾಗುತ್ತಿದೆ ಬಿಜೆಪಿ‌ ನಾಯಕರ ಅಸಲಿ ಬಣ್ಣ..!

ಡಿಜಿಟಲ್ ಕನ್ನಡ ಟೀಮ್:

ಕಷ್ಟ ಹೇಳಲು ಬಂದ ಪ್ರವಾಹ ಸಂತ್ರಸ್ತರ ಮೇಲೆ ಬಿಜೆಪಿ ನಾಯಕ ಹಾಗೂ ಸ್ಥಳೀಯ ಶಾಸಕ ಗೋವಿಂದ ಕಾರಜೋಳ ಗದರಿದ ಘಟನೆ ಶನಿವಾರ ಸಂಜೆ ನಡೆದಿದೆ.

ಮುಧೋಳದ ಬಿಕೆ ಬನಿ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಪರಿಶೀಲನೆ ಸಂದರ್ಭದಲ್ಲಿ ಗ್ರಾಮಸ್ಥರ ಗುಂಪು ಅವರ ಬಳಿ ಸಮಸ್ಯೆ ಹೇಳಿಕೊಳ್ಳಲು ಮುಂದಾದರು. ಆಗ ಗೋವಿಂದ ಕಾರಜೋಳ ಅವರು ಮಾತನಾಡುವ ಸಂದರ್ಭದಲ್ಲಿ ಸ್ಥಳೀಯ ವ್ಯಕ್ತಿ ಮಧ್ಯೆ ಮಾತನಾಡಿದಾಗ ಕೋಪಗೊಂಡ ಶಾಸಕರು, ಸುಮ್ಮನೆ ಇರುವಂತೆ ಗದರಿದರು. ಈ ವೇಳೆ ಸ್ಥಳೀಯರು ದೊಡ್ಡವರು ಮಾತನಾಡುತ್ತಾರೆ ಎಂದು ಹೇಳಿದಾಗ, ‘ನಮ್ಮ ಸಮಸ್ಯೆ ಹೇಳಿಕೊಳ್ಳಲುವಾಗ ದೊಡ್ಡವರು ಸಣ್ಣವರು ಎಂದು ನೋಡಬೇಕೇ?’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು ವಿಡಿಯೋದಲ್ಲಿ ದಾಖಲಾಗಿದೆ.

ಮೊನ್ನೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಮುಂದಾದವರ ಮೇಲೆ ಪೊಲೀಸರು ಲಾಠಿ ಬೀಸಿದ್ದು, ಮೊಣಕಾಲುದ್ದ ನೀರಲ್ಲಿ ರೇಣುಕಾಚಾರ್ಯ ತೆಪ್ಪ ಸಾಗಿಸುವ ನಾಟಕ, ಈಗ ಗೋವಿಂದ ಕಾರಜೋಳ ಅವರ ಗದರಿಕೆ ಪ್ರಕರಣಗಳು ಸರ್ಕಾರ ಪ್ರವಾಹ ಪರಿಸ್ಥಿತಿ ಹಾಗೂ ಸಂತ್ರಸ್ತರನ್ನು ನಿಭಾಯಿಸುವಲ್ಲಿ ಎಡವುತ್ತಿದೆ ಎಂಬುದನ್ನು ಸಾರಿ ಹೇಳುತ್ತಿದೆ. ಇದು ಸಹಜವಾಗಿ ಬಿಜೆಪಿ ಸರ್ಕಾರದ ಘನತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

Leave a Reply